- * ಸಂಕಷ್ಟ ಸೂತ್ರ ರೂಪಿಸಲು ಕೇಂದ್ರಕ್ಕೆ ಒತ್ತಡ ಹೇರಲು ಸಲಹೆ
ಬೆಂಗಳೂರು: ತಮಿಳುನಾಡಿಗೆ ಹದಿನೈದು ದಿನಗಳಕಾಲ ಪ್ರತಿ ದಿನ 3,500 ಕ್ಯೂಸೆಕ್ಸ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಅವೈಜ್ಞಾನಿಕವಾಗಿದೆ. ಹಾಗಾಗಿ ನೀರು ಹರಿಬೇಡಿ ಎಂದು ಕರ್ನಾಟಕ ವಿಕಾಸ ರಂಗ ಸರ್ಕಾರವನ್ನು ಒತ್ತಾಯಿಸಿದೆ.
ಮಳೆ ಇಲ್ಲದ ರಾಜ್ಯದಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನೀರು ಇಲ್ಲದೆ ರೈತರು ಬೆಳೆ ಬೆಳೆಯಲಾಗದೆ ಪರಿತಪಿಸುತ್ತಿದ್ದಾರೆ. ಇದರಿಂದ ಬೆಂಗಳೂರು ಸೇರಿ ಇತರೆಡೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದ್ದು, ಸಂಕಷ್ಟದ ಸ್ಥಿತಿ ಎದುರಾಗಲಿದೆ. ಹಾಗಾಗಿ ಸಾಧ್ಯವಾದರೆ ಮತ್ತೊಮ್ಮೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮೇಲ್ಮನವಿ ಸಲ್ಲಿಸಲಿ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಮನವಿ ಮಾಡಿದ್ದಾರೆ.
ಸಂಕಷ್ಟ ಸೂತ್ರಕ್ಕೆ ಒತ್ತಾಯ:
ಮಳೆ ಬಾರದ ಸಂದರ್ಭದಲ್ಲಿ ನೀರು ಹರಿಸುವ ಕ್ರಮದ ಬಗ್ಗೆ ಅಂತಿಮ ತೀರ್ಪಿನಲ್ಲಿ ಸ್ಪಷ್ಟಪಡಿಸಿಲ್ಲ. ಆದ್ದರಿಂದ ಮಳೆ ಇಲ್ಲದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ಸಂಕಷ್ಟ ಸೂತ್ರ ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.