ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಯೋಜನೆಯಡಿ ನಿರ್ಮಿಸಿದ ಅಮೃತ ಸರೋವರದ ವಿಹಂಗಮ ನೋಟ. 
ರಾಜ್ಯ

ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ, ರಾಷ್ಟ್ರೀಯ ಪುರಸ್ಕಾರಕ್ಕೆ ವಿಜಯಪುರ ಜಿಲ್ಲಾ ಪಂಚಾಯಿತಿ ಭಾಜನ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ
  • ವಿಜಯಪುರ ಜಿಲ್ಲೆಯಲ್ಲಿ ಅತ್ಯುತ್ತಮ ಅನುಷ್ಠಾನ
  • ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನ
  • ಜಿಪಂ ಸಿಇಒ ರಿಷಿ ಆನಂದ ಅವರಿಗೆ ಪ್ರಶಸ್ತಿ ಪ್ರದಾನ
ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಯೋಜನೆಯ ಅತ್ಯುತ್ತಮ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ.
ರಾಷ್ಟ್ರಮಟ್ಟದ ದಕ್ಷಿಣದ ರಾಜ್ಯಗಳಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದ್ದು, ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಜಿಪಂ ಸಿಇಒ ರಿಷಿ ಆನಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 25 ಲಕ್ಷ ರೂ. ನಗದು ಬಹುಮಾನ ಕೂಡ ನೀಡಲಾಯಿತು. ಕೇಂದ್ರ ಜಲ ಶಕ್ತಿ ಮಂತ್ರಾಲಯದ ರಾಜ್ಯ ಸಚಿವ ವಿ. ಸೊಮಣ್ಣ ಹಾಗೂ ರಾಜ್ ಭೂಷಣ ಚೌಧರಿ ಸಹ ಪಾಲ್ಗೊಂಡಿದ್ದರು.

ಇತರ ಜಿಲ್ಲೆಗಳಿಗೆ ಮಾದರಿ

ನೀರಿನ ಮೂಲಗಳ ನವೀಕರಣ, ಕೊಳವೆ ಬಾವಿಗಳ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಪ್ರದೇಶ ಅಭಿವೃದ್ಧಿ ಮತ್ತು ತೀವ್ರ ಅರಣ್ಯೀಕರಣ ಕುರಿತು ಈ ಅಭಿಯಾನದ ಮೂಲಕ ಭಾರಿ ಜಾಗೃತಿ ಮೂಡಿಸಲಾಗಿದ್ದು, ಇದರಿಂದ ಜೆಎಸ್‌ಎ-1.0 ಫಲಿತಾಂಶವು ಸುಧಾರಿತ ನೀರಿನ ಸಂರಕ್ಷಣೆಯಾಗಿದೆ. ವಿಜಯಪುರ ಜಿಲ್ಲೆಯು ಜಲಶಕ್ತಿ ಅಭಿಯಾನ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಜತೆಗೆ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ.

211 ಪಂಚಾಯಿತಿಗಳಲ್ಲಿ ಕಾಮಗಾರಿ

ಜಿಲ್ಲೆಯ ಒಟ್ಟು 211 ಗ್ರಾಮ ಪಂಚಾಯಿತಿಗಳಲ್ಲಿ ಜಲ ಶಕ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಜಲ ಶಕ್ತಿ ಅಭಿಯಾನದಡಿ ಜಿಲ್ಲೆಗೆ ಒಟ್ಟು 10000 ಕಾಮಗಾರಿಗಳ ಗುರಿ ನೀಡಲಾಗಿತ್ತು. ಆದರೆ ಗುರಿಗಿಂತ ಅಧಿಕ ಅಂದರೆ 11453 ಕ್ಕೂ ಅಧಿಕ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳ ಮೂಲಕ ಜಿಲ್ಲೆಯಾದ್ಯಂತ ಅನುಷ್ಠಾನ ಮಾಡಲಾಗಿದೆ. ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ, ನಾಲಾ ಹೂಳೆತ್ತುವುದು, ಮಳೆ ನೀರು ಕೊಯ್ಲು ಮತ್ತು ಇತರೆ ನೀರಿನ ಸಂರಕ್ಷಣೆ ಕಾಮಗಾರಿ ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಈ ಅಭಿಯಾನದಡಿ ಕೈಗೆತ್ತಿಕೊಳ್ಳಲಾಗಿದೆ.

ಜಲಮೂಲಗಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳಲ್ಲಿ ನಮ್ಮ ವಿಜಯಪುರ ಜಿಲ್ಲೆ ಉತ್ತಮ ಕಾರ್ಯ ಮಾಡಿದೆ. ಜಲಶಕ್ತಿ ಅಭಿಯಾನ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ವಿಜಯಪುರ ಮೊದಲನೇ ಸ್ಥಾನದಲ್ಲಿದೆ. ಪ್ರಸ್ತುತ ಜಲ ಶಕ್ತಿ ಅಭಿಯಾನದ ಅನುಷ್ಠಾನದಲ್ಲಿ ಜಿಲ್ಲೆಗೆ ಪ್ರಶಸ್ತಿ ದೊರಕಿರುವುದು ಅತೀವ ಸಂತಸ ತಂದಿದೆ. ಈ ಯಶಸ್ಸಿನಲ್ಲಿ ಕಾರಣಿಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಈ ಪ್ರಶಸ್ತಿ ಮಹತ್ತರ ಪಾತ್ರ ವಹಿಸಲಿದೆ.