ವಿಜಯಪುರದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತು ಜನಜಾಗೃತಿಗಾಗಿ ‘ಓಡು ವಿಜಯಪುರ ಓಡು’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ‘ವೃಕ್ಷಥಾನ್ ಹೆರಿಟೇಜ್ ರನ್-2025’ ಯಶಸ್ವಿಯಾಗಿ ಸಂಪನ್ನಗೊಂಡಿತು.
- ವೃಕ್ಷಥಾನ್ ಹೆರಿಟೇಜ್ ರನ್-2025
- ಓಡು ವಿಜಯಪುರ ಓಡು ಘೋಷವಾಕ್ಯ
- ವಿಜಯಪುರದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪನೆ
- 20 ಸಾವಿರಕ್ಕೂ ಅಧಿಕ ಓಟಗಾರರು ಭಾಗಿ
ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತ ಜನಜಾಗೃತಿಗಾಗಿ ‘ಓಡು ವಿಜಯಪುರ ಓಡು’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ‘ವೃಕ್ಷಥಾನ್ ಹೆರಿಟೇಜ್ ರನ್-2025’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ವ್ಯಾಪಕ ಸ್ಪಂದನೆಯೊಂದಿಗೆ ಅಭೂತಪೂರ್ವ ಅನುಭವ ನೀಡಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವೃಕ್ಷಥಾನ್ ಹೆರಿಟೇಜ್ ರನ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. ಸತತ ಐದು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗಿದ್ದ ಈ ವೃಕ್ಷಥಾನ್‌ನ ಆರನೇ ಆವೃತ್ತಿ ವಿಭಿನ್ನವೂ ವಿಶಿಷ್ಟವಾಗಿಯೂ ನೆರವೇರಿತು.
ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹಸಿರು ನಿಶಾನೆ ತೋರಿದರು. ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ ಉದ್ಘಾಟನೆ ನೆರವೇರಿಸಿದರು. ಶಾಸಕ ವಿಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರಾದಿಯಾಗಿ ಅನೇಕ ಮುಖಂಡರು, ವರ್ತಕರು, ಮಠಾಧೀಶರು ಸೇರಿದಂತೆ ಸಾವಿರಾರು ಜನ ಸಾಥ್ ನೀಡಿದರಲ್ಲದೇ ಹೆಜ್ಜೆ ಹಾಕುವ ಮೂಲಕ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಿದರು. ಪೂಜ್ಯ ಮೃತಾನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ ಓಟದ ಮೂಲಕ ಗಮನ ಸೆಳೆದರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದ ಓಟಗಾರರು ಸಂಭ್ರಮದಿಂದ ಹೆಜ್ಜೆಹಾಕಿದರು. ಗೊಂಬೆ ಕುಣಿತ, ಚಿಕ್ಕಹಲಗೆ ಮೇಳ, ಹಲಗೆ, ಕಹಳೆ, ಬ್ಯಾಂಡ್ ಕಲಾವಿದರು ಓಟಗಾರರು ಹುರಿದುಂಬಿಸಿ ಗಮನ ಸೆಳೆದರು. ಪ್ರತಿಶಿಷ್ಟಿತ ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು, ವ್ಯಾಪಾರಸ್ಥರು ವೃಕ್ಷಥಾನ್‌ಗೆ ಕೈಜೋಡಿಸಿದರು.
ಮುಂದಿನ 10 ವರ್ಷಗಳಲ್ಲಿ 5 ಕೋಟಿ ಸಸಿ ನೆಡುವ ದಿವ್ಯ ಸಂಕಲ್ಪ ಮಾಡಲಾಗಿದ್ದು, ಜನತೆಯ ಸಹಕಾರದಿಂದ ಗುರಿ ಮುಟ್ಟಲು ಸಾಧ್ಯ. ಅರಣ್ಯ ಭೂಮಿ ಪ್ರಮಾಣ ಅತ್ಯಂತ ಕಡಿಮೆ ಇದ್ದ ಕಾರಣಕ್ಕಾಗಿ ವೃಕ್ಷಗಳನ್ನು ಬೆಳೆಸುವ ಸಂಕಲ್ಪ ಮಾಡಿ ವೃಕ್ಷಥಾನ್ ಅಭಿಯಾನ ಸ್ವರೂಪದಲ್ಲಿ ಆರಂಭಿಸಲಾಯಿತು. ಇಂದು ಯಶಸ್ವಿಯಾಗಿ ಆರನೇಯ ಬಾರಿಗೆ ಈ ಓಟ ನಡೆಯುತ್ತಿದೆ. ಪರಿಣಾಮವಾಗಿ ಒಂದೂವರೆ ಕೋಟಿ ಸಸಿಗಳನ್ನು ನೆಡಲಾಗಿದ್ದು, ಶೇ.0.17 ರಷ್ಟಿದ್ದ ಅರಣ್ಯ ಪ್ರಮಾಣ ಶೇ.2ಕ್ಕೆ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿಯ ಪರಿಸ ಕಾಳಜಿ ನಿತ್ಯ ನಿರಂತರವಾಗಿರಲಿ. ಈವರೆಗಿನ ಸಾಧನೆಗೆ ಜಿಲ್ಲೆಯ ಜನರ ಸಹಕಾರವೇ ಕಾರಣ.
