Dr. Anand Sankeshwar | ದುಬೈನಲ್ಲಿ ಸಿಲುಕಿಕೊಂಡಿದ್ದ ವಿಜಯವಾಣಿ ‘ಅಂತಾರಾಷ್ಟ್ರೀಯ ವಿಜಯರತ್ನ’ ಪ್ರಶಸ್ತಿ ಪುರಸ್ಕೃತ 27 ಜನ ಸಾಧಕರು ಸೇರಿ 70 ಮಂದಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬಂದ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅವರ ಪುತ್ರಿ ವೈಷ್ಣವಿ ಸಂಕೇಶ್ವರ ಹಾಗೂ ಹಿತೈಷಿಗಳು, ಬಂಧುಮಿತ್ರರು ಸನ್ಮಾನಿಸಿ ಬರಮಾಡಿಕೊಂಡರು.
ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಸ್ಥಿತಿ | ದುಬೈನಲ್ಲಿ ಸಿಲುಕಿದ್ದ 70 ಜನ
ಹುಬ್ಬಳ್ಳಿ: ಇರಾನ್ ಮೇಲೆ ಇಸ್ರೇಲ್-ಅಮೆರಿಕ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ದುಬೈನಲ್ಲಿ ಸಿಲುಕಿಕೊಂಡಿದ್ದ ವಿಜಯವಾಣಿ ‘ಅಂತಾರಾಷ್ಟ್ರೀಯ ವಿಜಯರತ್ನ’ ಪ್ರಶಸ್ತಿ ಪುರಸ್ಕೃತ 27 ಜನ ಸಾಧಕರು ಸೇರಿ 70 ಮಂದಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ನೇತೃತ್ವದಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ದುಬೈ ಸಮೀಪದ ಫುಜೇರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಶುಕ್ರವಾರ ಮುಂಜಾನೆ ದೆಹಲಿಗೆ ಬಂದಿಳಿದರು. ಅಲ್ಲಿಂದ ಎಲ್ಲರೂ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗೆ ಆಗಮಿಸಿ ತಮ್ಮ ತಮ್ಮ ನಿವಾಸಕ್ಕೆ ಸುರಕ್ಷಿತವಾಗಿ ತಲುಪಿದರು. ದುಬೈನ ವಿಶ್ವವಿಖ್ಯಾತ ವಾಣಿಜ್ಯ ಸಂಕೀರ್ಣ ಬುರ್ಜ್ ಖಲೀಫಾ ಬಳಿಯ ವಿಲೇನಿಯಂ ಹೋಟೆಲ್ನಲ್ಲಿ ಫೆ. 28ರಂದು ನಾಡಿನ 27 ಜನ ಸಾಧಕರಿಗೆ ‘ಅಂತಾರಾಷ್ಟ್ರೀಯ ವಿಜಯರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಡಾ. ಆನಂದ ಸಂಕೇಶ್ವರ ನೇತೃತ್ವದಲ್ಲಿ ಸಾಧಕರು ಸೇರಿ 70 ಜನ ಫೆ. 25ರಂದೇ ದುಬೈಗೆ ತೆರಳಿದ್ದರು.
ಮಾ. 1ರಂದು ಇವರೆಲ್ಲ ವಾಪಸ್ ಬರಬೇಕಿತ್ತು. ಆದರೆ, ಹಠಾತ್ತನೆ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸಿದ್ದರಿಂದ ದುಬೈನಿಂದ ವಿಮಾನ ಸಂಚಾರ ಸ್ಥಗಿತಗೊಂಡವು. ದುಬೈ ವಿಮಾನ ನಿಲ್ದಾಣ ಹಾಗೂ ಬುರ್ಜ್ ಖಲೀಫಾ ಬಳಿಯೇ ಕ್ಷಿಪಣಿ ದಾಳಿಗಳು ನಡೆದಿದ್ದವು. ಇದರಿಂದ ಎಲ್ಲರೂ ಆತಂಕಿತರಾಗಿದ್ದರು. ವಾಪಸ್ ಬರಲು ಸಾಧ್ಯವಾಗದೆ ದುಬೈನಲ್ಲಿಯೇ ಸಿಲುಕಿಕೊಂಡಿದ್ದರು.
