‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮವು
ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮವು ವೀರ ಯೋಧರ ಶೌರ್ಯ ಮತ್ತು ರಾಷ್ಟ್ರಭಕ್ತಿಯ ಸಂದೇಶವನ್ನು ಸಾರ್ವಜನಿಕರಿಗೆ ಸಾರಿತು.
ಹುತಾತ್ಮ ಸೇನಾನಿಗಳ ಸ್ಮರಣಾರ್ಥ ಅಂಗವಾಗಿ ಏರ್ಪಡಿಸಲಾಗಿದ್ದ 3 ಕಿಮೀ ವಾಕಥಾನ್‌ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ‘ಭಾರತ್ ವಾತಾ ಕಿ ಜೈ’, ‘ವಂದೇ ವಾತರಂ’ಮತ್ತು ‘ಜೈ ಹಿಂದ್’ ದೇಶಭಕ್ತಿ ಘೋಷಣೆಗಳನ್ನು ಮೊಳಗಿಸಿದರು. ದೇಶಭಕ್ತಿ ಗೀತೆಯೊಂದಿಗೆ ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು 250 ಅಡಿ ಉದ್ದದ ತಿರಂಗ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಭಾರತೀಯ ಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನಕ್ಕೆ ಗೌರವ ನಮನ ಸಲ್ಲಿಸಲಾಯಿತು.ಬಳಿಕ, ‘ಕಾರ್ಗಿಲ್ ವಿಜಯ್ ದಿವಸ್’ ಸಭಾ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಸಂಸದ ಡಾ.ಸಿ.ಎನ್. ಮಂಜುನಾಥ್ ಚಾಲನೆ ನೀಡಿದರು. ವೀರ ಯೋಧರ ಶೌರ್ಯ ಸ್ಮರಿಸಿ ರಾಷ್ಟ್ರಭಕ್ತಿಯ ಸಂದೇಶ ಸಾರುವ ಮೂಲಕ ಕಾರ್ಗಿಲ್ ವಿಜಯದ ಮಹತ್ವ, ಭಾರತೀಯ ಸೇನೆಯ ಶೌರ್ಯ ಹಾಗೂ ದೇಶಭಕ್ತಿ ಕುರಿತು ಪ್ರೇರಣಾದಾಯಕವಾಗಿ ಸಂಸದರು ಭಾಷಣ ಮಾಡಿದರು.
ಇದೇ ವೇಳೆ ಸೈನಿಕರನ್ನು ಸನ್ಮಾನಿಸಲಾಯಿತು.ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ ಡ್ಯೆುಟಿ ರಿಜಿಸ್ಟರ್ ಮತ್ತು ಸಪ್ತಗಿರಿ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಚರ್ಯ ಡಾ.ತುಳಸೀದಾಸ್, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಛೇರ್ಮನ್ ಡಾ.ಎಂ.ಆರ್.ಹುಲಿನಾಯ್ಕರ್, ಸಿದ್ದಿಬಯೋ ಎಂಡಿ ಎನ್. ಆರ್.ಅಕ್ಷಯ್, ವಿಆರ್‌ಎಲ್ ಮೀಡಿಯಾ ಪ್ರೈ.ಲಿ.ಉಪಾಧ್ಯಕ್ಷ ಕೆ.ಆರ್.ಅರುಣ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಮತ್ತಿತರರಿದ್ದರು.
