ರಾಯಚೂರು
ಬೇಸಿಗೆ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಲು ಏರಲಾರಂಭಿಸಿದೆ. ಆದ್ದರಿಂದ ರಾಯಚೂರು ಜಿಲ್ಲೆಯಲ್ಲಿ ಮುಂಬರುವ ಬೇಸಿಗೆಯ ಸಮಯದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಡಿಸಿ ನಿತೀಶ್.ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಸಂಜೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು. ಈ ಭಾಗಕ್ಕೆ ನೀರು ಪೂರೈಸುವ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ತುಂಗಾ ಕಾಲುವೆ ನೀರು ಅವಲಂಭಿಸಿರುವ ಸಿಂಧನೂರು, ಮಾನ್ವಿ, ಮಸ್ಕಿ, ಸಿರವಾರ ಮತ್ತು ರಾಯಚೂರು ತಾಲೂಕುಗಳಲ್ಲಿ ನೀರಿನ ಲಭ್ಯತೆ ಪರಿಸ್ಥಿತಿಯ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು. ಈ ಭಾಗದ ಕೆರೆಗಳಲ್ಲಿ ಈಗಿರುವ ನೀರಿನ ಪ್ರಮಾಣ ಎಷ್ಟು? ಕೆರೆಗಳನ್ನು ಇನ್ಮುಂದೆ ಯಾವ ವೇಳೆಗೆ ತುಂಬಿಸಬೇಕು. ಎನ್ನುವಂತಹ ಅಂಶಗಳ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪುರಸಭೆ, ನಗರಸಭೆ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯ ಆಯಾ ತಾಲೂಕಿನಲ್ಲಿನ ಕೆರೆಗಳಲ್ಲಿನ ನೀರಿನ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳು ಆಯಾ ತಹಸೀಲ್ದಾರಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ರಾಯಚೂರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಪಾಲಿಕೆಯ ಅಧಿಕಾರಿಗಳು ಮತ್ತು ತಹಸೀಲ್ದಾರ ಅವರಿಂದ ಮಾಹಿತಿ ಪಡೆದುಕೊಂಡರು. ಗಣೇಕಲ್ ಜಲಾಶಯ ಮತ್ತು ಅಲ್ಲಿನ ನೀರಿನ ನಿರ್ವಹಣೆ ಕುರಿತು ಗಮನ ಹರಿಸಿ ರಾಯಚೂರು ಸಿಟಿಗೆ ಸಮರ್ಪಕ ಕುಡಿವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಲಿಂಗಸುಗೂರು ತಾಲೂಕಿನಲ್ಲಿ ಕಳೆದ ಬಾರಿ ಬೇಸಿಗೆಯ ಅವಧಿಯಲ್ಲಿ ಕುಡಿವ ನೀರು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಉಂಟಾಗಿತ್ತು. ಈ ವರ್ಷ ಹಾಗಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಬೇಸಿಗೆ ಅವಧಿಯಲ್ಲಿ ತಾಲೂಕಿಗೆ ಇಂತಿಷ್ಟು ಪ್ರಮಾಣದ ನೀರು ಬೇಕು. ನಾಂರಾಯಣಪುರ ಡ್ಯಾಮನ ಅಧಿಕಾರಿಗಳಿಗೆ ನೀರಿನ ಬೇಡಿಕೆಯ ಪತ್ರ ತುರ್ತು ರವಾನೆಗೆ ಕ್ರಮ ವಹಿಸಬೇಕು ಎಂದರು.
ಎಲ್ಲ ತಾಲೂಕುಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಟಾಸ್ಕಪೋರ್ಸ್ ಸಭೆಗಳು ನಡೆಯುವಂತೆ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯ ವಹಿಸಿ ಅಗತ್ಯ ವ್ಯವಸ್ಥೆ ಮಾಡಬೇಕು. ಕಾಲರಾ, ವಾಂತಿ ಬೇದಿ ಪ್ರಕರಣಗಳು ದಾಖಲು ಆಗದ ಹಾಗೆ ಮುಂಜಾಗ್ರತೆ ವಹಿಸಿ ನೀರಿನ ಪರೀಕ್ಷೆಗೆ ಮೊದಲಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
2025-2026ನೇ ವರ್ಷದಲ್ಲಿ ಸಾಕಷ್ಟು ಮಳೆಯಾಗಿ ಅಂತರ್ಜಲ ನೀರಿನ ಮಟ್ಟ ಸುಧಾರಿಸಿದೆ. ಹಾಗಾಗಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಬೋರವೆಲ್ ಕೊರೆಯಿಸಲು ಕ್ರಮ ವಹಿಸಬೇಕು. ಕೊಳವೆಬಾವಿ ವಿಫಲವಾದಲ್ಲಿ ಹತ್ತಿರದ ಖಾಸಗಿ ಬೋರವೆಲ್‌ಗಳಿಂದಲೇ ನೀರು ಪೂರೈಕೆಗೆ ಹೆಚ್ಚಿನ ಒತ್ತು ಕೊಡಬೇಕು. ಟ್ಯಾಂಕರ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬಾರದೆಂದು ಸೂಚನೆ ನೀಡಿದರು.