ಕೆ.ರಾಮ್ ಪ್ರಸಾದ್ ಅವರ ಕುಂಚದಿಂದ ಅರಳಿದ ಅಯೋಧ್ಯೆಯ ರಾಮಮಂದಿರದ ಚಿತ್ರ
- ರಾಷ್ಟ್ರಮಟ್ಟದ ಲೋಗೋ ಸ್ಪರ್ಧೆಯಲ್ಲಿ ಗಮನ ಸೆಳೆದ ಪುತ್ತೂರಿನ ಕಲಾವಿದ
- ಸ್ಥಳೀಯರಿಂದ ಅಭಿನಂದನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜ್ ಗಾವ್ ಆ್ಯಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ವಿಬಿ-ಜಿರಾಮ್ ಜಿ ಕಾಯ್ದೆಯ ಪ್ರಚಾರ-ಜಾಗೃತಿಯ ನಿಟ್ಟಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೊ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲಾವಿದ ಕೆ. ರಾಮ್ ಪ್ರಸಾದ್ ಅವರು ವಿನ್ಯಾಸಗೊಳಿಸಿ ಸಲ್ಲಿಸಿದ್ದ ವಿಬಿಜಿರಾಮ್ ಜಿ ಲೋಗೊ ಪ್ರಥಮ ಸ್ಥಾನ ಪಡೆದು ರಾಷ್ಟ್ರದ ಗಮನ ಸೆಳೆದಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು "ಮೈಗವ್' ಸಹಯೋಗದಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಗೆ ದೇಶದ ವಿವಿಧ ರಾಜ್ಯಗಳಿಂದ 7,233ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಗ್ರಾಮೀಣ ಪರಿವರ್ತನೆ, ಉದ್ಯೋಗ ಸೃಷ್ಟಿ, ಜೀವನೋಪಾಯ ಭದ್ರತೆ ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದ ಹಿನ್ನೆಲೆಯಲ್ಲಿ ಕೆ.ರಾಮ್ ಪ್ರಸಾದ್ ಅವರ ವಿನ್ಯಾಸವನ್ನು ವಿಜೇತ ಲೋಗೋವಾಗಿ ಆಯ್ಕೆ ಮಾಡಲಾಗಿದೆ.
ವಿಬಿ ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿಯನ್ನು ಒದಗಿಸುವ ಜತೆಗೆ ಗ್ರಾಮೀಣಾಭಿವೃದ್ಧಿ, ಸಬಲೀಕರಣ ಮತ್ತು ಜೀವನೋಪಾಯ ವೃದ್ಧಿಗೆ ಒತ್ತು ನೀಡುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಅಧಿಕೃತ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮಗಳಲ್ಲಿ ರಾಮ್ ಪ್ರಸಾದ್ ವಿನ್ಯಾಸಗೊಳಿಸಿದ ಲೋಗೊವನ್ನು ಬಳಸಲಾಗುತ್ತದೆ.
ಮೈ ಭಾರತ್ ಮತ್ತು ಮೈಗವ್ ಸಹಯೋಗದಲ್ಲಿ "ನನ್ನ ಹಳ್ಳಿಗಾಗಿ 60 ಸೆಕೆಂಡ್ ರಾಷ್ಟ್ರೀಯ ರೀಲ್/ವೀಡಿಯೋ ಚಾಲೆಂಜ್', "ವಿಕಸಿತ್ ಭಾರತ್&ಗ್ರಾಮ್ ಜಿ ರಸಪ್ರಶ್ನೆ 2026' ಹಾಗೂ ಲೋಗೊ ವಿನ್ಯಾಸ ಸ್ಪರ್ಧೆ ಸೇರಿ ವಿವಿಧ ಡಿಜಿಟಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ 50 ಸಾವಿರ ರೂ.ನಗದು ಬಹುಮಾನ ಘೋಷಿಸಲಾಗಿತ್ತು.
