ನಾಡಿನ ಹೆಸರಾಂತ ಯುವ ಕಲಾವಿದರು ಸ್ವರ-ಲಯಗಳ ಜುಗಲ್ಬಂದಿ  
ರಾಜ್ಯ

ಹೊಸಪೇಟೆಯಲ್ಲಿ ವಿಜಯವಾಣಿ ಸಂಗೀತ ಸಂಜೆ ಇಂದು

ಪ್ರಮುಖ ಮುಖ್ಯಾಂಶಗಳು

  • ಸ್ವರ-ಲಯಗಳ ಸಮ್ಮಿಲನ
  • ಭೈರವ್ ಬ್ಯಾಂಡ್ ಫ್ಯೂಷನ್ ಜುಗಲ್ಬಂದಿ ವೈಭವ
  • ಹೊಸಪೇಟೆಯ ಎಂಎಸ್‌ಪಿಎಲ್ ಬಲ್ಡೋಟಾ ಸಂಸ್ಥೆ, ಕಂಪ್ಲಿ ಮತ್ತು ಕಾನಾಮಡುಗುವಿನ ಸ್ಫೂರ್ತಿ ನವೋದಯ ತರಬೇತಿ ಕೇಂದ್ರ ಹಾಗೂ ಹೊಸಪೇಟೆಯ ಶ್ರೀ ಗೋವಿಂದಂ ಆಕ್ಟಿವಿಟಿ ಹಬ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗ
ಹೊಸಪೇಟೆ: ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿಯಿಂದ ಹೊಸಪೇಟೆಯ ಎಂಎಸ್‌ಪಿಎಲ್ ಬಲ್ಡೋಟಾ ಸಂಸ್ಥೆ, ಕಂಪ್ಲಿ ಮತ್ತು ಕಾನಾಮಡುಗುವಿನ ಸ್ಫೂರ್ತಿ ನವೋದಯ ತರಬೇತಿ ಕೇಂದ್ರ ಹಾಗೂ ಹೊಸಪೇಟೆಯ ಶ್ರೀ ಗೋವಿಂದಂ ಆಕ್ಟಿವಿಟಿ ಹಬ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮೇ 30ರಂದು ನಗರದಲ್ಲಿ ಅಪೂರ್ವ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿ ಸಲಾಗಿದೆ. 
ಅಂದು ಸಂಜೆ ಐದಕ್ಕೆ ಇಲ್ಲಿನ ಪಟೇಲ್ ನಗರದಲ್ಲಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಹೆಸರಾಂತ ಯುವ ಕಲಾವಿದರು ಸ್ವರ-ಲಯಗಳ ಜುಗಲ್ಬಂದಿ ಪ್ರಸ್ತುತಪಡಿಸಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಸಂಗೀತ ಸಂಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್., ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್., ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತದ ಆಳ ಪರಂಪರೆಯನ್ನು ಆಧುನಿಕ ಜಾಗತಿಕ ಸಂಗೀತದ ಧ್ವನಿಗಳೊಂದಿಗೆ ಸಂಯೋಜಿಸುವ ಪ್ರಸಿದ್ಧ ಇಂಡಿಯನ್ ಫ್ಯೂಷನ್ ಸಂಗೀತ ಬಳಗವಾದ ಭೈರವ್ ಬ್ಯಾಂಡ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. 
ರಾಗಸಂಗೀತದ ಮೆಲೋಡಿ ಹಾಗೂ ಇಂಪ್ರೂವೈಸೇಷನ್ ಶೈಲಿಯಲ್ಲಿ ನೆಲೆಸಿರುವ ಈ ಬಳಗವು, ಪರಂಪರೆ ಮತ್ತು ಹೊಸತನಗಳ ನಡುವೆ ಒಂದು ಜೀವಂತ ಸಂಗೀತ ಸಂವಾದವನ್ನು ಸೃಷ್ಟಿಸಲಿದೆ. ಖ್ಯಾತ ಸಿತಾರ್ ವಾದಕ ಅಂಕುಶ್ ನಾಯಕ್ ನೇತೃತ್ವದ ಭೈರವ್ ಬಳಗವು ಭಾರತೀಯ ಶಾಸ್ತ್ರೀಯ ಸಂಗೀತ, ಜಾಝ್, ವಿಶ್ವಸಂಗೀತ ಮತ್ತು ಆಧುನಿಕ ಫ್ಯೂಷನ್ ಕ್ಷೇತ್ರಗಳ ಅನುಭವ ಹೊಂದಿರುವ ಪ್ರತಿಭಾವಂತ ಕಲಾವಿದರನ್ನು ಒಳಗೊಂಡಿದ್ದು, ಸಭಿಕರಿಗೆ ಅಪೂರ್ವ ಸಂಗೀತದ ಅನುಭವ ನೀಡಲಿದೆ.

