ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಹೋರಾಟ ನಿರತ ಸಂತ್ರಸ್ತರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಮನವೊಲಿಸುತ್ತಿರುವುದು. ಪುನರ್ವಸತಿ ಅಧಿಕಾರಿ ಅರುಣಕುಮಾರ ಕುಲಕರ್ಣಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಮಲ್ಲಿಕಾರ್ಜುನ ಕೆಂಧೂಳಿ, ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಬಸವರಾಜ ಮುಳ್ಳೂರ, ಭೀಮಪ್ಪ ಅಡಿವಿಹಾಳ, ಶರಣಪ್ಪ ಮುಳ್ಳೂರ, ಕಲ್ಲಪ್ಪ ಅನೇಹೊಸೂರ ಇತರರಿದ್ದರು. 
ರಾಜ್ಯ

ಶಾಶ್ವತ ಪರಿಹಾರಕ್ಕಾಗಿ ಸಂತ್ರಸ್ತರ ಆಕ್ರೋಶ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಇದ್ದಲಗಿ ಧರಣಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ
  • 109ನೇ ದಿನಕ್ಕೆ ಅಹೋರಾತ್ರಿ ಧರಣಿ

ಹುನಗುಂದ: ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಲಭ್ಯ ಕಲ್ಪಿಸಬೇಕು, ಪ್ರತಿ ಸಂತ್ರಸ್ತರಿಗೆ ನಾಲ್ಕು ಗುಂಟೆ ನಿವೇಶನ ಮತ್ತು ಎರಡನೇ ಕಂತಿನ ಪರಿಹಾರ ಹಣ ಒದಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ 108ನೇ ದಿನಕ್ಕೆ ಕಾಲಿಟ್ಟಿದೆ.