ಅವಿಸ್ಮರಣೀಯ ಕ್ಷಣ
ಮಾಗಿಯ ಚಳಿ ಲೆಕ್ಕಿಸದೇ ಸಾವಿರಾರು ಜನ ಪಾರಂಪರಿಕ ಓಟದಲ್ಲಿ ಹೆಜ್ಜೆ ಹಾಕುತ್ತಿದ್ದರೆ ತಿಳಿನೀರ ಕೊಳದಂಗಳದಲ್ಲಿ ಕೊಕ್ಕರೆಗಳ ಸಾಲು ಹೊರಟಂತಿತ್ತು. ಹಸಿರು-ಹಳದಿ ವರ್ಣದ ಟೀ-ಶರ್ಟ್ ಧರಿಸಿ ರಸ್ತೆ ಮೇಲೆ ಹಾಕುತ್ತಿದ್ದ ಪ್ರತಿ ಹೆಜ್ಜೆಯ ಸದ್ದು ಕೂಡ ಪರಿಸರ ಜಾಗೃತಿಯ ಸಂದೇಶ ರವಾನಿಸುತ್ತಿತ್ತು. ದಂಡಿಗೆ ಹೊರ ಹಿಂಡನ್ನು ಹುರಿದುಂಬಿಸುವಂತೆ ಜನ ‘ಓಡು ವಿಜಯಪುರ ಓಡು’ ಎಂದು ಪ್ರೇರೇಪಿಸುತ್ತಿತ್ತು. ಯುವಕನೋರ್ವ ತಲೆಯ ಮೇಲೆ ಸಸಿಯನ್ನಿಟ್ಟುಕೊಂಡು ಓಡುತ್ತಾ ಸಾರಿದ ಪರಿಸರ ಸಂರಕ್ಷಣೆಯ ಸಂದೇಶ ಮನಮುಟ್ಟಿತು.
ಸಂಬಾಳ, ಕಹಳೆ, ಬ್ಯಾಂಜೋ ಕಲಾವಿದರು ಓಟಗಾರರನ್ನು ಹುರಿದುಂಬಿಸಿದರು.
ಪುಣೆಯ ಆಸ್ಟಿನ್ ಅವರಿಂದ ಜುಂಬಾ ಡ್ಯಾನ್ಸ್ ಗಮನ ಸೆಳೆಯಿತು. ಪಾಶ್ಚಾತ್ಯ ಸಂಗೀತ, ಗೊಂಬೆ ಕುಣಿತ, ಬ್ಯಾಂಡ್ ವಾದನ, ಫ್ಲವರ್ ಡ್ಯಾನ್ಸ್, ಮೈಲಾರಲಿಂಗೇಶ್ವರ ಕೊರವ ಕುಣಿತ ಹಾಗೂ ಶೃಂಗಾರ ನೃತ್ಯಗಳು ಗಂಧರ್ವ ಲೋಕನವನ್ನೇ ಧರೆಗಿಳಿಸಿದ್ದವು.
ಸಾಧಕರಿಗೆ ಸನ್ಮಾನ
ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಕ್ರೀಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೆಂಗಲಗುತ್ತಿ ಶಿಕ್ಷಕ ಹಣಮಂತ ಕಾತರಕಿ, ವಿಜಯಪುರ ಎಎಸ್‌ಐ ನೌಕರ ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ, ನವಿಮುಂಬೈನ ಓಟಗಾರ ಶ್ರೇಯಸ ಯಶವಂತ ರಾವ ಹಾಗೂ ವಿಜಯಪುರ ನಗರದ ಹೆಡ್ ಕಾನಸ್ಟೇಬಲ್ ಭೀಮಾಶಂಕರ ಮಾಡಗ್ಯಾಳ ಅವರನ್ನು ಸನ್ಮಾನಿಸಲಾಯಿತು.
ಧರ್ಮೋ ರಕ್ಷತಿ ರಕ್ಷತಃ ಎಂಬಂತೆ ವೃಕ್ಷೋ ವೃಕ್ಷತಿ ವೃಕ್ಷತಃ ಎಂದಾಗಬೇಕು. ಅಂದಾಗ ಅರಣ್ಯ ಪ್ರದೇಶ ಹೆಚ್ಚಳವಾಗಲಿದ್ದು, ಸುಂದರ ಪರಿಸರ ನಿರ್ಮಾಣಗೊಳ್ಳಲಿದೆ. ಬರದ ಜಿಲ್ಲೆ ಎನ್ನಿಸಿರುವ ವಿಜಯಪುರದಲ್ಲಿ ಪರಿಸರ ಜಾಗೃತಿಗಾಗಿ ಸಚಿವ ಎಂ.ಬಿ. ಪಾಟೀಲರು ಹಮ್ಮಿಕೊಂಡಿರುವ ವೃಕ್ಷಥಾನ್ ಅತ್ಯಂತ ಶ್ಲಾಘನೀಯವಾದದ್ದು. ನೀರಾವರಿ, ಅರಣ್ಯೀಕರಣ ಹಾಗೂ ಪರಿಸರ ಸಂರಕ್ಷಣೆಗಾಗಿ ಎಂ.ಬಿ. ಪಾಟೀಲರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಗೆ ಎತ್ತರದ ಸಸಿ ನೀಡಬೇಕೆಂಬ ಬೇಡಿಕೆ ಇದೆ. ಶೀಘ್ರದಲ್ಲೇ ಆ ಬೇಡಿಕೆ ಈಡೇರಿಸಲಾಗುವುದು. ಒಟ್ಟು 5 ಲಕ್ಷ ಸಸಿ ಕೊಡಲಾಗುವುದು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಮೇಯರ್ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್. ಚವಾಣ್, ವೃಕ್ಷ ಅಭಿಯಾನ ಪ್ರತಿಷ್ಠಾನದ ಪ್ರಮುಖರಾದ ಮಹಾಂತೇಶ ಬಿರಾದಾರ, ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರಿದ್ದರು.