ಶಹಾಪುರ ತಾಲೂಕಿನ ದಿಗ್ಗಿಯಲ್ಲಿ ಮಂಗಳವಾರ ಸಂಜೆ ಶ್ರೀ ಸಂಗಮೇಶ್ವರ ರಥೋತ್ಸವ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಶಹಾಪುರ: ಭಾವೈಕ್ಯತೆಗೆ ಹೆಸರಾದ ದಿಗ್ಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರರ ಭವ್ಯ ರಥೋತ್ಸವ ಮಂಗಳವಾರ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಜರುಗಿತು.
ಸಗರಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ದಿಗ್ಗಿ ಸಂಗಮೇಶ್ವರರಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯ ನೆರವೇರಿತು. ಗವಿಯೊಳಗಿರುವ ಸಂಗಮೇಶ್ವರ ಪ್ರತಿಮೆಗೆ ಪುಷ್ಪಾಲಂಕಾರ, ವಿಶೇಷ ಅಭಿಷೇಕ, ನೈವೇದ್ಯ ಅರ್ಪಿಸಲಾಯಿತು. ಸಂಜೆ ರಥದ ಮೇಲೆ ಕಳಸಾರೋಹಣ ನೆರವೇರಿಸಿದ ಬಳಿಕ ದೇವಸ್ಥಾನದ ಹಿರಿಯ ಅರ್ಚಕ ದೇವಯ್ಯ ಸ್ವಾಮಿಗಳು ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ರಥವೇರಿ ಕುಳಿತರು.
ಸಂಗಮೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳೊಂದಿಗೆ ಮಹಾರಥ ಸಾಗುತ್ತಿದ್ದಂತೆ ನೆರೆದ ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿಭಾವ ಮೆರೆದರು. ಮಹಾರಾಷ್ಟç, ಆಂಧ್ರಪ್ರದೇಶ ಸೇರಿ ನೆರೆಯ ಕಲಬುರಗಿ, ವಿಜಯಪುರ ಹಾಗೂ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಸಂಗಮೇಶ್ವರರ ದರ್ಶನ ಪಡೆದು ಪುನೀತರಾದರು.
ರಥೋತ್ಸವದ ಸಂದರ್ಭದಲ್ಲಿ ರಂಗುರಂಗಿನ ಪಟಾಕಿ ಹಾಗೂ ಸಿಡಿಮದ್ದಿನ ಪ್ರದರ್ಶನ ಆಕರ್ಷಿಸಿತು. ಆಕಾಶದೆತ್ತರಕ್ಕೆ ಚಿಮ್ಮಿದ ಬಣ್ಣಬಣ್ಣದ ಪಟಾಕಿಗಳು ರಾತ್ರಿ ಆಕಾಶದಲ್ಲಿ ರಂಗಿನ ಚಿತ್ತಾರ ಮೂಡಿಸಿ ನೆರೆದಿದ್ದ ಭಕ್ತರ ಮನಸೂರೆಗೊಳಿಸಿದವು.
ವಾರಪೂರ್ತಿ ಜಾತ್ರೆ ಸಂಭ್ರಮ
ರಥೋತ್ಸವದೊಂದಿಗೆ ದಿಗ್ಗಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಒಂದು ವಾರ ನಡೆಯಲಿದೆ. ಜಾತ್ರೆಯಲ್ಲಿ ವಿವಿಧ ಸಿಹಿತಿಂಡಿ, ವಸ್ತುಗಳ ಮಳಿಗೆ, ಮಕ್ಕಳ ಆಟಿಕೆ, ಮನರಂಜನಾ ಕೇಂದ್ರ, ಜೋಕಾಲಿ, ಕುದುರೆ ಓಟ ಸೇರಿ ವಿವಿಧ ಆಕರ್ಷಣೆಗಳು ಜಾತ್ರೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ. ದಿಗ್ಗಿ ಸಂಗಮೇಶ್ವರರ ರಥೋತ್ಸವದಲ್ಲಿ ಮೊಳಗಿದ ಜಯಘೋಷದ ನಡುವೆ ಭಕ್ತಿಯೊಂದಿಗೆ ಭಾವೈಕ್ಯತೆಯೂ ಬೆರೆತು ಸಗರನಾಡಿನ ಸೌಹಾರ್ದ ಪರಂಪರೆಯನ್ನು ಮತ್ತೊಮ್ಮೆ ಸಾರಿತು.