ಮುಳುಗಡೆಯಾಗಿರುವ 10 ಗ್ರಾಮಗಳ ಸಂತ್ರಸ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದರು ಈ ವರೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಿರಲಿಲ್ಲ. ಇದೀಗ ಅಧಿಕಾರಿಗಳು ಭೇಟಿ ನೀಡಿ ಸಂತಸ್ತರ ಮನವೊಲಿಸುವ ಪ್ರಯತ್ನ ಮಾಡಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಮಲ್ಲಿಕಾರ್ಜುನ ಕೆಂಧೂಳಿ ಮಾತನಾಡಿ, ಇದ್ದಲಗಿ ಪುನರ್ವಸತಿ ಕೇಂದ್ರದಲ್ಲಿ ಬೆಳೆದ ಮುಳ್ಳುಕಂಟಿಗಳನ್ನು ತೆರವುಗೊಳಿಸಲಾಗಿದೆ. ನೀರು ಸರಬರಾಜು ವ್ಯವಸ್ಥೆ ದುರಸ್ತಿ ಮಾಡಿದ್ದೇವೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ವ್ಯವಸ್ಥೆಯಾಗಿದೆ. ಶಾಶ್ವತ ವಿದ್ಯುತ್ ಸರಬರಾಜು ವ್ಯವಸ್ಥೆಗಾಗಿ ಯೋಜನಾ ಪ್ರಸ್ತಾವನೆ ಕಳಿಸಲಾಗಿದೆ.
ಶಿಥಿಲಗೊಂಡ ತಗಡಿನ ಶೆಡ್ ದುರಸ್ತಿಗಾಗಿ 50 ಲಕ್ಷ ರೂಪಾಯಿ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಉಳಿದ 23 ಲಕ್ಷ ರೂಪಾಯಿಗಳು ಶೀಘ್ರದಲ್ಲಿ ಮಂಜೂರಾಗಲಿವೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಕೆಲಸಗಳನ್ನು ಮಾಡಿಸಿದ್ದೇವೆ ಎಂದು ಹೇಳಿದರು.
ಪುನರ್ವಸತಿ ಅಧಿಕಾರಿ ಅರುಣಕುಮಾರ ಕುಲಕರ್ಣಿ ಮಾತನಾಡಿ, 2009ರ ಮತದಾರರ ಯಾದಿಯಲ್ಲಿ ಹೆಸರಿರದ ಕಾಯಂ ರಹವಾಸಿಗಳಿಗೆ ಗ್ರಾಮ ಪಂಚಾಯಿತಿಯ ಠರಾವಿನ ಆಧಾರದ ಮೇಲೆ ಹಕ್ಕು ಪತ್ರ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಅರ್ಜಿ ಸಲ್ಲಿಸಿದ 30 ಜನರ ಹಕ್ಕು ಪತ್ರ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಈಗಲಾದರೂ ಧರಣಿ ಕೈಬಿಡುವಂತೆ ವಿನಂತಿಸಿಕೊಂಡರು.
ತರಾಟೆಗೆ ತೆಗೆದುಕೊಂಡ ಸಂತಸ್ತರು: ಇದಕ್ಕೆ ಒಪ್ಪದ ಹೋರಾಟ ನಿರತ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪುನರ್ವಸತಿ ಕೇಂದ್ರದ ನಿರ್ಮಾಣ ಆರಂಭವಾಗಿ 15 ವರ್ಷಗಳಾದರೂ ಇನ್ನೂ ತಾತ್ಕಾಲಿಕ ಪರಿಹಾರದ ಕುರಿತು ಮಾತನಾಡುತ್ತಿದ್ದೀರಿ. ಯಾವುದೇ ಅಧಿಕಾರಿ ಶಾಶ್ವತ ಪರಿಹಾರದ ಕುರಿತು ಮಾತನಾಡುವುದಿಲ್ಲ ಏಕೆ? ಎಂದು ಸಂತ್ರಸ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೂಲ ಸೌಕರ್ಯ ನಿರ್ಮಾಣಕ್ಕೆ ಎರಡು ದಶಕಗಳೇ ಗತಿಸಿದರೂ ಇನ್ನೂ ಸೂಕ್ತ ವ್ಯವಸ್ಥೆಯಾಗಿಲ್ಲ. ಅದರ ಕುರಿತು ಸಣ್ಣಪುಟ್ಟ ಕ್ರಮ ತೆಗೆದುಕೊಂಡಿರುವದನ್ನು ಮಹಾನ್ ಸಾಧನೆಯಂತೆ ಬಿಂಬಿಸುತ್ತಿದ್ದೀರಿ. ಇದನ್ನೇ ಪುನಃ ಹೇಳುವ ಅವಶ್ಯಕತೆ ಇಲ್ಲ ಎಂದು ಸಂತ್ರಸ್ತರು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಬಸವರಾಜ ಮುಳ್ಳೂರ, ಭೀಮಪ್ಪ ಅಡಿವಿಹಾಳ, ಶರಣಪ್ಪ ಮುಳ್ಳೂರ, ಕಲ್ಲಪ್ಪ ಆನೇಹೊಸೂರ, ಹಬೀಬಸಾಬ ನಿಡಗುಂದಿ, ಮೀನಾಕ್ಷಿ ಗಂಜಿಹಾಳ, ಸರೋಜಮ್ಮ ಹಿರೇಮಠ , ಸೋಮಣ್ಣ ಪೂಜಾರಿ, ಸಿದ್ದರಾಮಪ್ಪ ದೇಸಾಯಿ, ರಂಗಪ್ಪ ತಳ್ಳಿಕೇರಿ ಸೇರಿ ಹತ್ತು ಹಳ್ಳಿ ಸಂತ್ರಸ್ತರು ಭಾಗವಹಿಸಿದ್ದರು.
"

ಕಾಮಗಾರಿ ಕೈಗೊಂಡಿಲ್ಲ ಏಕೆ?

ಎಮ್ಮೆಟ್ಟಿ ಮತ್ತು ಅನಪಕಟ್ಟಿಯಿಂದ ಬಂದಿದ್ದ ಸಂತ್ರಸ್ತರು ಧರಣಿ ಕೇವಲ ಇದ್ದಲಗಿ ಗ್ರಾಮಕ್ಕೆ ಸಂಬಂಧಿಸಿದ್ದಲ್ಲ. ಬಾಧಿತ ಎಲ್ಲ 10 ಗ್ರಾಮಗಳ ಸಂತ್ರಸ್ತರ ಸಮಸ್ಯೆ ಬೇಡಿಕೆಗಳು ಈಡೇರಿಸಬೇಕು. ಎಮ್ಮೆಟ್ಟಿ ಗ್ರಾಮದ ಪುನರ್ವಸತಿ ಕೇಂದ್ರಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ 15 ಎಕರೆ ಭೂಮಿಯ ಪರಿಹಾರ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಆದರೆ ಉಳಿದ 50 ಎಕರೆ ಭೂಮಿಯಲ್ಲಿ ಯಾವುದೇ ಕಾಮಗಾರಿ ಏಕೆ ಕೈಗೊಂಡಿಲ್ಲ. ನಾವು ಈ ಕುರಿತು ಪ್ರತ್ಯೇಕ ಮನವಿಯನ್ನೂ ಸಲ್ಲಿಸಿದ್ದೇವೆ ಎಂದು ತಿಳಿಸಿದರು.