ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ನೋಂದಣಿ ಮೇಳಕ್ಕೆ ಅಭಿವೃದ್ಧಿ ಅಧಿಕಾರಿ ಕೆ.ವಿ.ಸತೀಶ್ ಚಾಲನೆ ನೀಡಿದರು.  
ರಾಜ್ಯ

ಗ್ರಾಮೀಣ ಜನರಿಗೆ ವರವಾದ ವಿಬಿ ಜಿ ರಾಮ್ ಜಿ

ಪ್ರಮುಖ ಮುಖ್ಯಾಂಶಗಳು

  • ವಿಕಸಿತ ಭಾರತ ಗ್ರಾಮೀಣ ರೋಜ್‌ಗಾರ್ ಯೋಜನೆ (ವಿಬಿ ಜಿ ರಾಮ್ ಜಿ)
  • ಜಾಬ್ ಕಾರ್ಡ್ ನೋಂದಣಿ ಮೇಳ
ಸಿದ್ದಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಕಸಿತ ಭಾರತ ಗ್ರಾಮೀಣ ರೋಜ್‌ಗಾರ್ ಯೋಜನೆ (ವಿಬಿ ಜಿ ರಾಮ್ ಜಿ) ಜಾಬ್ ಕಾರ್ಡ್ ನೋಂದಣಿ ಮೇಳಕ್ಕೆ ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ಸತೀಶ್ ಮಂಗಳವಾರ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಮೇಲ್ದರ್ಜೆಗೇರಿಸುವ ಮೂಲಕ ವಿಕಸಿತ ಭಾರತ ಗ್ರಾಮೀಣ ರೋಜ್‌ಗಾರ್ ಯೋಜನೆ ಎಂದು ಮಾರ್ಪಡಿಸಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 125 ದಿನಗಳ ಉದ್ಯೋಗ ಕಲ್ಪಿಸಲಾಗುತ್ತಿದ್ದು, ದಿನವೊಂದಕ್ಕೆ 382 ರೂ.ಕೂಲಿ ನಿಗದಿಪಡಿಸಲಾಗಿದೆ. ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿರಾಜಪೇಟೆ ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಧಿಕಾರಿ ನರೇಂದ್ರ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ಕೃಷಿ ಹೊಂಡ, ಹಸು, ಕೋಳಿ ಹಾಗೂ ಮೇಕೆ ಕೊಟ್ಟಿಗೆಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಫಲಾನುಭವಿಗಳು ತಮ್ಮ ಕಾಮಗಾರಿಗಳನ್ನು ತಾವೇ ನಿರ್ಮಿಸಿಕೊಳ್ಳುವ ಅವಕಾಶವಿದ್ದು, ಪ್ರತಿಯೊಬ್ಬರೂ ಜಾಬ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸುವರ್ಣಾವಕಾಶವಿದೆ ಎಂದರು.
ಜಾಬ್ ಕಾರ್ಡ್ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಪಂಚಾಯಿತಿ ಆಡಳಿತಾಧಿಕಾರಿ ಜನೀಶ್ ಕುಮಾರ್, ಲೆಕ್ಕ ಸಹಾಯಕ ಸುಬ್ರಮಣಿ, ನೋಡಲ್ ಅಧಿಕಾರಿ ಗಣೇಶ್, ಸಿಬ್ಬಂದಿ ಈಶ್ವರ, ಸವಿತಾ, ರಜಿನಿ ಮತ್ತಿತರರಿದ್ದರು.