ನಾಳೆ ಅಂತಾರಾಷ್ಟ್ರೀಯ ಯುವ ದಿನ: ಆತ್ಮವಿಶ್ವಾಸದ ಕೊರತೆ ನೀಗಿಸಿ 150 ಪದಕ ಗೆದ್ದ ಬ್ಯಾಕ್‌ಸ್ಟ್ರೋಕ್ ಈಜುಗಾರ್ತಿಯ ರೋಚಕ ಪಯಣ! Vihitha Nayana Loganathan
- ಬೆಂಗಳೂರಿನ ಯುವ ಈಜುಗಾರ್ತಿ ವಿಹಿತಾ ನಯನಾ ಲೋಗನಾಥನ್ ರೋಚಕ ಸಾಧನೆ
- ಕೋವಿಡ್ ಕಾಲದ ಆತಂಕ ಮತ್ತು ಖಿನ್ನತೆಯನ್ನು ಮೆಟ್ಟಿನಿಂತ ವಿಹಿತಾಳ ಕಥೆ
- ದಿ ಆರ್ಟ್ ಆಫ್ ಲಿವಿಂಗ್ ಇಂಟ್ಯೂಷನ್ ಪ್ರೊಸೆಸ್ ಮೂಲಕ ಮರುಕಳಿಸಿದ ಆತ್ಮವಿಶ್ವಾಸ
- ಕಳೆದ ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 150 ಪದಕಗಳ ಗಳಿಕೆ
- ಭಾರತದ ಅತ್ಯಂತ ವೇಗದ ಮಹಿಳಾ ಬ್ಯಾಕ್‌ಸ್ಟ್ರೋಕ್ ಈಜುಗಾರ್ತಿಯಾಗಿ ಹೊರಹೊಮ್ಮಿದ ವಿಹಿತಾ
ಈ ವರ್ಷ ಅವರು 117 ಪದಕಗಳನ್ನು ಗೆದ್ದಿದ್ದಾರೆ. ಈ ಮಾತು ಕೇಳುತ್ತಿದ್ದಂತೆಯೇ, ಸಭೆಯಲ್ಲಿದ್ದ ಎಲ್ಲರ ದೃಷ್ಟಿಯೂ, ಕುತ್ತಿಗೆಯ ಸುತ್ತಲೂ ಪದಕಗಳ ರಾಶಿಯನ್ನು ಧರಿಸಿಕೊಂಡು ಮೌನವಾಗಿ ನಿಂತಿದ್ದ ಎತ್ತರದ, ಗುಂಗುರು ಕೂದಲಿನ 18 ವರ್ಷದ ಯುವತಿಯ ಕಡೆ ತಿರುಗಿತು. ಅವರ ಪಕ್ಕದಲ್ಲಿ ಸೌಮ್ಯವಾದ ಮಧ್ಯವಯಸ್ಕ ಮಹಿಳೆಯೊಬ್ಬರು, ತಮ್ಮ ಕೈಯಲ್ಲಿದ್ದ ಮತ್ತೊಂದು ದೊಡ್ಡ ಪದಕಗಳ ಗುಚ್ಛವನ್ನು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರಿಗೆ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸೇರಿದ್ದ ಸಭಿಕರಿಗೆ ತೋರಿಸುತ್ತಿದ್ದರು. ಆ ಯುವತಿ ಬೆಂಗಳೂರಿನ ವಿಹಿತಾ ನಯನಾ ಲೋಗನಾಥನ್ ( Vihitha Nayana Loganathan ). ಇಂದು ಅವರು ಭಾರತದ ಅತ್ಯಂತ ವೇಗದ ಮಹಿಳಾ ಬ್ಯಾಕ್‌ಸ್ಟ್ರೋಕ್ ಈಜುಗಾರ್ತಿಯಾಗಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಹೊಳಪಿನ ಹಿಂದೆ ಭಯ, ಕುಸಿತ, ದೃಢವಾದ ಸಂಕಲ್ಪ, ಪುನರ್ನಿರ್ಮಾಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅಂತಃಪ್ರಜ್ಞೆಯ ಒಂದು ಅಸಾಮಾನ್ಯ ಕಥೆಯಿದೆ.
