BY Vijayendra > ಸಿಎಂ ವಿಜಯ್‌ಗೆ ವಿಜಯೇಂದ್ರ ಪತ್ರ!
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ಸೌಹಾರ್ದಯುತವಾಗಿ ನೆರೆ ರಾಜ್ಯಗಳ ಬಾಂಧವ್ಯವನ್ನು ವೃದ್ಧಿಸುವಂತೆ ಹಾಗೂ ಕಾವೇರಿ ಮತ್ತು ಮೇಕೆದಾಟು ವಿಷಯಗಳಲ್ಲಿ ಉದಾರತೆ ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡು, ದೇವಾಲಯಗಳ ನಾಡು ಮತ್ತು ಅಪಾರ ಸಾಂಸ್ಕೃತಿಕ ಸಮೃದ್ಧಿಯ ನಾಗರಿಕತೆಯಾಗಿದ್ದು, ಶತಮಾನಗಳಿಂದಲೂ ಕರ್ನಾಟಕದೊಂದಿಗೆ ಆಳವಾದ ಹಾಗೂ ಸುದೀರ್ಘ ಬಾಂಧವ್ಯವನ್ನು ಹಂಚಿಕೊಂಡಿದೆ. ನಮ್ಮದು ಹಂಚಿಕೆಯ ಇತಿಹಾಸ, ಸಂಸ್ಕೃತಿ, ವಾಣಿಜ್ಯ ಮತ್ತು ಜನಗಳ ನಡುವಿನ ಬೆಚ್ಚಗಿನ ಬಾಂಧವ್ಯದಿಂದ ಬಂಧಿಸಲ್ಪಟ್ಟ ಎರಡು ನೆರೆ ರಾಜ್ಯಗಳಾಗಿವೆ.
ಕರ್ನಾಟಕ ಮತ್ತು ತಮಿಳುನಾಡು ಸಹೋದರ ರಾಜ್ಯಗಳಂತೆ ಜೀವಿಸಿದ್ದು, ಪರಸ್ಪರ ಗೌರವ ಮತ್ತು ಸೌಹಾರ್ದತೆಯೇ ನಮ್ಮ ಸಂಬಂಧದ ಅಡಿಪಾಯವಾಗಿದೆ. ಕೋಟ್ಯಂತರ ತಮಿಳರು ಕರ್ನಾಟಕವನ್ನು, ವಿಶೇಷವಾಗಿ ಬೆಂಗಳೂರನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ರಾಜ್ಯದ ಗಮನಾರ್ಹ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅದೇ ಪ್ರಮಾಣದಲ್ಲಿ, ತಮಿಳುನಾಡಿನಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಕನ್ನಡಿಗರು ನಿಮ್ಮ ರಾಜ್ಯದ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಿದ್ದಾರೆ. ಈ ಪರಸ್ಪರ ಅವಲಂಬನೆಯು ರಾಜ್ಯ ಗಡಿಗಳನ್ನು ಮೀರಿದ ಜನರ ನಡುವಿನ ಆಳವಾದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ಏನಿದು ಬಿಎಸ್‌ವೈ-ಕರುಣಾನಿಧಿ ಫಾರ್ಮುಲಾ..?
ನೆರೆ ರಾಜ್ಯಗಳಾಗಿ ನಮಗಿಬ್ಬರಿಗೂ ಭಿನ್ನಾಭಿಪ್ರಾಯಗಳು ಅನಿವಾರ್ಯ. ಆದರೆ ನಾವು ಅವುಗಳನ್ನು ಹೇಗೆ ಪರಿಹರಿಸುತ್ತೇವೆ ಎಂಬುದು ಮುಖ್ಯ. ಬೆಂಗಳೂರಿನಲ್ಲಿದ್ದ ತಿರುವಳ್ಳುವರ್ ಪ್ರತಿಮೆಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಯು ಅಂತಿಮವಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜತಾಂತ್ರಿಕ ಪರಿಣತಿ ಹಾಗೂ ತಮಿಳುನಾಡಿನ ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಉದಾರವಾದಿ ನಿಲುವಿನಿಂದ ಬಗೆಹರಿಯಿತು. ಜನರ ವಿಶಾಲ ಹಿತಾಸಕ್ತಿಗಳು ಮೇಲುಗೈ ಸಾಧಿಸಿದಾಗ ಕಷ್ಟಕರವಾದ ಸಮಸ್ಯೆಗಳನ್ನು ಸಹ ಹೇಗೆ ಪರಿಹರಿಸಬಹುದು ಎಂಬುದಕ್ಕೆ ಅವರ ಪರಿಪಕ್ವತೆಯೇ ಸಾಕ್ಷಿ.