ಜೂ.28 ಮತ್ತು 29ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನದಲ್ಲಿ ಕೆ. ರಾಮ್ ಪ್ರಸಾದ್ ಅವರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಸನ್ಮಾನ ಹಾಗೂ ಗೌರವಾರ್ಪಣೆ ನಡೆಯಲಿದೆ.
ಸ್ಪರ್ಧೆಗೆ ದೇಶದ ವಿವಿಧ ರಾಜ್ಯಗಳಿಂದ ಯುವಕರು, ವೃತ್ತಿಪರ ವಿನ್ಯಾಸಕಾರರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ತಮ್ಮ ಕಲ್ಪನೆಯ ಚಿತ್ರಗಳನ್ನು ಸಲ್ಲಿಸಿದ್ದರು. ಆಯ್ಕೆಯಾದ ಲೋಗೊದಲ್ಲಿ ಗ್ರಾಮೀಣ ಜೀವನ, ಶ್ರಮದ ಗೌರವ, ಸ್ವಾವಲಂಬನೆ ಹಾಗೂ ವಿಕಸಿತ ಭಾರತದ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಅಂಶಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಈ ಲೋಗೊವು ಗ್ರಾಮೀಣ ಉದ್ಯೋಗ ಸೃಷ್ಟಿ, ಜೀವನೋಪಾಯ ಭದ್ರತೆ ಹಾಗೂ ಸಾಮಾಜಿಕ ಸಬಲೀಕರಣದ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿಜೇತ ಲೋಗೊವನ್ನು ಮುಂದಿನ ದಿನಗಳಲ್ಲಿ ಅಧಿಕೃತ ದಾಖಲೆಗಳು, ಪ್ರಚಾರ ಸಾಮಗ್ರಿಗಳು, ಜಾಗೃತಿ ಅಭಿಯಾನಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಳಸಲಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರಾವಳಿ ಭಾಗದ ಪ್ರತಿಭೆಯೊಬ್ಬರು ಸಾಧನೆ ಮಾಡಿರುವುದು ಸ್ಥಳಿಯ ಕಲಾವಿದರು ಹಾಗೂ ಯುವ ವಿನ್ಯಾಸಕಾರರಿಗೆ ಪ್ರೇರಣೆಯಾಗಿದೆ. ಮಂದಿರಮನೆ ಕೆ. ಮಲ್ಲೇಶ್ ಕುಮಾರ್ ಹಾಗೂ ಅನುರಾಧಾ ದಂಪತಿಯ ಪುತ್ರರಾದ ರಾಮ್ಗೆ 2016ರಲ್ಲಿ "ಕರ್ನಾಟಕ ಕಲಾಶ್ರೀ' ಪ್ರಶಸ್ತಿ ದೊರೆತಿತ್ತು. ಅದಾಗಿ 2021ರಲ್ಲಿ ರಾಮಮಂದಿರ ಶಿಲನ್ಯಾಸ ಸಂದರ್ಭದಲ್ಲಿ ಇವರು ಮಾಡಿದ ಅಯೋಧ್ಯೆಯ ಚಿತ್ರ ಸಾಕಷ್ಟು ಜನಮನ್ನಣೆ ಪಡೆದಿತ್ತು. ಇದೀಗ ಇವರ ಸಾಧನೆಗೆ ಪುತ್ತೂರು ಪ್ರದೇಶದ ಜನರು ಅಭಿನಂದಿಸಿದ್ದಾರೆ.
ಕಲೆಯ ಮೇಲಿನ ಆಸಕ್ತಿ ಮತ್ತು ನಿರಂತರ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಈ ಹಿಂದಿನಿಂದಲೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಇದೀಗ ಗ್ರಾಮೀಣ ಭಾರತದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಾಗಿ ನನ್ನ ವಿನ್ಯಾಸ ಆಯ್ಕೆಯಾಗಿರುವುದು ಮತ್ತಷ್ಟು ಹೆಮ್ಮೆ ತಂದಿದೆ.
— ಕೆ.ರಾಮ್ ಪ್ರಸಾದ್, ಚಿತ್ರ ಕಲಾವಿದ