ಡಾ. ಆನಂದ ಸಂಕೇಶ್ವರ ಅವರು ತಮ್ಮ ಉನ್ನತ ಮಟ್ಟದ ಸಂಪರ್ಕ ಬಳಸಿ 76 ಆಸನಗಳ ಖಾಸಗಿ ವಿಶೇಷ ವಿಮಾನವೊಂದನ್ನು ಬುಕ್ ಮಾಡಿ ಎಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ತರುವ ಪ್ರಯತ್ನ ಮಾಡಿದರಾದರೂ ವಿಮಾನಯಾನ ಸಚಿವಾಲಯದ ಅನುಮತಿ ಸಿಗಲಿಲ್ಲ. ಈ ಮಧ್ಯೆ ದುಬೈ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಅಷ್ಟು ಸುರಕ್ಷಿತವಾಗಿರಲಿಲ್ಲ. ಸಮೀಪದ ಫುಜೇರಾಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲು ಡಾ. ಆನಂದ ಸಂಕೇಶ್ವರ ಅವರು ವ್ಯವಸ್ಥೆ ಮಾಡಿದ್ದರು. ದುಬೈನಲ್ಲಿ ಇದ್ದಷ್ಟು ದಿನ ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿತ್ತು.
ದುಬೈ ಹೋಟೆಲ್ನಲ್ಲಿ ನಮ್ಮ ಕಾರ್ಯಕ್ರಮ ಇದ್ದ ದಿನ (ಫೆ. 28)ವೇ ಬುರ್ಜ್ ಖಲೀಫಾ ಹತ್ತಿರ ಡ್ರೋನ್ ದಾಳಿ ಆಗಿತ್ತು. ಆದರೆ, ಅಲ್ಲಿಯವರಿಂದ ತಕ್ಷಣ ಮಾಹಿತಿ ಸಿಗಲಿಲ್ಲ. ಬಾಂಬ್ ದಾಳಿ ನಡೆದಿರುವುದು ಮಾರನೇ ದಿನ ಸಾಮಾಜಿಕ ಜಾಲತಾಣದ ಮೂಲಕ ತಿಳಿದು ಬಂತು. ದುಬೈ ವಿಮಾನ ನಿಲ್ದಾಣ ಬಂದ್ ಆಗಿತ್ತು. ಸುಮಾರು 20 ಸಾವಿರ ಜನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಸಂಕಷ್ಟದಲ್ಲಿರುವವರು, ಮಕ್ಕಳನ್ನು ಮತ್ತು ಅವರ ಪಾಲಕರನ್ನು ಅಲ್ಲಿಂದ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ನಾವು ಬುಧವಾರ ಬುಕ್ ಮಾಡಿದ್ದ (ಗುರುವಾರ ತೆರಳಲು) ವಿಶೇಷ ವಿಮಾನ ಸಿಗದ ಕಾರಣ ನಂತರ ನಿರಂತರವಾಗಿ ಫಾಲೋಅಪ್ ಮಾಡಿ ಮತ್ತೊಂದು ವಿಶೇಷ ವಿಮಾನದ ಮೂಲಕ ದೆಹಲಿಗೆ ಬಂದಿಳಿದೆವು ಎಂದು ಡಾ. ಆನಂದ ಸಂಕೇಶ್ವರ ವಿವರಿಸಿದರು.
