ಸುಭಾಷಚಂದ್ರ ಕಟಕಟಿ 
ರಾಜ್ಯ

ಶಾಸಕ ಕಂದಕೂರ ಹೋರಾಟಕ್ಕೆ ಸಂದ ಜಯ

ಚನ್ನಬಸಯ್ಯ ಗುರುವಿನ
ಯಾದಗಿರಿ: ರಾಜ್ಯ ಸರ್ಕಾರ ಬರಪೀಡಿತ ತಾಲೂಕಿನ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ೫ ತಾಲೂಕು ಗ್ರೌಂಡ್ ಟ್ರೂಥಿಂಗಿಗೆ ಸೇರ್ಪಡೆ ಮಾಡಿದ್ದು ಜೆಡಿಎಸ್ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ವಾಸ್ತವವಾಗಿ ಯಾದಗಿರಿ ಮತ್ತು ಗುರಮಠಕಲ್ ತಾಲೂಕುಗಳು ಹಿಂದೊಂದೂ ಕಾಣದಂಥ ಬರ ಪರಸ್ಥಿತಿ ಅನುಭವಿಸುತ್ತಿದ್ದು, ಈ ಬಗ್ಗೆ ನಮ್ಮ ಶಾಸಕ ಶರಣಗೌಡ ಕಂದಕೂರ ಅವರು ಸುದ್ದಿಗೋಷ್ಠಿ ನಡೆಸಿದ್ದಲ್ಲದೆ, ಬೆಂಗಳೂರಿನ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಯಾದಗಿರಿ ಮತ್ತು ಗುರಮಠಕಲ್ ತಾಲೂಕು ಬರ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರಿದ್ದರು.
ಅಲ್ಲದೆ `ಕ್ರಾಪ್‌ಲಾಸ್ ಜಿಟಿ' ಆ್ಯಪ್ ಮೂಲಕ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ (ಗ್ರೌಂಡ್ ಟ್ರೂಥಿಂಗ್) ನಡೆಸಿ ವರದಿ ಪಡೆದುಕೊಳ್ಳಲು ಆಗ್ರಹಿಸಿದ್ದರು. ಶಾಸಕರ ಹೋರಾಟದಿಂದ ಎಚ್ಚೆತ್ತುಕೊಂಡ ಸರ್ಕಾರ ಕೊನೆಗೂ ಐದು ತಾಲೂಕುಗಳು ಸಹ ಬರಪೀಡಿತ ಪಟ್ಟಿಗೆ ಸೇರಿಸಲು ಗ್ರೌಂಡ್ ಟ್ರೂಥಿಂಗ್ ವರದಿ ಮಾಡಲು ಆಯ್ಕೆ ಮಾಡಿರುವುದು ಸ್ವಾಗತಿಸಿರುವ ಅವರು, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಮತ್ತು ಬರದ ವಾಸ್ತವ ಸ್ಥಿತಿ ಅರಿಯಲು ಜಿಲ್ಲೆಗೆ ಭೇಟಿ ನೀಡಲಿದ್ದು, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಸಧ್ಯ ಮಧ್ಯಮ ಬರಗಾಲ ಎಂದು ಘೋಷಿಸಿದ್ದು ಗುರಮಠಕಲ್ ತಾಲೂಕು ತೀವ್ರ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಅವರು ಹೇಳಿದರು.