ಯಾವುದೇ ದೇಶ ಆಕ್ರಮಣ ಮಾಡಿದರೆ ಗೆಲ್ಲುತ್ತೇವೆ:
ಕಾರ್ಗಿಲ್ ಯುದ್ಧವು ಭಾರತದ ಮಿಲಿಟರಿ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದರೆ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಿಂದ ದೇಶದ ರಕ್ಷಣಾ ಶಕ್ತಿಯನ್ನು ಇಡೀ ಜಗತ್ತು ಮೆಚ್ಚಿಗೊಂಡಿದೆ. ಹಾಗಾಗಿ, ವಿಶ್ವದ ಯಾವ ರಾಷ್ಟ್ರವು ನಮ್ಮ ಮೇಲೆ ಆಕ್ರಮಣ ಮಾಡಿದರೆ ನಾವು ಗೆಲ್ಲುತ್ತೇವೆ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಕಾರ್ಗಿಲ್ ಯುದ್ಧ ಬಹಳ ವಿಶೇಷವಾದದ್ದು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಭಾರತದ ಸೈನಿಕರು ಕೆಳಗಡೆ ಮತ್ತು ಪಾಕಿಸ್ತಾನದ ಸೈನಿಕರು ಮೇಲುಗಡೆ ಇದ್ದರು. ಪ್ರತಿಕೂಲ ವಾತಾವರಣದಲ್ಲಿ ಯುದ್ಧ ಮಾಡುವುದು ಸುಲಭವಲ್ಲ. ಕೊರೆಯುವ ಚಳಿ,ಮಂಜಿನಲೂ ಸೈನಿಕರು ಮತ್ತು ವಾಯುಸೇನೆ ಜಂಟಿಯಾಗಿ ಶತ್ರುಗಳನ್ನು ಸದೆಬಡಿಯಿತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ, ಪ್ರಚಂಡ ವಿಜಯ ಸಾಧಿಸಿತ್ತು. ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ತಾಣಗಳನ್ನು ಕ್ಷಣಾರ್ಧದಲ್ಲೇ ಧ್ವಂಸ ಮಾಡಲಾಯಿತು. ಈ ಮೂಲಕ ಬ್ರಹ್ಮೋಸ್ ಮಿಸೈಲ್ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಯಿತು ಎಂದರು. ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಶಕ್ತಿ, ದೇಶದ ರಕ್ಷಣಾ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಯಿತು. ಆತ್ಮರಕ್ಷಣೆಗೆ ಧಕ್ಕೆ ಬಂದಾಗ ಮಾತ್ರ ನಮ್ಮ ದೇಶ, ಶತ್ರುಗಳ ಮೇಲೆ ಯುದ್ಧ ಮಾಡುತ್ತದೆ ಹೊರತು ಪ್ರಚೋದನೆಗಾಗಿ ಯುದ್ಧ ಮಾಡುವುದಿಲ್ಲ ಎಂದರು.
ರಕ್ಷಣಾ ಕ್ಷೇತ್ರದಲ್ಲಿ ನಮ್ಮ ದೇಶವು ಹಲವು ಸುಧಾರಣೆ ಕಂಡಿದೆ. ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು, ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಮತ್ತು ಆಧುನೀಕರಣಕ್ಕೆ ಬರೋಬ್ಬರಿ 8 ಲಕ್ಷ ಕೋಟಿ ರೂ.ಅನುದಾನ ಕೊಟ್ಟಿದೆ.‘ಆತ್ಮನಿರ್ಭರ ಭಾರತ’ ಹಾಗೂ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿ ಭಾರತವು ಶೇ.30 ಯುದ್ಧೋಪಕರಣಗಳು, ಯುದ್ಧವಿಮಾನಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ಗಳು, ಯುದ್ಧನೌಕೆಗಳು ಮತ್ತು ಬ್ರಹ್ಮೋಸ್ ಕ್ಷಿಪಣಿ ಸೇರಿ ಅನೇಕ ಯುದ್ಧ ಸಾಮಗ್ರಿ ತಯಾರಿಸುತ್ತಿದೆ. ಕೆಲವು ಮಿಸೈಲ್‌ಗಳನ್ನು ಉತ್ಪಾದಿಸಿ ಬೇರೆ ದೇಶಕ್ಕೆ ರಫ್ತು ಮಾಡುವ ಹಂತಕ್ಕೆ ನಾವು ಬೆಳೆದಿದ್ದೇವೆ ಎಂದು ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟಿಡ್‌ಗೆ( ಎಚ್‌ಎಎಲ್) 97 ಫೈಟರ್ ಜಟ್ ತಯಾರಿಸಲು ಕೇಂದ್ರವು 63 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ದೇಶದ ಸುತ್ತಮುತ್ತ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದಂತಹ ಶತ್ರು ರಾಷ್ಟ್ರಗಳಿವೆ. ಇಂತಹ ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಲು ನಮ್ಮ ದೇಶವು ಬಲಿಷ್ಠವಾಗಿದೆ ಎಂದರು.
‘ವಿಜಯವಾಣಿ’ ಸತತವಾಗಿ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು. ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಪ್ರತಿಯೊಬ್ಬರೂ ಗಟ್ಟಿಯಾಗಿ ಅಳವಡಿಸಿಕೊಳ್ಳುವುದು ಅಗತ್ಯವಿದೆ.