ದೇವರಹಿಪ್ಪರಗಿ ಪಟ್ಟಣದ ತಾಪಂ ಮುಂಭಾಗದಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯ ಕುರಿತ ಸಿದ್ಧಪಡಿಸಲಾದ ಜಾಗೃತಿ ಕರಪತ್ರವನ್ನು ತಾ.ಪಂ ಇಒ ಭಾರತಿ ಚಲುವಯ್ಯ ಬಿಡುಗಡೆ ಮಾಡಿದರು. ಶಾಂತಗೌಡ ನ್ಯಾಮಣ್ಣವರ, ಶಿವಾನಂದ ಮೂಲಿಮನಿ, ಶ್ರೀನಿವಾಸ ಪವಾರ ಮತ್ತಿತರರಿದ್ದರು.
- ತಾ.ಪಂ ಇಒ ಭಾರತಿ ಚಲುವಯ್ಯ ಅಭಿಮತ
- ಜಾಗೃತಿ ಕರಪತ್ರ ಬಿಡುಗಡೆ
ಪ್ರತಿದಿನ 382 ರೂ ಕೂಲಿ ನೀಡಲಾಗುತ್ತಿದ್ದು, ವರ್ಷಕ್ಕೆ 47,750 ರೂ.ವರೆಗೆ ಕೂಲಿ ಪಡೆಯಲು ಅವಕಾಶವಿದೆ. ತಾಲೂಕಿನಾದ್ಯಂತ ವಿಬಿ-ಜಿ ರಾಮ್-ಜಿ ಯೋಜನೆಯಡಿ 318 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಎನ್‌ಎಂಎಂಎಸ್ ಆ್ಯಪ್ ಆಧಾರಿತವಾಗಿ ಕಾರ್ಮಿಕರ ಹಾಜರಾತಿ ದಾಖಲಿಸಲಾಗುತ್ತದೆ ಎಂದು ತಾ.ಪಂ ಇಒ ಭಾರತಿ ಚಲುವಯ್ಯ ತಿಳಿಸಿದರು.
ಪಟ್ಟಣದ ತಾಪಂ.ಮುಂಭಾಗದಲ್ಲಿ ವಿಬಿಜಿ-ರಾಮ್ ಜಿ ಯೋಜನೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ವಿಬಿ-ಜಿ ರಾಮ್-ಜಿ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಗ್ರಾಮೀಣ ಜನರಿಗೆ ಯೋಜನೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆಯಡಿ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ತೆರಳುವುದನ್ನು ತಪ್ಪಿಸಿ, ತಮ್ಮ ಸ್ವಂತ ಗ್ರಾಮದಲ್ಲಿಯೇ ಕೆಲಸ ಪಡೆದು ಜೀವನ ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಕೂಲಿಕಾರರಿಗೂ ಕೆಲಸ ಒದಗಿಸುವಂತೆ ಪಿಡಿಒಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ವಿಬಿ-ಜಿ ರಾಮ್-ಜಿ ಯೋಜನೆ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ಸಹಾಯಕ ಯೋಜನಾ ಅಧಿಕಾರಿ ಶ್ರೀನಿವಾಸ ಪವಾರ, ಪಿಡಿಒಗಳಾದ ಎಂ.ಎನ್. ಕತ್ತಿ, ಕಾಶಿನಾಥ್ ಕಡಕಭಾವಿ, ಎಚ್.ಕೆ. ಹಡಪದ,
ತಾಲೂಕು ಐಇಸಿ ಸಂಯೋಜಕ ಸಿದ್ದು ಕಾಂಬಳೆ ಮತ್ತಿತರರಿದ್ದರು.