ಗಗನಕ್ಕೇರಿದರ ತರಕಾರಿ ಬೆಲೆ  
ರಾಜ್ಯ

ಗಗನಕ್ಕೇರಿದ ತರಕಾರಿ ಬೆಲೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • ಟೊಮ್ಯಾಟೊ ದರ ಕೆ.ಜಿ.ಗೆ ನೂರು ರೂ. ತಲುಪುವ ಸಾಧ್ಯತೆ
  • ನುಗ್ಗಿಕಾಯಿ ಕೆ.ಜಿ. 350-400 ರೂ.
  • ಹವಾಮಾನ ವ್ಯತ್ಯಯದಿಂದ ತರಕಾರ ದರ ಏರಿಕೆ
ಬೆಂಗಳೂರು: ಎಲ್ಲರ ಮನೆಗಳಲ್ಲಿ ನಿತ್ಯದ ಆಹಾರ ತಯಾರಿಕೆಯಲ್ಲಿ ಪ್ರಮುಖಪಾತ್ರ ವಹಿಸುವ ಟೊಮ್ಯಾಟೊ ದರ ಕಳೆದೆರಡು ವಾರಗಳಿಂದೀಚೆಗೆ ಗಗನಕ್ಕೆ ಏರಿದೆ. ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದಾಗಿ ಶೀಘ್ರದಲ್ಲೇ 100 ರೂ. ದಾಟುವ ಸಾಧ್ಯತೆಗಳಿವೆ. ಇದರೊಂದಿಗೆ ಇತರೆ ತರಕಾರಿಗಳ ದರವೂ ಏರುಮುಖವಾಗುತ್ತಿದೆ.
ಅಕ್ಟೋಬರ್‌ವರೆಗೆ ಪ್ರೀಮಿಯಂ ಗುಣಮಟ್ಟದ ಟೊಮ್ಯಾಟೊ 15 ಕೆಜಿ ಬಾಕ್ಸ್ ದರ 500 ರೂ.ಗಳಿಗೆ ಮಾರಾಟವಾಗುತ್ತಿತ್ತು. ಈಗ 750ರಿಂದ 850 ರೂ.ಗೆ ಹರಾಜಾಗುತ್ತಿವೆ. ಉತ್ತಮ ಗುಣಮಟ್ಟದ ಟೊಮ್ಯಾಟೊ 900-1000 ರೂ.ವರೆಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮೋಡಕವಿದ, ಲಘು ಮಳೆಯಂತಹ ವಾತಾವರಣದಲ್ಲಿನ ಏರುಪೇರು ದಿನನಿತ್ಯದ ಆಗಮನ ಮತ್ತು ಬೇಡಿಕೆಯ ನಡುವಿನ ಹೊಂದಾಣಿಕೆಯಿಲ್ಲದ ಕಾರಣ ಬೆಲೆ ಏರಿಕೆಯಾಗಿದೆ. ಭಾರತದ ಪೂರ್ವ ಕರಾವಳಿ ಮತ್ತು ಈಶಾನ್ಯ ಭಾಗಗಳಲ್ಲಿ ಮೋಡಕವಿದ ವಾತಾವರಣ ಇಲ್ಲದಿದ್ದರೆ, ಬೆಲೆ ಈಗ 100 ರೂ.ಗಳನ್ನು ತಲುಪಿರುತ್ತಿತ್ತು.

ನಿರ್ವಹಣೆಯೇ ಸವಾಲು:

ಇತರ ಅನೇಕ ತರಕಾರಿಗಳಿಗೆ ಹೋಲಿಸಿದರೆ ಟೊಮ್ಯಾಟೊ ಭಿನ್ನವಾದದ್ದು, ಹೆಚ್ಚು ಹಾಳಾಗುವ ಗುಣ ಹೊಂದಿದೆ. ಇದು ವ್ಯಾಪಾರಿಗಳಿಗೆ ಸಂಗ್ರಹಣೆ ಮತ್ತು ನಿರ್ವಹಣೆಗೆ ಸವಾಲಾಗಿ ಪರಿಣಮಿಸುತ್ತದೆ. ಅನಿಯಮಿತ ಮಳೆ ಮತ್ತು ಏರಿಳಿತದ ತಾಪಮಾನದಿಂದ ಕೃಷಿ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.

ನಷ್ಟ ಅನುಭವಿಸಿದ್ದ ರೈತರು:

ಜೂನ್-ಜುಲೈನಲ್ಲಿ ಹೆಚ್ಚಿನ ರೈತರು ಟೊಮ್ಯಾಟೊ ಬೆಳೆದಿದ್ದರಿಂದ ಬೆಲೆ ಸಿಗದೆ ಭಾರಿ ನಷ್ಟ ಅನುಭವಿಸಿದ್ದರು. ಹಾಗಾಗಿ ಈ ಬಾರಿ ಟೊಮ್ಯಾಟೊ ಬದಲಿಗೆ ರೈತರು ಅನ್ಯ ಬೆಳೆಗಳತ್ತ ಗಮನ ಹರಿಸಿದರು. ಇದರಿಂದ ಉತ್ಪಾದನೆ ಕಡಿಮೆಯಾಗಿದೆ. ಜತೆಗೆ, ಎರಡು ವಾರಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೊ ಕಾಯಿಗಳು ನೆಲಕ್ಕುರುಳಿದರೆ, ಇನ್ನೂ ಕೆಲವು ಕಾಯಿ, ಹಣ್ಣುಗಳು ನೀರು ತುಂಬಿಕೊಂಡು ಹಾಳಾಗಿವೆ. ಪರಿಣಾಮ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ದರ ಹೆಚ್ಚಾಗಿದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ಸಗಟು ವ್ಯಾಪಾರಿ ದಯಾನಂದ್.

