ವಿಜಯಪುರದ ಜೋರಾಪುರ ಪೇಟೆಯಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಶಿವರುದ್ರ ಬಾಗಲಕೋಟೆ, ರಾಹುಲ್ ಜಾಧವ ಮತ್ತಿತರರಿದ್ದಾರೆ.
- ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
- ಭೂಮಿಪೂಜೆ
ವಿಜಯಪುರ: ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರ ಫಲವಾಗಿ ಸದ್ಯ ವಿಜಯಪುರ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿದೆ. ಜನತೆ ಮುಂದೆಯೂ ಕೂಡ ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವಾದ ಮಾಡಿದರೆ ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.32ರ ವ್ಯಾಪ್ತಿಯ ಜೋರಾಪುರ ಪೇಟೆ ದುರ್ಗಾದೇವಿ ದೇವಸ್ಥಾನದ ಬಳಿ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 20 ಲಕ್ಷ ರೂ. ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಿಸಿದ 10 ಲಕ್ಷ ರೂ.ಗಳ ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಧೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ಸುಸಜ್ಜಿತ ಸಿಸಿ ರಸ್ತೆಗಳು, ಒಳಚರಂಡಿ ನಿರ್ಮಾಣ, ಉದ್ಯಾನ ವನಗಳ ಅಭಿವೃದ್ಧಿ, ರಸ್ತೆಗೆ ಮಹಾಪುರುಷರ ಹೆಸರು ನಾಮಕರಣ, ವೃತ್ತಗಳ ನಿರ್ಮಾಣ, ತರಕಾರಿ ಮಾರುಕಟ್ಟೆ, ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಶಾಲಾ ಕೊಠಡಿಗಳು ಸೇರಿ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರಿಂದ ಅತ್ಯಂತ ಶುದ್ಧ ಗಾಳಿ ಬೀಸುವ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಿವಾಜಿ ವೃತ್ತದಿಂದ ಡಾ. ಬಾಬು ಜಗಜೀವನರಾಮ್ ವೃತ್ತದವರೆಗೆ ಶೀಘ್ರದಲ್ಲೇ ರಸ್ತೆ ಅಗಲೀಕರಣಗೊಳಿಸಿ, ಅನುಷ್ಠಾನಗೊಳಿಸಲು ಅಗತ್ಯವಿರುವ 32 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸದರಿ ರಸ್ತೆ ಆಗಲೀಕರಣದಲ್ಲಿ ಬರುವ ಖಾಸಗಿ ಒಡೆತನದ ಆಸ್ತಿಗಳಿಗೆ ಪರಿಹಾರ ನೀಡಿಯೇ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟೆ ಮಾತನಾಡಿದರು. ಪಾಲಿಕೆ ಸದಸ್ಯ ರಾಹುಲ್ ಜಾಧವ ಮತ್ತಿತರರಿದ್ದರು.