ಕೋವಿಡ್-19 ಎಲ್ಲವನ್ನೂ ಬದಲಿಸಿದಾಗ...
ವಿಹಿತಾ ಈಗಾಗಲೇ ಜೂನಿಯರ್ ರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದರು. ಭರವಸೆಯ ಯುವ ಪ್ರತಿಭೆಯಾಗಿದ್ದ ಅವರನ್ನು ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ (BAC) ನ ತರಬೇತುದಾರರು ಯಶಸ್ವಿ ವೃತ್ತಿಜೀವನ ನಿರ್ಮಿಸುವ ಈಜುಗಾರ್ತಿಯಾಗಿ ನೋಡುತ್ತಿದ್ದರು. ಅದೇ ವೇಳೆ, ನೀರಿನಲ್ಲಿ ಅವರ ಎದುರಾಳಿಗಳು ಅವರನ್ನು ಎಂದಿಗೂ ಹಗುರವಾಗಿ ಪರಿಗಣಿಸುತ್ತಿರಲಿಲ್ಲ. ಎಲ್ಲವೂ ಉತ್ತಮವಾಗಿ ಸಾಗುತ್ತಿರುವಾಗಲೇ, ಕೋವಿಡ್-19 ಮಹಾಮಾರಿ ಎಲ್ಲವನ್ನೂ ತಲೆಕೆಳಗಾಗಿಸಿತು. ಈಜುಕೊಳಗಳು ಮುಚ್ಚಲ್ಪಟ್ಟವು. ಅವರ ನಿಯಮಿತ ತರಬೇತಿ ಸಂಪೂರ್ಣವಾಗಿ ನಿಂತುಹೋಯಿತು. ಅವರ ಈಜಿನ ದಿನಚರಿ ಅನಿರ್ದಿಷ್ಟ ಕಾಲದವರೆಗೆ ಅಸ್ತವ್ಯಸ್ತಗೊಂಡಿತು. ದೀರ್ಘಕಾಲದ ಅನಿರ್ದಿಷ್ಟ ವಿರಾಮವು, ಇತರ ಕ್ರೀಡೆಗಳಂತೆ ವೃತ್ತಿಪರ ಈಜುವಿಕೆಗೂ ಸಹ ಸರಿಹೊಂದುವುದಿಲ್ಲ.
“ನಾನು ಮತ್ತೆ ನೀರಿಗೆ ಇಳಿದಾಗ, ಮೊದಲಿನಂತಿರಲಿಲ್ಲ,” ಎಂದು ವಿಹಿತಾ ಹೇಳುತ್ತಾರೆ. ಆತ್ಮವಿಶ್ವಾಸದ ಕೊರತೆ, ಸೋಲಿನ ಭಯ ಮತ್ತು ತನ್ನನ್ನೇ ದೂಷಿಸಿಕೊಳ್ಳುವ ಮನಸ್ಥಿತಿ ಅವರನ್ನು ಆವರಿಸಿತ್ತು. ಸ್ಪರ್ಧೆಗೆ ಸಿದ್ಧರಾಗಿ ನಿಂತಾಗ, ಆರಂಭವನ್ನು ಸೂಚಿಸುವ ಎಲೆಕ್ಟ್ರಾನಿಕ್ ಬೀಪ್ ಶಬ್ದವೇ ಅವರನ್ನು ಆತಂಕದಿಂದ ನಡುಗಿಸುತ್ತಿತ್ತು. ಅವರು ಈಗಾಗಲೇ ಭಾರತದ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಈಜುಕೊಳಗಳನ್ನು ಆಳಿದ್ದರೂ, ಈಗ ಪ್ರತಿ ಸ್ಪರ್ಧೆಯ ಮುನ್ನವೂ ಕೈಗಳು ಬೆವರುವುದು, ಹೃದಯ ವೇಗವಾಗಿ ಬಡಿಯುವುದು ಮತ್ತು ಕಾಲುಗಳು ನಡುಗುವುದು ಅವರನ್ನು ಶಾಶ್ವತವಾಗಿ ಕಾಡಲಾರಂಭಿಸಿದವು.
