ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಮಾಲಿನ್ಯ ತಗ್ಗಿಸಿದ ವರುಣ: ಏ.5 ವರೆಗೆ ಬಿರುಗಾಳಿ ಸಹಿತ ಭಾರಿ ಮಳೆ ಬರುವ ಸಾಧ್ಯತೆ | Bengaluru Rain

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜಧಾನಿಯ(Bengaluru Rain) ಹಲವೆಡೆ ಭಾನುವಾರ (ಮಾ.29) ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ಇಂದು ಮಧ್ಯಾಹ್ನ ನಂತರ ಮೋಡಕವಿದ ವಾತಾವರಣ ಇತ್ತು. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಜಯನಗರ, ಬಸವನಗುಡು, ಜೆ.ಪಿ.ನಗರ, ಮೈಸೂರು, ಕೆಂಗೇರಿ, ನಾಯಂಡಹಳ್ಳಿ, ಯಶವಂತಪುರ, ಪೀಣ್ಯ, ರಾಜರಾಜೇಶ್ವರಿ ನಗರ, ಹೆಬ್ಬಾಳ, ಜೆ.ಪಿ.ನಗರ, ಕೆಂಗೇರಿ, ನಾಗವಾರ, ಕಮ್ಮನಹಳ್ಳಿ, ಸಂಜಯನಗರ ಸೇರಿ ನಗರದ ಹಲವು ಪ್ರದೇಶಗಳಲ್ಲಿ ವರ್ಷಧಾರೆಯಾಗಿದೆ. ಅಲ್ಲದೆ, ನಗರದ ಇತರ ಪ್ರದೇಶಗಳಗಿಂತ ಕಾಟನ್‌ಪೇಟೆಯಲ್ಲಿ 16 ಮಿಮೀ ಮಳೆಯಾಗಿದೆ.
ಮಳೆಯಿಂದಾಗಿ ಅಲ್ಲಲ್ಲಿ ಸಂಚಾರ ಅಡಚಣೆ ಉಂಟಾಯಿತು. ಅಲ್ಲದೆ, ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದವರಿಗೆ ತೊಂದರೆಯಾಯಿತು. ರಸ್ತೆಗಳಲ್ಲಿ ನೀರು ನುಗ್ಗಿ ಸವಾರರು ಪರದಾಡಿದರು. ಮುಖ್ಯರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದವು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಸದ ರಾಶಿಗಳು ರಸ್ತೆ ಮೇಲೆ ತೇಲಾಡುತ್ತಿದ್ದವು.

ತಗ್ಗಿದ ಧೂಳಿನ ಕಣಗಳು

ಚಾಮರಾಜಪೇಟೆ ಸೇರಿ ಉದ್ಯಾನನಗರಿಯ ಹಲವೆಡೆ ಒಳಚರಂಡಿ ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿರುವುರಿಂದ ಧೂಳು ಉಂಟಾಗಿ ವಾಯುಮಾಲಿನ್ಯ ಹದಗೆಟ್ಟಿತ್ತು. ಧೂಳಿನ ಕಣಗಳು ಆಕಾಶಕ್ಕೆ ಹೋಗದೆ ತಳಮಟ್ಟದಲ್ಲೇ ಗಾಳಿಯಲ್ಲಿ ತೇಲಾಡುತ್ತಿದ್ದು, ಜೋರಾದ ಗಾಳಿ ಬೀಸಿದಾಗ ಈ ದೂಳಿನ ಕಣಗಳು ಹರಡಿ, ವಾಯುಮಾಲಿನ್ಯ ಹೆಚ್ಚಲು ಕಾರಣವಾಗುತ್ತಿತ್ತು. ಮಳೆಯಿಂದಾಗಿ ಗಾಳಿಯಲ್ಲಿದ್ದ ಸೂಕ್ಷ್ಮ ಧೂಳಿನ ಕಣಗಳ ಪ್ರಮಾಣ ಅರ್ಧಕ್ಕರ್ಧ ತಗ್ಗಿದ್ದು, ಗಾಳಿಯ ಗುಣಮಟ್ಟವು ಸ್ವಲ್ಪಮಟ್ಟಿಗೆ ಸುಧಾರಿಸಿದೆ.

ವಾರಪೂರ್ತಿ ಮಳೆ

ರಾಜಧಾನಿಯಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆ ಏ.5 ರವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಅವಧಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನ ಅಥಾವ ಸಂಜೆ ವೇಳೆಗೆ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಸುರಿಯಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 35 ಡಿ.ಸೆ. ಮತ್ತು 21 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗಾಳಿ ವೇಗ ಜಾಸ್ತಿ ಇರಲಿದ್ದು, ಒಣಗಿದ ಮರ ಮತ್ತು ಕೊಂಬೆಗಳಿಂದ ಜನರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ಕೊಟ್ಟಿದೆ.