ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಭರ್ಜರಿ ಗೆಲುವು ಪಡೆಯುವ ಮೂಲಕ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ರಾಜಕೀಯ ಕುಟುಂಬದ ಕುಡಿಗೆ ವಿಧಾನಸೌಧ ಪ್ರವೇಶ ಭಾಗ್ಯ ದೊರೆತಂತಾಗಿದೆ...!!
ಜಿಲ್ಲೆಯಲ್ಲಿ ರಾಜಕೀಯವಾಗಿ ತಂದೆ ರಾಜಕೀಯದ ಬಳಿಕ ಅವರ ಮಕ್ಕಳು ರಾಜಕಾರಣಕ್ಕೆ ಇಳಿದು ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿರುವ ಅನೇಕ ಉದಾಹರಣೆಗಳು ಇದ್ದು, ಇದೀಗ ಆ ಪಟ್ಟಿಗೆ ದಿ. ಎಚ್.ವೈ.ಮೇಟಿ ಅವರು ಪುತ್ರ ಉಮೇಶ ಮೇಟಿ ಅವರು ಸೇರಿದ್ದಾರೆ.
ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಪಟ್ಟಣಶೆಟ್ಟಿ ಹಾಗೂ ಚಿಮ್ಮನಕಟ್ಟಿ ಕುಟುಂಬ, ಗುಳೇದಗುಡ್ಡ (ಸದ್ಯ ಕ್ಷೇತ್ರ ಇಲ್ಲ)ದಲ್ಲಿ ನಂಜಯ್ಯನಮಠ, ಹುನಗುಂದದಲ್ಲಿ ಕಾಶಪ್ಪನವರ, ಜಮಖಂಡಿಯಲ್ಲಿ ನ್ಯಾಮಗೌಡ ಹಾಗೂ ಸದ್ಯ ಬಾಗಲಕೋಟೆಯಲ್ಲಿ ಮೇಟಿ ಕುಟುಂಬದವರು ತಂದೆ-ಮಕ್ಕಳು ಶಾಸಕರಾಗಿ ಕುಟುಂಬ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಈ ಪೈಕಿ ಪಟ್ಟಣಶೆಟ್ಟಿ ಕುಟುಂಬ ಹೊರತುಪಡಿಸಿದರೆ ಉಳಿದೆಲ್ಲ ಕುಟುಂಬಗಳು ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾದವರು.
ಗುಳೇದಗುಡ್ಡದಲ್ಲಿ ನಂಜಯ್ಯನಮಠ :
ಹುನಗುಂದ ಮತ್ತು ಗುಳೇದಗುಡ್ಡ ಮತ ಕ್ಷೇತ್ರಗಳಲ್ಲಿ ತಲಾ ಒಂದು ಭಾರಿ ಶಾಸಕರಾಗಿದ್ದ ಜಿ.ಪಿ.ನಂಜಯ್ಯನಮಠ ಅವರು ನಿಧನ ಬಳಿಕ ಅವರ ಪುತ್ರ ಎಸ್.ಜಿ.ನಂಜಯ್ಯನಮಠ ಚುನಾವಣೆಗೆ ನಿಂತು ವಿಧಾನಸಭೆ ಪ್ರವೇಶ ಮಾಡಿದ್ದರು. ಇದು ಬಾಗಲಕೋಟೆ ಜಿಲ್ಲೆಯಲ್ಲಿ ತಂದೆಯ ಬಳಿಕ ಅವರ ಪುತ್ರ ಶಾಸಕರಾದ ಮೊದಲ ದಾಖಲೆ ಆಗಿತ್ತು. ಆದರೆ, ಜಿ.ಪಿ.ನಂಜಯ್ಯನಮಠ ಅವರು ೧೯೭೨ರಲ್ಲಿ ಗುಳೇಗುಡ್ಡ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ವೇಳೆ ೧೯೭೫ರಲ್ಲಿ ನಿಧನರಾಗಿದ್ದರು. ತಂದೇ ನಿಧನರಾದ ೧೦ ವರ್ಷಗಳ ಬಳಿಕ ೧೯೮೫ರಲ್ಲಿ ಪುತ್ರ ಎಸ್.ಜಿ.ನಂಜಯ್ಯನಮಠ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಅವರು ಗೆದ್ದು ಶಾಸಕರಾಗಿದ್ದರು. ಮತ್ತೆ ೧೯೯೯ರಲ್ಲಿ ೨ನೇ ಸಲ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ೨೦೦೪ರಲ್ಲಿ ಸೋತಿದ್ದ ಅವರು ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗಿ ಗುಳೇದಗುಡ್ಡ ಕ್ಷೇತ್ರ ಹೋಗಿದ್ದರಿಂದ ಬಳಿಕ ಅವರಿಗೆ ಕ್ಷೇತ್ರ ಇಲ್ಲವಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ.