ಕಾವೇರಿ ನೀರು ನಿರ್ವಹಣೆ ವಿಚಾರವಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲು ನೀವು ಶೀಘ್ರದಲ್ಲೇ ನಮ್ಮ ಬೆಂಗಳೂರಿಗೆ ಭೇಟಿ ನೀಡುತ್ತಿದ್ದೀರಿ ಎಂದು ತಿಳಿದುಬಂದಿದೆ. ಈ ಚರ್ಚೆಯನ್ನು ಅದೇ ರಾಜತಾಂತ್ರಿಕ ಸೌಹಾರ್ದತೆ ಹಾಗೂ ಮುಖ್ಯವಾಗಿ ಕರ್ನಾಟಕದ ರೈತರು ಮತ್ತು ನಾಗರಿಕರ ಬಗ್ಗೆ ಅನುಕಂಪದೊಂದಿಗೆ ನಡೆಸಬೇಕೆಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೋರುತ್ತೇನೆ.
ರೈತರ ಕಾಳಜಿ ಕಡೆಗಣಿಸಲು ಸಾಧ್ಯವಿಲ್ಲ ಎಂದ ಬಿವೈವಿ!..
ಬೆಂಗಳೂರು ಮತ್ತು ಕಾವೇರಿ ಕೊಳ್ಳದ ಹಲವಾರು ನಗರಗಳ ಕೋಟ್ಯಂತರ ಜನರಿಗೆ ಕಾವೇರಿ ಜೀವನಾಡಿಯಾಗಿದೆ. ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರು ಮತ್ತು ತಮಿಳರು ಇಬ್ಬರೂ ತಮ್ಮ ಕುಡಿಯುವ ನೀರಿನ ಅಗತ್ಯಗಳಿಗಾಗಿ ಕಾವೇರಿಯನ್ನೇ ನೆಚ್ಚಿಕೊಂಡಿದ್ದಾರೆ. ಅನಿಶ್ಚಿತ ಮುಂಗಾರಿನಿಂದಾಗಿ ರೈತರು ಹಾಗೂ ನಾಗರಿಕರು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ, ಅವರ ಕಾಳಜಿಗಳನ್ನು ಕಡೆಗಣಿಸಲು ಸಾಧ್ಯವಿಲ್ಲ.
ಮೇಕೆದಾಟು ಯೋಜನೆಯನ್ನು ಸಹಕಾರದ ಮನೋಭಾವದಿಂದ ನೋಡಬೇಕೆಂದು ನಾನು ನಿಮಗೆ ಮನವಿ ಮಾಡುತ್ತೇನೆ. ಈ ಯೋಜನೆಯು ತಮಿಳುನಾಡಿನ ನ್ಯಾಯಸಮ್ಮತ ನೀರಿನ ಅಗತ್ಯಗಳಿಗೆ ಧಕ್ಕೆ ತರದೆ, ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಗಮನಾರ್ಹವಾಗಿ ಪೂರೈಸಬಲ್ಲದು. ಈ ಯೋಜನೆಗೆ ನಿಮ್ಮ ಬೆಂಬಲವು ನಮ್ಮೆರಡು ರಾಜ್ಯಗಳ ನಡುವಿನ ಸಹಕಾರದ ಶಕ್ತಿಯುತ ಸಂಕೇತವಾಗಬಹುದು.
ತಮಿಳುನಾಡಿನ ಹಿತಾಸಕ್ತಿಯನ್ನು ಗೌರವಿಸುವ ಜೊತೆಗೆ ಕರ್ನಾಟಕದ ನೈಜ ಹಿತಾಸಕ್ತಿಯನ್ನು ರಕ್ಷಿಸುವ ರಾಜತಾಂತ್ರಿಕ ನಿಲುವನ್ನು ನೀವು ತಳೆಯುತ್ತೀರಿ ಮತ್ತು ನಮ್ಮೆರಡು ರಾಜ್ಯಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಬಲಪಡಿಸಲು ನೆರವಾಗುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ಕಾವೇರಿಯು ನಮ್ಮ ಜನರನ್ನು ವಿಭಜಿಸುವ ಬದಲು ಒಗ್ಗೂಡಿಸಲಿ ಎಂದು ತಮ್ಮ ಸುಧೀರ್ಘವಾದ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.