ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಜಗದ್ಗುರು ಪಂಚಪೀಠಾಧೀಶ್ವರರು, ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು ಉಪಸ್ಥಿತರಿದ್ದರು.  
ರಾಜ್ಯ

ವೀರಶೈವ ಧರ್ಮಕ್ಕೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ; ಸಿಎಂ ಡಿಕೆಶಿ ವಿಶ್ಲೇಷಣೆ

ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರು : ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಬೇಕೆಂಬ ಮಾತು ಸಮುದಾಯದ ಮುಖಂಡರು ಹೇಳುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಮುದಾಯ ತಾನಷ್ಟೇ ಒಗ್ಗೂಡುವುದಲ್ಲ ಇಡೀ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಧರ್ಮದ ಮೂಲ ಆಶಯವಾದ ಮಾನವ ಧರ್ಮದ ಸಂದೇಶ ಸಾಕಾರಗೊಳ್ಳಬೇಕು. ಎಲ್ಲ ವರ್ಗ, ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಈ ಆಶಯವನ್ನು ಕಾರ್ಯರೂಪಕ್ಕೆ ತರುವ ಅಗತ್ಯವಿದೆ. ನಾಡಿನ ಎಲ್ಲ ಪ್ರಮುಖ ಮಠಗಳು ಸರ್ಕಾರ ಮಾಡಲು ಸಾಧ್ಯವಾಗದಷ್ಟು ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡಿವೆ. ಧರ್ಮದ ಜ್ಯೋತಿಯನ್ನು ಬೆಳಗಿಸುವ ಮೂಲಕ ಅಜ್ಞಾನ ಹಾಗೂ ಅಸತ್ಯವನ್ನು ದೂರ ಮಾಡಿ ಜ್ಞಾನ ಮತ್ತು ಮಾನವೀಯತೆಯ ಬೆಳಕು ಹರಡಬೇಕು. ಈ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸಮಾರಂಭದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರಾದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು, ಶ್ರೀಶೈಲ ಡಾ.ಚನ್ನಸಿದ್ಧರಾಮ ಜಗದ್ಗುರುಗಳು, ಶ್ರೀಕಾಶೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಕ್ತರರಾದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 300ಕ್ಕೂ ಹೆಚ್ಚು ಮಠಾಧೀಶರು, ಸಚಿವ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಗಣೇಶ ಹುಕ್ಕೇರಿ, ಸಂಸದ ರಾಜಶೇಖರ್ ಹಿಟ್ನಾಳ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಡಿ.ಎಸ್.ಮ್ಯಾಕ್ಸ್ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಗದ್ಗುರುಗಳು, ಶಿವಾಚಾರ್ಯರು, ಗಣ್ಯರು

2 ಎಕರೆ ಜಾಗ ಘೋಷಿಸಿದ ಸಿಎಂ

1981ರಲ್ಲಿ ಸ್ಥಾಪನೆಯಾಗಿ ಕಳೆದ 45 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಗೆ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದಿಂದ 2 ಎಕರೆ ಭೂಮಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಸಿಎಂ ಆರಾಧ್ಯ ದೈವವಾಗಿರುವ ಶ್ರೀ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡುವ ಸಂಸ್ಥೆಯ ಮನವಿಗೆ ಸ್ಪಂದಿಸಿದ ಸಿಎಂ, ‘ಜಾಗ ನಂದು, ಕಟ್ಟಡ ನಿಮ್ದು’ ಎನ್ನುವ ಮೂಲಕ ಕಟ್ಟಡ ನಿರ್ಮಾಣವನ್ನು ಎಲ್ಲ ಸ್ವಾಮೀಜಿಗಳು, ಸಮಾಜ ಬಾಂಧವರು ಸೇರಿ ನಿರ್ಮಿಸಬೇಕು. ಆಗ ಅದು ಸಮಾಜದ ಆಸ್ತಿಯಾಗಿ ಉಳಿಯಲಿದೆ ಎಂದು ಕಿವಿಮಾತು ಹೇಳಿದರು.

ನೂತನವಾಗಿ ಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆಂಬ ಕಾರಣಕ್ಕೆಮುಖ್ಯಂಮತ್ರಿ ಡಿ.ಕ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಧರ್ಮಕ್ಕೆ ಜಗದ್ಗುರು ಪಂಚಾಚಾರ್ಯರು ಮತ್ತು ಬಸವಾದಿ ಶರಣರು ಎರಡು ಕಣ್ಣುಗಳಿದ್ದಂತೆ. ಧರ್ಮದ ಮೂಲ ಬೇರಿನಂತಿರುವ ರೇಣುಕಾದಿ ಆಚಾರ್ಯರನ್ನು ಗೌರವಿಸುವುದರ ಜೊತೆಗೆ ಬಸವಾದಿ ಶರಣರನ್ನು ಗೌರವಿಸುವ ಪರಿಪಾಠ ಸಮಾಜದಲ್ಲಿ ಬೆಳೆದುಕೊಂಡು ಬರಬೇಕು.
ಡಾ.ವೀರಸೋಮೇಶ್ವರ ಜಗದ್ಗುರುಗಳು, ಶ್ರೀರಂಭಾಪುರಿ ಪೀಠ
ವೀರಶೈವ ಧರ್ಮವು ಸಕಲ ಜೀವಿಗಳ ಒಳಿತನ್ನು ಬಯಸುವ ಧರ್ಮವಾಗಿದೆ. ಪಂಚಪೀಠಾಧೀಶ್ವರರು ಕಾಲಕಾಲಕ್ಕೆ ಸಮಾಜದ ವಿವಿಧೆಡೆ ಸಂಚರಿಸಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಜನರಲ್ಲಿ ಸಂಸ್ಕಾರ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಬಸವಣ್ಣನವರ ಸಕಲ ಜೀವಾತ್ಮರಿಗೆ ಲೇಸಾಗಲಿ ಎಂಬ ಆಶಯದಂತೆ ಸೌಹಾರ್ದತೆ, ಸಹಬಾಳ್ವೆಗೆ ಆದ್ಯತೆ ನೀಡಬೇಕು. ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು. ಇದನ್ನು ಬೇರ್ಪಡಿಸಲು ಎಂದಿಗೂ ಸಾಧ್ಯವಿಲ್ಲ.
ಈಶ್ವರ ಖಂಡ್ರೆ, ಅಭಾವೀಮ ಅಧ್ಯಕ್ಷ