“ಸ್ಪರ್ಧೆ ಆರಂಭವಾಗುವ ಮುನ್ನ ನಾನು ಒಂಟಿಯಾಗಿ ಕುಳಿತು ಅಳುತ್ತಿದ್ದೆ; ಈಜುಕೊಳಕ್ಕೆ ಇಳಿಯುವ ಮೊದಲು ಇಂತಹ ಆತಂಕವನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ. ನನ್ನ ಗಮನವನ್ನು ಸ್ಪರ್ಧೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮವಾಗಿ ನಾನು ಪಂದ್ಯಗಳನ್ನು ಸೋಲತೊಡಗಿದೆ” ಎಂದು ವಿಹಿತಾ ನೆನಪಿಸಿಕೊಳ್ಳುತ್ತಾರೆ.
ಅವರು ಪಂದ್ಯದಲ್ಲಿ ಗೆಲ್ಲುತ್ತಾರೋ ಇಲ್ಲವೋ ಎಂಬುದು ಅವರ ತಂದೆತಾಯಿಯರ ಕಳವಳವಾಗಿರಲಿಲ್ಲ. ಆದರೆ “ಅವಳ ವ್ಯಕ್ತಿತ್ವದಲ್ಲಿ ಆಗಿದ್ದ ತೀವ್ರ ಬದಲಾವಣೆ ನಮ್ಮನ್ನು ಹೆಚ್ಚು ಕಳವಳಗೊಳಿಸಿತು,” ಎಂದು ಅವರ ತಂದೆ ಲೋಗನಾಥನ್ ಹಂಚಿಕೊಳ್ಳುತ್ತಾರೆ. ಯಾವಾಗಲೂ ಸಂತೋಷದಿಂದ ನಗುನಗುತ್ತಾ ಇದ್ದ ವಿಹಿತಾ ನಿಧಾನವಾಗಿ ತನ್ನದೇ ಆದ ಗೂಡಿನೊಳಗೆ ಸೀಮಿತವಾಗತೊಡಗಿದರು. ನಿರೀಕ್ಷೆಗಳ ಒತ್ತಡ, ಸೋಲಿನ ನೋವು ಮತ್ತು ಏಕಾಂತದ ಭಾರ ಅವರೊಳಗೆ ಮೌನವಾಗಿ ಬೆಳೆಯತೊಡಗಿತು. “ನನ್ನ ಸಹಪಾಠಿಗಳೊಂದಿಗೆ ಮಾತನಾಡುವುದನ್ನು ತಪ್ಪಿಸಲು ನಾನು ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುವುದಕ್ಕೆ ಪ್ರಾರಂಭಿಸಿದೆ” ಎಂದು ವಿಹಿತಾ ಹೇಳುತ್ತಾರೆ.
ಮೇಲ್ನೋಟಕ್ಕೆ ಕಾಣಿಸದಿದ್ದರೂ, ಇಂದು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಗಂಭೀರವಾಗಿ ಬೆಳೆಯುತ್ತಿದ್ದು, ಅದರ ಬಗ್ಗೆ ಮುಕ್ತ ಸಂವಾದದ ಅಗತ್ಯವಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, 18 ರಿಂದ 29 ವರ್ಷದೊಳಗಿನ ಸುಮಾರು 7.3 ಶೇಕಡಾದಷ್ಟು ಯುವಕರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಲ್ಲದೆ, 10 ರಿಂದ 19 ವರ್ಷದೊಳಗಿನ ಪ್ರತಿ ಐದು ಹದಿಹರೆಯದವರಲ್ಲಿ ಒಬ್ಬರು, ಖಿನ್ನತೆ, ಆತಂಕ ಮತ್ತು ತೀವ್ರ ಒತ್ತಡದಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ.