ಗುರುವಾರ ಸಂಜೆ ಈ ತಂಡ ಫುಜೇರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕೂಡ ಏರ್ಪೋರ್ಟ್ ಸಮೀಪದಲ್ಲೇ ಒಂದು ಕ್ಷಿಪಣಿ ದಾಳಿ ಘಟಿಸಿತ್ತು. ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಡಾ. ಆನಂದ ಸಂಕೇಶ್ವರ ಅವರನ್ನು ಮತ್ತು ಪ್ರಶಸ್ತಿ ಪುರಸ್ಕೃತರು ಮತ್ತವರ ಕುಟುಂಬದವರನ್ನು ಅವರ ಹಿತೈಷಿಗಳು, ಬಂಧು ಮಿತ್ರರು ಸನ್ಮಾನಿಸಿ ಆರತಿ ಬೆಳಗಿ ಬರಮಾಡಿಕೊಂಡರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ವತಿಯಿಂದ ಶಿವಾನಂದ ಮುತ್ತಣ್ಣವರ ಸನ್ಮಾನಿಸಿದರು.
ನಮ್ಮೊಂದಿಗೆ ತೆರಳಿದ್ದ, ದುಬೈನಲ್ಲಿ ಸಿಲುಕಿಕೊಂಡ ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆತರುವ ಜವಾಬ್ದಾರಿ ನನ್ನದಾಗಿತ್ತು. ಈ ಕಾರಣಕ್ಕೆ ಎರಡು ಬಾರಿ ಬುಕ್ ಆಗಿದ್ದ ನನ್ನ ಟಿಕೆಟ್ ರದ್ದು ಮಾಡಿದ್ದೆ. ಎಲ್ಲರನ್ನೂ ವಾಪಸ್ ಕರೆತರುವಲ್ಲಿ ನಾನು ಹಾಗೂ ನಮ್ಮ ತಂಡದವರು ಸಾಕಷ್ಟು ಪ್ರಯತ್ನ ಮಾಡಿದೆವು.
ಡಾ. ಆನಂದ ಸಂಕೇಶ್ವರ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ
ತೂರಿ ಬರುವ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತಾದರೂ ಅವುಗಳ ಅವಶೇಷಗಳು ನಾವಿದ್ದ ವಿಲೇನಿಯಂ ಹೋಟೆಲ್ ಬಳಿ ಬಂದು ಬೀಳುತ್ತಿದ್ದವು. ಫುಜೇರಾ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆಯೇ ಕ್ಷಿಪಣಿ ದಾಳಿ ನಡೆದಿತ್ತು. ಹೋಟೆಲ್ ಕಿಟಕಿ ಹತ್ತಿರ ನಿಲ್ಲಬೇಡಿ, ಬಂಕರ್ ಒಳಗೆ ಹೋಗಿ ಎಂದು ಪದೇಪದೆ ಮೊಬೈಲ್ ಫೋನ್ನಲ್ಲಿ ಸಂದೇಶ ಬರುತ್ತಿತ್ತು. ಅಲ್ಲಿನ ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿಲ್ಲ. ಡಾ. ಆನಂದ ಸಂಕೇಶ್ವರ ಅವರ ಪ್ರಯತ್ನದ ಫಲವಾಗಿ ನಾವು ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದೇವೆ.
ದುಬೈನಲ್ಲಿ ನಾವು ಆತಂಕದಲ್ಲಿಯೇ ಇದ್ದೆವು. ಆದರೆ, ನಮ್ಮನ್ನೆಲ್ಲ ಸುರಕ್ಷಿತವಾಗಿ ಮನೆಗೆ ಮುಟ್ಟಿಸುತ್ತೇವೆ ಎಂದು ಡಾ. ಆನಂದ ಸಂಕೇಶ್ವರ ಅವರು ಧೈರ್ಯ ತುಂಬಿದ್ದರು. ಅವರು ಪ್ರತಿಯೊಬ್ಬರನ್ನೂ ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ನಿಜಕ್ಕೂ ನಮಗೆ ಪುನರ್ಜನ್ಮ ಬಂದಂತಾಗಿದೆ