ಇತರೆ ತರಕಾರಿ ದರವೂ ಏರಿಕೆ

ಹವಾಮಾನ ವೈಪರಿತ್ಯದಿಂದ ಟೊಮ್ಯಾಟೊ ಮಾತ್ರವಲ್ಲದೆ, ಇತರೆ ತರಕಾರಿ ದರವೂ ಏರುಮುಖವಾಗಿವೆ. ಸಗಟು ದರದಲ್ಲಿ 30-40 ರೂ. ಇದ್ದ ತರಕಾರಿಗಳು 50-60 ರೂ.ಗೆ ಏರಿಕೆಯಾಗಿವೆ. 150-180 ರೂ. ಇದ್ದ ನುಗ್ಗೆಕಾಯಿ ದರ ಕೆ.ಜಿ.ಗೆ 350-400 ರೂ. ತಲುಪಿದೆ. ಜಿಲ್ಲರೆ ಮಾರಾಟದಲ್ಲಿ ಒಂದು ನುಗ್ಗಿಕಾಯಿ 20 ರೂ. ಗೆ ಮಾರಾಟವಾಗುತ್ತಿದೆ. ಹಸಿಮೆಣಸಿನಕಾಯಿ 100-150 ರೂ., ಹುರಳಿಕಾಯಿ, ಕ್ಯಾರೆಟ್, ದಪ್ಪಮೆಣಸಿಕನಕಾಯಿ, ಬದನೆಕಾಯಿ 60 ರೂ., ಆಲೂಗಟ್ಟೆ , ಬೀಟ್‌ರೂಟ್ 50 ರೂ., ಬೂದಗುಂಬಳ ದರ 25-30 ರೂ. ಇದ್ದದ್ದು, 40-50 ರೂ. ಆಗಿದೆ. ಇವುಗಳ ಹೊರತುಪಡಿಸಿ ಮೂಲಂಗಿ, ಸೋರೆಕಾಯಿ, ಪಡವಲಕಾಯಿ ಹಾಗೂ ಸೊಪ್ಪುಗಳ ದರ ಕಡಿಮೆ ಇದೆ.
ಹುಳಿ ರುಚಿಗೆ ಹೆಸರುವಾಸಿ:
ಅಡುಗೆ ತಯಾರಿಕೆಯಲ್ಲಿ ಹುಳಿ ರುಚಿಗೆ ಹೆಸರುವಾಸಿಯಾದ ಸ್ಥಳೀಯ ಪ್ರಭೇದಗಳು ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿವೆ, ಆದರೆ ಉತ್ತರ ಮಾರುಕಟ್ಟೆಗಳಲ್ಲಿ ಹೈಬ್ರಿಡ್ ಪ್ರಭೇದಗಳಿಗೆ ಆದ್ಯತೆ ಹೆಚ್ಚು. ಬೆಂಗಳೂರು ಮತ್ತು ತಮಿಳುನಾಡಿನಲ್ಲಿರುವ ಸಣ್ಣ ತಿನಿಸುಗಳ ತಯಾರಿಕೆಗೆ ಸ್ಥಳೀಯ ಪ್ರಭೇದಗಳು ಆದ್ಯತೆ ಪಡೆದುಕೊಂಡಿವೆ. ಗಣನೀಯ ಅವಧಿಯನ್ನು ಹೊಂದಿರುವ ಹೆಚ್ಚಿನ ಹೈಬ್ರಿಡ್ ಪ್ರಭೇದಗಳನ್ನು ಭಾರತದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಬೇಡಿಕೆ ಹೊಂದಿವೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.
ಕುಸಿದ ಈರುಳ್ಳಿ ದರ
ಸಾಮಾನ್ಯವಾಗಿ ಈರುಳ್ಳಿ ದರ ನವೆಂಬರ್ ತಿಂಗಳಲ್ಲಿ ಗಗನಕ್ಕೇರುತ್ತದೆ. ಆದರೆ, ಈ ಬಾರಿ ಕುಸಿದಿದೆ. ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಅಲ್ಲದೆ, ಕರ್ನಾಟಕದ ಬಳ್ಳಾರಿ, ಬೀದರ್ ಸೇರಿಇತರೆಡೆಗಳಲ್ಲೂ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ಹೀಗಾಗಿ, ಬೆಲೆ ಇಳಿಕೆಯಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ ಕೆ.ಜಿ.ಗೆ 5 ರೂ. ನಿಂದ ಆರಂಭವಾಗಿ 15 ರೂ.ವರೆಗೆ ಇದ್ದರೆ, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 100 ರೂ. ಗೆ 4-5 ಕೆ.ಜಿ. ಮಾರಾಟವಾಗುತ್ತಿದೆ.