“ನನ್ನ ಮಗಳು ಅರ್ಥಮಾಡಿಕೊಳ್ಳಲು ಸಾಧ್ಯವಾಗದಷ್ಟು ಆಳವಾದ ನೋವನ್ನು ಮೌನವಾಗಿ ಅನುಭವಿಸುತ್ತಿರುವುದು ನನಗೆ ಕಾಣಿಸುತ್ತಿತ್ತು. ಅದು ಹೀಗೆಯೇ ಮುಂದುವರಿಯುವುದಕ್ಕೆ ಅವಕಾಶ ನೀಡಲು ನಾನು ಸಿದ್ಧನಿರಲಿಲ್ಲ. ನಾನು ವಿಹಿತಾಳನ್ನು ದಿ ಆರ್ಟ್ ಆಫ್ ಲಿವಿಂಗ್‌ನ ಇಂಟ್ಯೂಷನ್ ಪ್ರೊಸೆಸ್ (IP) ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದೆ,” ಎಂದು ಅವರ ತಂದೆ ಹಂಚಿಕೊಳ್ಳುತ್ತಾರೆ.
ಜೀವನದ ಮಹತ್ವದ ತಿರುವು
“ಕಾರ್ಯಕ್ರಮದ ಸಮಯದಲ್ಲಿ ಅವಳು ಯಾವಾಗಲೂ ಒಂದು ಮೂಲೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಿದ್ದಳು. ಬಹಳ ಕಡಿಮೆ ಮಾತನಾಡುತ್ತಿದ್ದಳು. ಅವಳು ನನಗೆ ಹೇಳಿದ ಒಂದೇ ವಿಷಯ ಎಂದರೆ, ತಾನು ನಿಯಮಿತವಾಗಿ ಈಜು ಅಭ್ಯಾಸ ಮಾಡುತ್ತಿದ್ದೆ ಎಂಬುದು,” ಎಂದು ವಿಹಿತಾಳ ಇಂಟ್ಯೂಷನ್ ಪ್ರೊಸೆಸ್ ಶಿಕ್ಷಕಿ ಲತಾ ಕಣ್ಣನ್ ಅಯ್ಯರ್ ನೆನಪಿಸಿಕೊಳ್ಳುತ್ತಾರೆ. ವಿಹಿತಾಳ ತಂದೆ ಕೆಲವು ವರ್ಷಗಳಿಂದ ದಿ ಆರ್ಟ್ ಆಫ್ ಲಿವಿಂಗ್‌ನೊಂದಿಗೆ ಸಂಪರ್ಕ ಹೊಂದಿದ್ದರೂ, ಆರಂಭದಲ್ಲಿ ವಿಹಿತಾಳಿಗೆ ಅದರ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ. ಆದರೆ ನಂತರ ಅವಳ ಗಮನ ಸೆಳೆದದ್ದು ಇಲ್ಲಿನ ವಾತಾವರಣ. “ಅದು ನನ್ನ ತರಗತಿ ಕೊಠಡಿ ಅಥವಾ ಈಜುಕೊಳದಲ್ಲಿ ಅನುಭವಿಸುತ್ತಿದ್ದ ವಾತಾವರಣಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು, ಮೊದಲ ಬಾರಿಗೆ, ಯಾರೂ ನನ್ನನ್ನು ಜಡ್ಜ್ ಮಾಡುತ್ತಿಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿತು,” ಎಂದು ವಿಹಿತಾ ಮುಗುಳ್ನಗುತ್ತಾ ಹೇಳುತ್ತಾರೆ.