ಬಾದಾಮಿಯಲ್ಲಿ ಪಟ್ಟಣಶೆಟ್ಟಿ ಕುಟುಂಬ:
ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ೧೯೬೭ರಲ್ಲಿ ಕೆ.ಎಂ.ಪಟ್ಟಣಶೆಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಪಡೆದು ಶಾಸಕರಾಗಿದ್ದರು. ಬಳಿಕ ೧೯೮೯ರಲ್ಲಿ ಕೆ.ಎಂ.ಪಟ್ಟಣಶೆಟ್ಟಿ ಅವರು ಪುತ್ರ ಎಂ.ಕೆ.ಪಟ್ಟಣಶೆಟ್ಟಿ ಅವರು ಜನತಾದಳದಿಂದ ಸ್ಪರ್ಧೆ ಮಾಡಿ ಗೆದ್ದು ಶಾಸಕರಾಗಿದ್ದರು. ೨೦೦೪ ಮತ್ತು ೨೦೦೮ರಲ್ಲಿ ಬಿಜೆಪಿಯಿಂದ ಸ್ಪಽðಸಿ ಒಟ್ಟು ಮೂರು ಸಲ ಶಾಸಕರಾಗಿದ್ದರು. ೨೦೧೩ರಲ್ಲಿ ಸೋತ ಬಳಿಕ ನಂತರ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ.
ಕಾಶಪ್ಪನವರ ಮನೆಯಲ್ಲಿ ಮೂವರು ಶಾಸಕರಾಗಿದ್ದಾರೆ:
ಇನ್ನು ಹುನಗುಂದ ಕ್ಷೇತ್ರದಲ್ಲಿ ಎಸ್.ಆರ್.ಕಾಶಪ್ಪನವರ ೧೯೮೯, ೧೯೯೪, ೧೯೯೯ ಮೂರು ಸಲ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಒಂದು ಸಲ ಸಚಿವರು ಆಗಿದ್ದರು. ಆದರೆ, ೨೦೦೩ರಲ್ಲಿ ಅವರ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆಗ ಅವರು ಗೆದ್ದು ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ೨೦೦೪ರಲ್ಲಿ ಗೌರಮ್ಮ ಅವರು ಸೋಲು ಕಂಡರು. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಪುತ್ರ ವಿಜಯಾನಂದ ಕಾಶಪ್ಪನವರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತಾದರೂ ಮೊದಲ ಪ್ರಯತ್ನದಲ್ಲೆ ಶಾಸಕರಾಗಲು ಆಗಲಿಲ್ಲ. ೨೦೧೩ರಲ್ಲಿ ಗೆಲುವು ಪಡೆದು ವಿಧಾನಸಭೆ ಪ್ರವೇಶ ಮಾಡಿದರು. ೨೦೨೩ರಲ್ಲಿ ೨ನೇ ಸಲ ಶಾಸಕರಾಗಿದ್ದಾರೆ.
ಉಪ ಚುನಾವಣೆ ಮೂಲಕ ಶಾಸಕರಾಗಿದ್ದ ಆನಂದ ನ್ಯಾಮಗೌಡ :
ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ೨೦೧೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಪಡೆದಿದ್ದ ಸಿದ್ದು ನ್ಯಾಮಗೌಡ ಅವರು ಇನ್ನು ಸರ್ಕಾರ ರಚನೆ ಆಗುವ ಮೊದಲೇ ಅಪಘಾತದಲ್ಲಿ ಸಾವನ್ನಪ್ಪಿದರು. ಅದೇ ವರ್ಷ ನವಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಅವರ ಪಕ್ಷದ ಪಾಲುದಾರ ಸರ್ಕಾರ ಇದ್ದಿದ್ದರಿಂದ ಆನಂದ ನ್ಯಾಮಗೌಡ ಅವರು ದಾಖಲೆಯ ೩೯೪೮೦ ಅಂತರದಲ್ಲಿ ಗೆಲುವ ದಾಖಲಿಸಿ, ವಿಧಾನಸಭೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. ೨೦೨೩ರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ದಿ. ಸಿದ್ದು ನ್ಯಾಮಗೌಡ ಅವರು ದಿ.ರಾಮಕೃಷ್ಣ ಹೆಗಡೆ ಅವರ ವಿರುದ್ಧ ಬಾಗಲಕೋಟೆ ಲೋಕಸಭೆ ಚುನಾವಣೆಗೆ ಸ್ಪಽðಸಿ ಗೆಲುವು ಪಡೆದು ಕೇಂದ್ರದಲ್ಲಿ ಮಂತ್ರಿ ಸಹ ಆಗಿದ್ದರು. ಹಾಗೆಯೇ ಒಂದು ಸಲ ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.
