ಬೆಂಗಳೂರು : ರೈಲು ಗಾಲಿ ಕಾರ್ಖಾನೆಯ ವತಿಯಿಂದ ಜಾಗೃತ ಅರಿವು ಸಪ್ತಾಹ 2026ರ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು.
‘ಸಮೃದ್ಧಿಗಾಗಿ ಪ್ರಾಮಾಣಿಕತೆ’ (ಪ್ರೊಬಿಟಿ ಫಾರ್ ಪ್ರಾಸ್ಪರಿಟಿ) ಘೋಷವಾಕ್ಯದಡಿ ನಡೆದ ಜಾಗೃತಿ ಅಭಿಯಾನದ ಅಂಗವಾಗಿ ಸಿಬ್ಬಂದಿಗೆ ನಿಯಮ ಪಾಲನೆ, ಆಡಳಿತ, ಸಾರ್ವಜನಿಕ ಖರೀದಿ ಪ್ರಕ್ರಿಯೆ, ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ), ಮಾನವ ಸಂಪನ್ಮೂಲ ನಿರ್ವಹಣೆ, ನೈತಿಕ ಮೌಲ್ಯಗಳು ಹಾಗೂ ಸೈಬರ್ ಭದ್ರತೆ ಕುರಿತು ವಿಚಾರ ಸಂಕಿರಣ ಮತ್ತು ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು.
ಸಪ್ತಾಹದ ಆರಂಭದ ದಿನ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ ಅವರು ಕಾನೂನುಬದ್ಧ ಮತ್ತು ನೈತಿಕ ಸದಾಚಾರದ ಕುರಿತು ವಿಶೇಷ ಉಪನ್ಯಾಸ ನೀಡಿದ್ದರು. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆ ಬೆಳೆಸುವ ಉದ್ದೇಶದಿಂದ ಕೆವಿ ಆರ್‌ಡಬ್ಲ್ಯುಎಫ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಸಮಾರೋಪದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿ, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಖಾನೆಯ ಜನರಲ್ ಮ್ಯಾನೇಜರ್ ಮನೋರಂಜನ್ ಪ್ರಧಾನ್, ಜಾಗೃತಿಯು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಸಮೃದ್ಧಿಗಾಗಿ ಪ್ರತಿಯೊಬ್ಬರೂ ಪ್ರಾಮಾಣಿಕತೆಯ ಮೌಲ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.
ಇದೇ ವೇಳೆ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಧಿಕಾರಿಗಳು ಮತ್ತು ಸಿಬ್ಬಂದಿ ಪುಷ್ಪನಮನ ಸಲ್ಲಿಸಿ, ಏಕತಾ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಏಕತಾ ಓಟದಲ್ಲಿ ಪಾಲ್ಗೊಂಡರು. ಹಿರಿಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.