ಈ ಕಾರ್ಯಕ್ರಮದಲ್ಲಿ ವಿಹಿತಾ ವಿಶೇಷ ಉಸಿರಾಟದ ಕ್ರಮಗಳನ್ನು ಕಲಿತರು, ಧ್ಯಾನದ ಪ್ರಕ್ರಿಯೆ, ಮೌನ ಹಾಗೂ ಹಲವು ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಿದರು. ಈ ಅಭ್ಯಾಸಗಳು ಅವರ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಳೆದುಹೋಗಿದ್ದ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನೆರವಾದವು.
ಇಂಟ್ಯೂಷನ್ ಪ್ರೊಸೆಸ್ ಎಂಬ ಈ ಅಪೂರ್ವ ಕಾರ್ಯಕ್ರಮವನ್ನು ರೂಪಿಸಿದ ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು, “ಸರಿಯಾದ ಸಮಯದಲ್ಲಿ ಸರಿಯಾದ ಆಲೋಚನೆ ಬರುವುದೇ ಅಂತಃಪ್ರಜ್ಞೆ” ಎಂದು ವಿವರಿಸುತ್ತಾರೆ.
ಮಕ್ಕಳು ಒತ್ತಡದಿಂದ ಮುಕ್ತರಾಗಿ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಏಕಾಗ್ರತೆಯನ್ನು ಹೊಂದಿದ್ದಾಗ, ಕಾಲ ಮತ್ತು ಸ್ಥಳದ ಮಿತಿಗಳನ್ನು ಮೀರಿದ ವಿಶಾಲವಾದ ಚೈತನ್ಯದೊಂದಿಗೆ ಸಹಜವಾಗಿ ಸಂಪರ್ಕ ಸಾಧಿಸುತ್ತಾರೆ. ದಿ ಆರ್ಟ್ ಆಫ್ ಲಿವಿಂಗ್‌ನ ಇಂಟ್ಯೂಷನ್ ಪ್ರೊಸೆಸ್ ಮಕ್ಕಳಿಗೆ ಆ ಚೈತನ್ಯದೊಂದಿಗೆ ಸಂಪರ್ಕವನ್ನು ಬೆಸೆಯುವ ದಾರಿಯನ್ನು ತೆರೆದಿಡುತ್ತದೆ.
ಅಂತಃಪ್ರಜ್ಞೆಯೋ ಅಥವಾ ಮಾಯೆಯೋ?
ಸೂಚಿಸಿದಂತೆ, ವಿಹಿತಾ 40 ದಿನಗಳ ಕಾಲ ಇಂಟ್ಯೂಷನ್ ಪ್ರೊಸೆಸ್‌ನಲ್ಲಿ ಕಲಿತ ಅಭ್ಯಾಸಗಳನ್ನು ನಿರಂತರವಾಗಿ ಮುಂದುವರಿಸಿದರು. ಈ ಅಭ್ಯಾಸವನ್ನು ನಿಯಮಿತವಾಗಿ ಮಾಡುವಂತೆ ಅವರ ತಾಯಿ ನಿರಂತರವಾಗಿ ನೆನಪಿಸುತ್ತಿದ್ದದ್ದು ಅವರಿಗೆ ಸಹಾಯವಾಯಿತು. ಆದರೆ ಅದಕ್ಕಿಂತ ಹೆಚ್ಚಾಗಿ ತಮ್ಮೊಳಗೆ ಆಗುತ್ತಿದ್ದ ಬದಲಾವಣೆಗಳು ಅವರನ್ನು ಹೆಚ್ಚು ಪ್ರೇರೇಪಿಸುತ್ತಿತ್ತು.
