ಔರಾದ್ ತಾಲೂಕಿನ ಹೆಡಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿಯ ಜಾಬ್ ಕಾರ್ಡ್ ಮೇಳಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಚಾಲನೆ ನೀಡಿದರು. ಶರಣಪ್ಪ ಗಾದಗೆ, ದತ್ತು ಭೋಸ್ಲೆ, ಅಂಬಾದಾಸ ಪಾಟೀಲ್, ರಜನೀಶ್ ಇತರರಿದ್ದರು.
- ಎಡಿ ಶಿವಕುಮಾರ ಘಾಟೆ ಅಭಿಮತ
- ಹೆಡಗಾಪುರದಲ್ಲಿ ಜಾಬ್ ಕಾರ್ಡ್ ಮೇಳ
ಔರಾದ್: ಗ್ರಾಮೀಣ ಪ್ರದೇಶದ ಅರ್ಹ ಕೂಲಿಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದ್ದು ಎಲ್ಲರೂ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ತಾಲೂಕಿನ ಹೆಡಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-&ಜಿ ರಾಮ್ ಜಿ ಯೋಜನೆಯಡಿಯ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೇಳದಲ್ಲಿ ಹೊಸದಾಗಿ ಜಾಬ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು, ಈಗಾಗಲೇ ಇರುವ ಜಾಬ್ ಕಾರ್ಡ್ಗಳ ಪರಿಶೀಲಿಸಿ ಉದ್ಯೋಗದ ಬೇಡಿಕೆ ಸಲ್ಲಿಸುವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ವಿಬಿ-&ಜಿ ರಾಮ್ ಜಿ ಯೋಜನೆಯಡಿ ಅನುಮತಿಸಲಾದ 318 ವಿವಿಧ ಕಾಮಗಾರಿಗಳಿದ್ದು, ಯೋಜನೆಯಡಿ ದಿನಗೂಲಿ ರೂ.370ರಿಂದ ರೂ.382ಕ್ಕೆ ಹೆಚ್ಚಳ, ವಾರ್ಷಿಕ ಮಾನವ ದಿನಗಳ ಮಿತಿ 100ರಿಂದ 125 ದಿನಗಳಿಗೆ ಹೆಚ್ಚಳ, ಒಂದು ಗ್ರಾಮೀಣ ರೋಜ್ಗಾರ ಗ್ಯಾರಂಟಿ ಕಾರ್ಡ್ ಮೂಲಕ ವಾರ್ಷಿಕವಾಗಿ ರೂ.47,750ರವರೆಗೆ ಕೂಲಿ ಪಡೆಯುವ ಅವಕಾಶವಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಗಾದಗೆ, ಡಿಇಒ ದತ್ತು ಭೋಸ್ಲೆ, ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್, ಕಾರ್ಯದರ್ಶಿ ರಜನೀಶ್ ಇತರರಿದ್ದರು.