ಷಡಜ್ ಗೋಡ್ಖಿಂಡಿ (ಬಾನ್ಸುರಿ)

ದೇಶದ ಅಪ್ರತಿಮ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಸುಪುತ್ರರಾದ ಇವರು, ಗೋಡ್ಖಿಂಡಿ ಸಂಗೀತ ಪರಂಪರೆಯ ಮೂರನೇ ತಲೆಮಾರಿನ ಕಲಾವಿದರಾಗಿದ್ದಾರೆ. ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಅವರ ಮೊಮ್ಮಗನಾದ ಷಡಜ್, ತಮ್ಮ ಎರಡನೇ ವಯಸ್ಸಿನಲ್ಲೇ ಬಾನ್ಸುರಿ ಕಲಿಯಲಾರಂಭಿಸಿ, ಮೂರನೇ ವಯಸ್ಸಿಗೆ ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾದ ಇವರು ಭಾರತ, ಅಮೆರಿಕ, ಹಾಂಗ್ ಕಾಂಗ್, ಕತಾರ್ ಹಾಗೂ ಒಮಾನ್ ದೇಶಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಅಂಕುಶ್ ಎನ್. ನಾಯಕ್ (ಸಿತಾರ್)

ನಾಡಿನ ಖ್ಯಾತ ಯುವ ಸಂಗೀತಗಾರರಾದ ಇವರು ಸಂಗೀತ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಹುಮುಖ ಪ್ರತಿಭೆ. ಮೂಲತಃ ಮಂಗಳೂರಿನವರಾದ ಇವರು ಶಿಕ್ಷಣ ತಜ್ಞ ಪ್ರೊ. ನರೇಂದ್ರ ಎಲ್. ನಾಯಕ್ ಮತ್ತು ಡಾ. ಉಷಾ ಪ್ರಭಾ ಅವರ ಪುತ್ರ. ತಮ್ಮ ಒಂಬತ್ತನೇ ವಯಸ್ಸಿನಲ್ಲಿಯೇ ಧಾರವಾಡ ಘರಾಣೆಯ ಆರನೇ ತಲೆಮಾರಿನ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರಲ್ಲಿ ಸಂಗೀತ ಅಭ್ಯಾಸ ಆರಂಭಿಸಿದರು. ಆನಂತರ ಕೋಲ್ಕತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಪ್ರಸಿದ್ಧ ಸರೋದ್ ವಾದಕ ಪಂ. ಬುದ್ಧದೇವ್ ದಾಸ್ ಗುಪ್ತಾ ಮಾರ್ಗದರ್ಶನ ಪಡೆದರು. ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆ-2009ರಲ್ಲಿ ಪ್ರಥಮ ಬಹುಮಾನ ಗಳಿಸಿರುವ ಇವರು ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿದ್ದಾರೆ. ಭಾರತ ಮಾತ್ರವಲ್ಲದೆ ಅಮೆರಿಕ, ಸಿಂಗಾಪುರ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಸಿದ್ಧಾರ್ಥ ಬೆಳ್ಮಣ್ಣು (ಗಾಯನ)

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಉದಯೋನ್ಮುಖ ಯುವ ಗಾಯಕರಲ್ಲಿ ಇವರು ಪ್ರಮುಖರು. ಕಾರ್ಕಳದಲ್ಲಿ ಜನಿಸಿದ ಇವರು ಆರಂಭದಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿ, ಬಳಿಕ ಪಿ.ಆರ್. ಮಂಜುನಾಥ್ ಹಾಗೂ ಹೆಸರಾಂತ ಗಾಯಕ ಪಂ. ವಿನಾಯಕ ತೊರವಿ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿರುವ ಇವರು ಫೋರ್ಬ್ಸ್ 30 ಅಂಡರ್ 30 (2021) ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಸೇರಿದಂತೆ ಜರ್ಮನಿ, ಬೆಲ್ಜಿಯಂ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳಲ್ಲಿ ಕಾರ್ಯಕ್ರಮ ನೀಡಿದ್ದು, ಕನ್ನಡ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿಯೂ ಛಾಪು ಮೂಡಿಸಿದ್ದಾರೆ.

