- ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ಪತ್ತೆ ಎನ್ನುವುದು ಕೇವಲ ವದಂತಿ
- ಸುಳ್ಳು ಮಾಹಿತಿ ಹರಡಿದ್ದ ವಿದ್ಯಾರಣ್ಯಪುರ ನಿವಾಸಿ ಹೇಮಂತ್ ಬಂಧನ
- ಅನಾರೋಗ್ಯದ ಮಾತ್ರೆಗಳ ಜೊತೆ ಮದ್ಯ ಸೇವಿಸಿದ್ದರಿಂದ ಅಸ್ವಸ್ಥನಾಗಿದ್ದ ವ್ಯಕ್ತಿ
ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಇದರದ್ದೇ ಸದ್ದು, ಝಾಂಬಿ ಎನ್ನುವ ಡ್ರಗ್ ನಗರಕ್ಕೆ ಕಾಲಿಟ್ಟಿದ್ದೆ. ಇಲ್ಲೊಬ್ಬ ವ್ಯಕ್ತಿ ಅದನ್ನು ಸೇವಿಸಿ ಹೇಗೆ ರಸ್ತೆಯಲ್ಲಿ ನಿಂತಲ್ಲೇ ನಿಂತಿದ್ದಾನೆ. ಏನಾಗ್ತಿದೆ ಸಿಲಿಕಾನ್ ಸಿಟಿಯಲ್ಲಿ ಎನ್ನುವ ವಿಡಿಯೋ ರಾತ್ರಿ ಕಳೆಯೋ ವೇಳೆಗೆ ವೈರಲ್ ಆಗಿತ್ತು. ನಟರು, ಅಧಿಕಾರಿಗಳು ಎಲ್ಲರೂ ಹಂಚಿಕೊಂಡು ಜಾಗೃತಿ ಮೂಡಿಸಿದ್ದೇ ಮೂಡಿಸಿದ್ದು. ಇದ್ರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಡ್ಡಿದ್ದಾಗ ಬೆಳಕಿಗೆ ಬಂದಿದ್ದು ಅಸಲಿ ಕತೆ...
ಝಾಂಬಿ ಎನ್ನುವ ಡ್ರಗ್ ಇಲ್ಲ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮೆಡಿಸನ್ ಜೊತೆಗೆ ಮದ್ಯ ಸೇವಿಸಿದ್ದಕ್ಕೆ ಹೀಗಾಗಿದೆ. ಆತನಲ್ಲಿ ಡ್ರಗ್ ಬಗ್ಗೆ ಝೀರೋ ಟಾಲರೆನ್ಸ್ ಇದೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ವಿಡಿಯೋ ಹಂಚಿಕೊಂಡವನ್ಯಾರು?
ಝಾಂಬಿ ಡ್ರಗ್ ಪ್ರಭಾವದ ಬಗ್ಗೆ ಮಾಹಿತಿ ಮತ್ತು ಈ ವಿಡಿಯೋವನ್ನು ಹಂಚಿಕೊಂಡಿದ್ದು ಖಾಸಗಿ ಕಂಪನಿಯ ಉದ್ಯೋಗಿ, ವಿದ್ಯಾರಣ್ಯಪುರದ ನಿವಾಸಿ ಹೇಮಂತ್ ಕುಮಾರ್ (29). ಸದ್ಯ ಈತನಿಗೆ ನೋಟಿಸ್ ಕೊಟ್ಟು, ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಏನಿದು ಝಾಂಬಿ ಡ್ರಗ್ ಘಟನೆ?
ಏಪ್ರಿಲ್ 7 ರಂದು ಹೇಮಂತ್ ಕುಮಾರ್ ಬಾಗಲೂರು ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ವ್ಯಕ್ತಿಯೊಬ್ಬರು ನಡೆದಾಡಲು ಪ್ರಯತ್ನಿಸುತ್ತಿದ್ದರು. ಆದರೆ, ಚಲಿಸಲೂ ಆಗದೆ ನಿಂತಲ್ಲೇ ನಿಂತಿದ್ದರು. ಇದನ್ನು ಕಂಡ ಹೇಮಂತ್ ಅವರು, ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದನು. ವಿದೇಶಗಳಲ್ಲಿ ಝಾಂಬಿ ಡ್ರಗ್ ಸೇವಿಸಿದವರು ಹೀಗೆ ವರ್ತಿಸುತ್ತಾರೆ ಎಂಬುದನ್ನು ಯೂಟ್ಯೂಬ್ನಲ್ಲಿ ನೋಡಿದ್ದ ಹೇಮಂತ್, ಈ ವ್ಯಕ್ತಿಯೂ ಅದೇ ಡ್ರಗ್ ಸೇವಿಸಿರಬೇಕು ಎಂದು ಗ್ರಹಿಕೆ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ವಿಡಿಯೋ ಸಾಕಷ್ಟು ಜನರನ್ನು ತಲುಪಿತ್ತು. ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ನಟರು ಸಹ ವಿಡಿಯೋ ಹಂಚಿಕೊಂಡಿದ್ದರು. ಇದರಿಂದ ಜನರಲ್ಲಿ ತೀವ್ರ ಆತಂಕ ಹೆಚ್ಚಾಗಿತ್ತು. ಇದ್ರಿಂದ ಎಚ್ಚೆತ್ತ ಪೊಲೀಸರು ವಿಡಿಯೋದಲ್ಲಿದ್ದ ಟು ವೀಲರ್ ಮೇಲಿನ ನಂಬರ್ ಗಮನಿಸಿ ಹೇಮಂತ್ ಬಗ್ಗೆ ಮಾಹಿತಿ ಕಲೆ ಹಾಕಿದರು.