ಈಗ, ಸ್ಪರ್ಧೆಗೆ ಮುನ್ನ, ಆತಂಕಕ್ಕೆ ಒಳಗಾಗುವ ಬದಲು ವಿಹಿತಾ ಶಾಂತವಾಗಿ ಕುಳಿತುಕೊಳ್ಳುತ್ತಾರೆ. ಕಣ್ಣುಗಳನ್ನು ಮುಚ್ಚಿಕೊಂಡು ಆಳವಾದ ಉಸಿರಾಟದ ಪ್ರಕ್ರಿಯೆಯನ್ನು ಮಾಡುತ್ತಾರೆ. ನಂತರ ಇಡೀ ಸ್ಪರ್ಧೆಯ ದೃಶ್ಯವನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಕಲ್ಪಿಸಿಕೊಳ್ಳುತ್ತಾರೆ. “ಒಮ್ಮೆ 50 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯ ಮೊದಲು, ‘29.88’ ಎಂಬ ಸಂಖ್ಯೆ ನನ್ನ ಮನಸ್ಸಿನಲ್ಲಿ ಮಿಂಚಿನಂತೆ ಮೂಡಿತು. ಆಗ ಅದನ್ನು ನಾನು ಅಷ್ಟಾಗಿ ಗಮನಿಸಲಿಲ್ಲ. ಸ್ಪರ್ಧೆ ಮುಗಿದ ನಂತರ ಎಲ್‌ಇಡಿ ಸ್ಕೋರ್‌ಬೋರ್ಡ್ ನೋಡಿದಾಗ, ನನ್ನ ಸಮಯ ನಿಖರವಾಗಿ ‘29.88 ಸೆಕೆಂಡುಗಳು’ ಎಂದು ಕಾಣಿಸಿತು,” ಎಂದು ವಿಹಿತಾ ವಿವರಿಸುತ್ತಾರೆ.
“ಈಜುತ್ತಿರುವಾಗ ತನ್ನ ಎದುರಾಳಿಗಳ ಚಲನೆಯನ್ನು ತಾನು ಬಹುತೇಕ ಅರ್ಥಮಾಡಿಕೊಳ್ಳಬಲ್ಲೆ ಎಂದು ವಿಹಿತಾ ನನಗೆ ಹೇಳುತ್ತಿದ್ದಳು. ಯಾರು ಮುಂದೆ ಇದ್ದಾರೆ, ಸ್ಪರ್ಧೆಯಲ್ಲಿ ಏನು ನಡೆಯುತ್ತಿದೆ, ಮುಂದಿನ ಕ್ಷಣದಲ್ಲಿ ತಾನು ಏನು ಮಾಡಬೇಕು ಎಂಬುದರ ಸ್ಪಷ್ಟವಾದ ಅರಿವು ಅವಳಿಗೆ ಇರುತ್ತಿತ್ತು” ಎಂದು ಲತಾ ಹಂಚಿಕೊಳ್ಳುತ್ತಾರೆ.
ಮತ್ತೆ ವಿಜಯದ ವೇದಿಕೆಯತ್ತ
ಸ್ವಲ್ಪ ಸಮಯದಲ್ಲೇ, ವಿಹಿತಾ ತಮ್ಮ ಆತ್ಮವಿಶ್ವಾಸದ ಕೊರತೆಯನ್ನು ಸಂಪೂರ್ಣವಾಗಿ ಹಿಂದಿಕ್ಕಿ, ಮತ್ತೆ ತಮ್ಮ ವಿಜಯದ ಸರಣಿಯನ್ನು ಆರಂಭಿಸಿದರು. ಅವರು ಬಹರೇನ್‌ನಲ್ಲಿ ನಡೆದ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಹಮದಾಬಾದ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದರು. ರೊಮೇನಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲೂ ಭಾರತದ ಪರ ಸ್ಪರ್ಧಿಸಿದರು. ರಾಷ್ಟ್ರೀಯ ದಾಖಲೆಗಳನ್ನು ಮುರಿದರು, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು. ಇಂದು ಅವರು ಭಾರತದ ಬ್ಯಾಕ್‌ಸ್ಟ್ರೋಕ್ ವಿಭಾಗದ ಅಗ್ರ ಈಜುಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅವರು ಸುಮಾರು 150 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈಜುಕೊಳದ ಆಚೆಯೂ ಬೀರಿದ ಪರಿಣಾಮ
ಅಂತಾರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿದ್ದ ಕಾರಣ, ವಿಹಿತಾಳಿಗೆ ಓದಿಗೆ ಸಾಕಷ್ಟು ಸಮಯವೇ ಸಿಗುತ್ತಿರಲಿಲ್ಲ. ಪ್ರತಿದಿನ ಅಭ್ಯಾಸ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಅವರು ಸಂಪೂರ್ಣವಾಗಿ ಆಯಾಸಗೊಂಡಿರುತ್ತಿದ್ದರು. ಉನ್ನತ ಪ್ರೌಢಶಾಲೆಯಲ್ಲಿ ಅವರು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಅದರಲ್ಲಿ, ಅನೇಕ ರೇಖಾಚಿತ್ರಗಳು, ಸಂಕೀರ್ಣ ವೈಜ್ಞಾನಿಕ ಹೆಸರುಗಳು ಮತ್ತು ವಿವರವಾದ ವ್ಯಾಖ್ಯಾನಗಳಿಂದ ಕೂಡಿದ ಜೀವಶಾಸ್ತ್ರದ ಅಧ್ಯಯನವೂ ಸೇರಿತ್ತು. ಆದರೆ ಇಂಟ್ಯೂಷನ್ ಪ್ರೊಸೆಸ್ ಮಾಡಿದ ನಂತರ, ಅವರಲ್ಲಿ ಛಾಯಾಗ್ರಾಹಕ ಸ್ಮರಣಶಕ್ತಿ (Photographic Memory) ಬೆಳೆಯತೊಡಗಿತು; ಪರೀಕ್ಷೆಗೆ ಮುನ್ನವೇ ಪ್ರಶ್ನೆಗಳು ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿಬರುತ್ತಿತ್ತು ಎಂದು ಅವರು ಹೇಳುತ್ತಾರೆ.
ಕ್ರೀಡೆ ಮತ್ತು ವಿದ್ಯಾಭ್ಯಾಸ ಎರಡನ್ನೂ ಸಮತೋಲನವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ಯುವ ಕ್ರೀಡಾಪಟುವಿಗೆ, ಇದು ವಿದ್ಯಾಭ್ಯಾಸದಲ್ಲೂ ಮಹತ್ವದ ಬದಲಾವಣೆಯನ್ನು ತಂದಿತು. ಕ್ರಮೇಣ ಅವರು ಉತ್ತಮ ಅಂಕಗಳನ್ನು ಗಳಿಸಲು ಆರಂಭಿಸಿದರು. ನಂತರ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸ್ಪೋರ್ಟ್ಸ್ ಸೈನ್ಸ್ ಅಧ್ಯಯನಕ್ಕೆ ಪ್ರವೇಶ ಪಡೆದರು.
ಆದರೆ ಅವರ ಜೀವನದಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಬದಲಾವಣೆ ಕ್ರೀಡಾ ಸಾಧನೆಗಳಿಗೂ ಅಥವಾ ಶೈಕ್ಷಣಿಕ ಯಶಸ್ಸಿಗೂ ಸಂಬಂಧಿಸಿದ್ದಲ್ಲ. ಅತ್ಯಂತ ಮಹತ್ವದ ಬದಲಾವಣೆ ಎಂದರೆ, ಸೋಲನ್ನು ಎದುರಿಸುವ ಅವರ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾದದ್ದು. ಇಂಟ್ಯೂಷನ್ ಪ್ರೊಸೆಸ್ ಕೇವಲ ಗೆಲ್ಲುವ ಆತ್ಮವಿಶ್ವಾಸವನ್ನು ಮರಳಿ ನೀಡಲಿಲ್ಲ; ಅದು ಯಾವುದೇ ಕ್ರೀಡಾ ಫಲಿತಾಂಶಗಳನ್ನೂ ಮೀರಿ ನಿಲ್ಲುವ ಆಳವಾದ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಅವರಲ್ಲಿ ಬೆಳೆಸಿತು.