ಬಾದಾಮಿಯಲ್ಲಿ ೧೯೭೮ ಅತ್ಯಂತ ಕಿರಿಯ ವಯಸ್ಸಿನಲ್ಲೆ ಶಾಸಕರಾದ ಹೆಗ್ಗಳಿಕೆ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಸಲ್ಲುತ್ತದೆ. ಅಲ್ಲಿಂದ ೨೦೧೩ ರವರೆಗೆ ಒಟ್ಟು ೫ ಸಲ ಶಾಸಕರಾಗಿದ್ದರು. ೨೦೧೮ರಲ್ಲಿ ಸಿದ್ಧರಾಮಯ್ಯ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ೨೦೨೩ರ ಚುನಾವಣೆಯಲ್ಲಿ ಬಿ.ಬಿ.ಚಿಮ್ಮನಕಟ್ಟಿ ಅವರ ಬದಲಿಗೆ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಅವರು ಗೆದ್ದು ಚಿಮ್ಮನಕಟ್ಟಿ ಕುಟುಂಬದಲ್ಲಿ ತಂದೆ ಬಳಿಕ ಮಗನೂ ಶಾಸಕರಾದ ಪಟ್ಟಿಗೆ ಸರ‍್ಪಡೆಯಾದರು. ಇದಕ್ಕೂ ಮುನ್ನ ಜಿಪಂ ಮೂಲಕ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದ ಭೀಮಸೇನ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಈಗ ಮೇಟಿ ಕುಟುಂಬದ ಉಮೇಶಗೆ ಲಕ್ :
ಇದೀಗ ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಹಾಗೂ ಗುಳೇದಗುಡ್ಡ ಕ್ಷೇತ್ರದಲ್ಲಿ ಮೂರು ಸಲ ಸೇರಿ ಒಟ್ಟು ಐದು ಸಲ ಶಾಸಕರಾಗಿ, ಎರಡು ಸಲ ಸಚಿವರಾಗಿ ಒಂದು ಸಲ ಲೋಕಸಭಾ ಸದಸ್ಯರಾಗಿದ್ದ ಎಚ್.ವೈ.ಮೇಟಿ ಅವರು ಶಾಸಕರಾಗಿದ್ದಾಗಲೇ ೨೦೨೫ರ ನವಂಬರ್ ೪ ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಇದರಿಂದ ಎದುರಾದ ಉಪ ಚುನಾವಣೆಯಲ್ಲಿ ಅವರ ಪುತ್ರ ಉಮೇಶ ಮೇಟಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಉಮೇಶ ಮೇಟಿ ಅವರು ೨೨೩೩೨ ಮತಗಳ ಭಾರಿ ಅಂತರದಿAದ ಗೆಲುವು ಪಡೆದು ವಿಧಾನಸೌಧಕ್ಕೆ ಪ್ರವೇಶವಾಗುತ್ತಿದ್ದಾರೆ.
ಪರಿಷತ್‌ಗೂ ತಂದೆ-ಮಗ ಎಂಟ್ರಿ:
ಇನ್ನು ಜಿಲ್ಲೆಯಲ್ಲಿ ತಂದೆಯ ಬಳಿಕ ಮಗನೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಿದೆ. ದಿ. ಪಿ.ಎಂ.ನಾಡಗೌಡ ಅವರು ೧೯೫೮, ೬೦ ಮತ್ತು ೬೬ ರಲ್ಲಿ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಜೊತೆಗೆ ಸಚಿವರಾಗಿಯೇ ಅಪಾರ ಸೇವೆ ಸಲ್ಲಿಸಿದ್ದರು. ಅವರ ಪುತ್ರ ಡಾ.ಎಂ.ಪಿ.ನಾಡಗೌಡ ಸಹ ೧೯೮೪ ಸತತ ನಾಲ್ಕು ಸಲ ಪದವಿಧರ ಕ್ಷೇತ್ರಕ್ಕೆ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಾಲ್ಕು ಸಲ ಜನತಾ ಪರಿವಾರದಿಂದಲೇ ಗೆದ್ದಿದ್ದಾರೆ.