ಝಾಂಬಿ ಡ್ರಗ್ ಅನ್ನೋದೆ ಇಲ್ಲ
ಜೊತೆಗೆ ವಿಡಿಯೋದಲ್ಲಿದ್ದ ವ್ಯಕ್ತಿಯ ಗುರುತನ್ನು ಪತ್ತೆ ಮಾಡಿ, ಆತನನ್ನು ಚಿಕಿತ್ಸೆಗೆ ಒಳಪಡಿಸಿದಾಗ, ಆತನ ದೇಹದಲ್ಲಿ ಯಾವುದೇ ಮಾದಕ ವಸ್ತು, ಸೈಕೊಟ್ರಿಕ್ ಅಂಶ ಪತ್ತೆಯಾಗಿಲ್ಲ. ಬದಲಾಗಿ, ಈ ವ್ಯಕ್ತಿಗೆ ಸಂಧಿವಾತ ಮತ್ತು ಸೈನುಟಿಸ್ ಎನ್ನುವ ಸಮಸ್ಯೆ ಇತ್ತು. ಹೀಗಾಗಿ, ವೈದ್ಯರು ಸೂಚನೆ ಕೊಟ್ಟಿದ್ದ ಮಾತ್ರೆಗಳ ಜೊತೆಗೆ ಮದ್ಯ ಸೇವಿಸಿದ್ದ. ಆ ಕಾರಣದಿಂದ ನಡೆಯಲಾಗದೆ ರಸ್ತೆ ನಡುವೆ ಅಸ್ವಸ್ಥರಾಗಿ ನಿಂತಿದ್ದ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ವಿಡಿಯೋದಲ್ಲಿರೋ ವ್ಯಕ್ತಿ ಯಾರು
ಪಂಜಾಬ್ ಮೂಲದ ರಾಜ್ವೀರ್ ಸಿಂಗ್ ಈ ವಿಡಿಯೋದಲ್ಲಿರುವ ವ್ಯಕ್ತಿ. ಈತ ಈ ಹಿಂದೆ ಆಫೀಮು ಎನ್ನುವ ಡ್ರಗ್ಗೆ ಅಡಿಕ್ಟ್ ಆಗಿದ್ದನು. ಇದರಿಂದ ಅವರನ್ನು ಕೆಲ ವರ್ಷದ ಹಿಂದೆ ಅವರನ್ನು ಡೀ ಅಡಿಕ್ಷನ್ ಸೆಂಟರ್ಗೆ ಸೇರಿಸಲಾಗಿತ್ತು. ಅಲ್ಲಿಂದ ವಾಪಸ್ ಆದ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದರು. ಕೆಲ ಡ್ರೈವರ್ ಜೊತೆ ಶೆಡ್ನಲ್ಲಿದ್ದರು ಎನ್ನಲಾಗಿದೆ.
ಯಾರ್ಯಾರಿಗೆ ನೋಟಿಸ್ ನೀಡಲಾಗಿದೆ?
ತಪ್ಪು ಮಾಹಿತಿ ಕೊಟ್ಟ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ 25 ರಿಂದ 30 ಜನರಿಗೆ ನೋಟಿಸ್ ನೀಡಲು ಬಾಗಲೂರು ಪೊಲೀಸರು ಮುಂದಾಗಿದ್ದಾರೆ. ವಿಡಿಯೋ ಒಟ್ಟು ಒಂದೂವರೆ ಲಕ್ಷ ಜನರಿಂದ ಶೇರ್ ಮಾಡಿಕೊಳ್ಳಲಾಗಿದೆ ಎಲ್ಲರಿಗೂ ನೋಟಿಸ್ ಕೊಡೋಕೆ ಆಗೋದಿಲ್ಲ. ವೈಭವೀಕರಿಸಿ ವೀಡಿಯೋ ಶೇರ್ ಮಾಡಿದ್ದವರಿಗೆ ನೋಟಿಸ್ ಕೊಡ್ತೇವೆ ಎಂದು ಹೇಳಿದರು.
ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ಹೇಮಂತ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 353 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ನಂತರ ಹೇಮಂತ್ ಕ್ಷಮೆಯಾಚನೆಯ ವಿಡಿಯೋ ಬಿಡುಗಡೆ ಮಾಡಿದ್ದಾನೆ, (ಏಜೆನ್ಸೀಸ್)