ಬೆಂಗಳೂರು : ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಜನ್ಮ ಸುವರ್ಣ ಮಹೋತ್ಸವ ಹಾಗೂ 30ನೇ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಡಿ.3ರಿಂದ 7ರವರೆಗೆ ನಡೆಯುವ ವೀರಭದ್ರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.3ರಂದು ಬೆಳಗ್ಗೆ ಧರ್ಮ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಲಿಂಗೈಕ್ಯ ಸುವರ್ಣಲಿಂಗ ಶಿವಾಚಾರ್ಯ ಸ್ವಾಮಿಗಳು 25ನೇ ವರ್ಷದ ಪುಣ್ಯಾರಾಧನೆ ನಡೆಯಲಿದೆ. ಅಂದು ಸಂಜೆ ನಡೆಯುವ ಶ್ರೀಗಳ ಜನ್ಮ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕೈಲಾಶ್ರಮದ ಮಹಾಮಂಡಲೇಶ್ವರ ಶ್ರೀಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಂದು ಶ್ರೀಗಳ ‘ಸುವರ್ಣ ಬೋಧಾಮೃತ’ ಕೃತಿ ಬಿಡುಗಡೆಯಾಗಲಿದ್ದು, ನಂತರ ತತ್ವರಸಾನುಭವ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.4ರಂದು ಬೆಳಗ್ಗೆ ಹೋಮ-ಹವನ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸರ್ವ ಸಮುದಾಯ ಸಂಗಮ ಸಮಾವೇಶ ನಡೆಯಲಿದ್ದು, ನಾಡಿನ ಎಲ್ಲ ಸಮುದಾಯದ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅಂದು ಶೈವಾಗಮಗಳು ಮತ್ತು ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಆರ್ಎಸ್ಎಸ್ ಸಹ ಸರಕಾರ್ಯವಾಹ ಮುಕುಂದ್ಜಿ ಲೋಕಾರ್ಪಣೆ ಮಾಡಲಿದ್ದಾರೆ.
ಡಿ.5ರಂದು ಜಗದ್ಗುರು ಪಂಚಪೀಠಾಧೀಶ್ವರರ ಸಾನಿಧ್ಯದಲ್ಲಿ ಸುವರ್ಣ ಮಹೋತ್ಸವ ಮತ್ತು ಸುವರ್ಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಜೆ ಶ್ರೀಮಠದ ಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ನಡೆಯಲಿದೆ.
ಡಿ.6ರಂದು ಸುತ್ತೂರು, ಸಿದ್ದಗಂಗೆ, ಹುಬ್ಬಳ್ಳಿ ಮತ್ತು ನೊಣವಿನಕೆರೆ ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ನಿರ್ಮಾಣಗೊಂಡಿರುವ ಎನ್ಪಿಎಸ್ ಶಾಲಾ ಕಟ್ಟಡವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಅಂದು ಸಂಜೆ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಬಸವೇಶ್ವರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ನಂತರ ಆದಿಚುಂಚನಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜಾನಪದ ವಿಭೂತಿ ಮತ್ತು ಜಾನಪದ ಜಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿ.7ರಂದು ವಿಶೇಷವಾಗಿ ಅಬ್ಬೆತುಮಕೂರಿನ ಡಾ.ಗಂಗಾಧರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕ್ಷೇತ್ರನಾಥ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಪ್ರಾಂತ್ಯಗಳ ನೂರಾರು ಮಠಾಧೀಶರು, ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಅರವಿಂದ ಲಿಂಬಾವಳಿ ವಿನಂತಿಸಿದ್ದಾರೆ.