ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಜಾಗೃತ ದಳದಿಂದ ಧಿಡೀರ್ ಭೇಟಿ ದಾಖಲೆಗಳ ಪರಿಶೀಲನೆ ನಡೆಸಿದರು. ಪರಶುರಾಮ್ ಸತ್ತಿಗೇರಿ, ಡಾ.ರವಿಶಂಕರ್, ಡಾ.ಬೆಟ್ಟಸ್ವಾಮಿ, ಡಾ.ಬಾಲಕೃಷ್ಣ ಇದ್ದರು.
ಮದ್ದೂರು: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ, ಬಾಲ್ಯ ವಿವಾಹ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿರುವ ಎಲ್ಲ ಸ್ಕಾೃನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್ ತಿಳಿಸಿದರು.
ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸೋಮವಾರ ಜಾಗೃತ ದಳದೊಂದಿಗೆ ಧಿಡೀರ್ ಭೇಟಿ ನೀಡಿದ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಗರ್ಭಿಣಿಯರಿಗೆ ಇರುವ ಮೂಲಸೌಕರ್ಯಗಳು ಹಾಗೂ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಅಡಿ ದಾಖಲೆಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದ್ದೇವೆ. ತಾಲೂಕಿನಲ್ಲಿ ಎರಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು ಮತ್ತೆ ಗರ್ಭಿಣಿಯಾಗಿರುವ ಮಹಿಳೆಯರ ಮಾಹಿತಿಗಳನ್ನು ಸ್ಕಾೃನಿಂಗ್ ಸೆಂಟರ್‌ಗಳಿಂದ ಪಡೆದುಕೊಂಡು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಒಳಗೊಂಡಂತೆ ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದರು.
ಅಂತಹವರ ಮೇಲೆ ನಿಗಾ ವಹಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜತೆಗೆ ಸಮರ್ಪಕ ಕಾನೂನು ಜಾರಿ ಮತ್ತು ಅನುಷ್ಠಾನ ತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಪದೇ ಪದೆ ಸ್ಕಾೃನಿಂಗ್ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಬೇರೆ ಜಿಲ್ಲೆಗಳಿಂದ ತಾಲೂಕುಗಳಿಂದ ಮದ್ದೂರಿಗೆ ಬಂದು ಚಿಕಿತ್ಸೆ ಪಡೆಯುತಿರುವವರ ಹಾಗೂ ಖಾಸಗಿ ಡಯಾಗ್ನೊಸ್ಟಿಕ್ ಸೆಂಟರ್‌ಗಳಲ್ಲಿ ಬಾಲ್ಯ ವಿವಾಹವಾದ 18 ವರ್ಷ ವಯಸ್ಸಿನವರಿಗೆ ಪ್ರಸವ ಚಿಕಿತ್ಸೆ ನಡೆಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಒಂದು ವೇಳೆ ಗರ್ಭಧಾರಣೆಯು ಚಿಕ್ಕ ವಯಸ್ಸಿನಲ್ಲೇ ಮಾಡಿದ್ದಾರೆ ಎಂದು ಗೊತ್ತಾದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಶಾಲಾ, ಕಾಲೇಜುಗಳು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಹೆಣ್ಣು ಮಕ್ಕಳ ಮಹತ್ವವಾದ ಬಗ್ಗೆ ಅರಿವು ಮೂಡಿಸಬೇಕು. ಹೆಣ್ಣು ಭ್ರೂಣ ಹತ್ಯೆ ಕಾನೂನುಬಾಹಿರವಾಗಿದ್ದು, ಹೆಣ್ಣು ಮನೆಯ ಕಣ್ಣಿದಂತೆ. ಅವರನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಯಾವುದೇ ಕಾರಣಕ್ಕೂ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡಬಾರದು. ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಕೂಡ ತಾಲೂಕು ಆಡಳಿತದೊಟ್ಟಿಗೆ ಸಹಕಾರ ನೀಡಬೇಕು ಎಂದರು.
ಜಿಲ್ಲಾ ತಪಾಸಣೆ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷ ಡಾ. ಬೆಟ್ಟಸ್ವಾಮಿ, ಸದಸ್ಯರಾದ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಾಲಕೃಷ್ಣ, ಸದಸ್ಯರಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ವಿಮೋಚನಾ ಮಹಿಳಾ ಸಂಘಟನೆ ಮತ್ತು ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಜನಾರ್ದನ್ ಹೂತಗೆರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಪ್ರವೀಣ್ ಮತ್ತು ಹರ್ಷ ಇದ್ದರು.