ಕಾರ್ತಿಕ್ ಮಣಿ (ಡ್ರಮ್ಸ್)

ಸಮಕಾಲೀನ ಡ್ರಮ್ಮಿಂಗ್ ಶೈಲಿಗಳನ್ನು ಭಾರತೀಯ ಲಯ ಪರಂಪರೆಯೊಂದಿಗೆ ಸಂಯೋಜಿಸುವ ಪ್ರತಿಭಾವಂತ ಡ್ರಮ್ಮರ್ ಆಗಿರುವ ಇವರ ಶಕ್ತಿಯುತ ಹಾಗೂ ಡೈನಾಮಿಕ್ ಶೈಲಿಯು ಭೈರವ್ ಸಂಗೀತಕ್ಕೆ ವಿಶಿಷ್ಟ ಶಕ್ತಿ ತುಂಬಲಿದೆ.

ವಿನೋದ್ ಶ್ಯಾಮ್ ಅನೂರ್ (ಮೃದಂಗ)

ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಆಧುನಿಕ ಫ್ಯೂಷನ್ ಸಂಗೀತ ಎರಡರಲ್ಲೂ ವಿಶಿಷ್ಟ ಛಾಪು ಮೂಡಿಸಿರುವ ಇವರು ಲಯದ ಮೇಲಿನ ಅಪಾರ ಹಿಡಿತ ಹಾಗೂ ಸೂಕ್ಷ್ಮ ನುಡಿಸಾಣಿಕೆಗೆ ಹೆಸರಾಗಿದ್ದಾರೆ.

ರಾಜೇಶ್ ಭಾಗವತ್ (ತಬಲಾ/ಪರ್ಕಷನ್)

ಭಾರತೀಯ ಲಯ ಪರಂಪರೆ ಯಲ್ಲಿ ಪರಿಣತಿ ಹೊಂದಿರುವ ಇವರ ಸೂಕ್ಷ್ಮ ಲಯ ಸಂವಾದ ಮತ್ತು ರಿದ್ಮಿಕ್ ವೈವಿಧ್ಯತೆಯು ಈ ಬಳಗದ ಸಂಗೀತವನ್ನು ಮತ್ತಷ್ಟು ಸಮೃದ್ಧಗೊಳಿಸಲಿದೆ.

ಸಂಜಯ್ ಆರ್.ಎಸ್. (ಕೀ ಬೋರ್ಡ್)

ಹೆಸರಾಂತ ವಾದಕ ಹಾಗೂ ಸಂಗೀತ ಸಂಯೋಜಕರಾದ ಇವರ ಸಂಗೀತದಲ್ಲಿ ಆಧುನಿಕ ಹಾರ್ಮನಿ ಮತ್ತು ಭಾರತೀಯ ಮೆಲೋಡಿಯ ಸಂವೇದನೆಗಳಿದ್ದು, ಶಾಸ್ತ್ರೀಯ ಹಾಗೂ ಫ್ಯೂಷನ್ ಸಂಗೀತ ವಿನ್ಯಾಸಗಳ ಮೂಲಕ ಇಂಪಾದ ಧ್ವನಿ ಸೃಷ್ಟಿಸಲಿದ್ದಾರೆ.

ಹರಿಪ್ರಿಯಾ ನರಸಿಂಹನ್ (ಬಾಸ್ ಗಿಟಾರ್)

ಇವರ ಬಾಸ್ ಗಿಟಾರ್ ವಾದನವು ಲಯ ಮತ್ತು ಹಾರ್ಮನಿಯ ದೃಢವಾದ ನೆಲೆಯನ್ನು ಸೃಷ್ಟಿಸಲಿದ್ದು, ಇವರ ವಿಶಿಷ್ಟ ಶೈಲಿಯು ಭೈರವ್ ಬಳಗದ ಒಟ್ಟಾರೆ ಸಂಗೀತಕ್ಕೆ ಮನಮೋಹಕ ಕಳೆ ನೀಡಲಿದೆ.
"

ಅಂತಾರಾಷ್ಟ್ರೀಯ ಖ್ಯಾತಿಯ ಈ ಕಲಾವಿದರು ಭಾಗವಹಿಸುವ ಅಪೂರ್ವ ಸಂಗೀತ ಸುಧೆಯನ್ನು ಆಸ್ವಾದಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿಜಯವಾಣಿ ಮತ್ತು ಸಹಯೋಗಿ ಸಂಸ್ಥೆಗಳ ಪದಾಧಿಕಾರಿಗಳು ಕೋರಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ : ವಿಜಯ (8884432329) ಅಥವಾ ಗುರುರಾಜ್ (8884432327) ಅವರನ್ನು ಸಂಪರ್ಕಿಸಬಹುದಾಗಿದೆ.