ವರಮಹಾಲಕ್ಷ್ಮಿ ಪೂಜೆ 
ರಾಜ್ಯ

ವರಮಹಾಲಕ್ಷ್ಮಿ ಹಬ್ಬ ಯಾವತ್ತು? ಅಲಂಕಾರ, ಪೂಜೆ ಹೇಗೆ? | Varamahalakshmi festival

ಪ್ರಮುಖ ಮುಖ್ಯಾಂಶಗಳು

  • ವರಮಹಾಲಕ್ಷ್ಮಿ ಹಬ್ಬದ ಪೂಜೆ, ಅಲಂಕಾರ, ನೈವೇದ್ಯ ಹೇಗಿರಬೇಕು?
  • ಮನೆ-ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ದೇವಿಯ ಅಲಂಕಾರ ಹೀಗಿರಲಿ
  • ಪೂಜೆ ವಿಧಿ-ವಿಧಾನ ಹೀಗಿದ್ದರೆ ಒಳ್ಳೆಯದು
Varamahalakshmi festival: ವರಮಹಾಲಕ್ಷ್ಮಿ ಹಬ್ಬ ಎಂದರೆ ಸಡಗರ, ಸಂಭ್ರಮ. ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಅಧಿದೇವತೆಯಾದ ಲಕ್ಷ್ಮೀಯನ್ನು ಆರಾಧಿಸುವ ಹಬ್ಬವಿದು. ವಿವಾಹಿತ ಮಹಿಳೆಯರು ಕುಟುಂಬದ ಸುಖ, ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ವರಮಹಾಲಕ್ಷ್ಮಿಯನ್ನು ಪೂಜಿಸುವುದು ವಿಶೇಷ.
ಶ್ರಾವಣ ಮಾಸವೆಂದರೆ ಸಾಲು-ಸಾಲು ಹಬ್ಬಗಳು ಶುರುವಾಗುತ್ತವೆ. ಇವುಗಳಲ್ಲಿ ಮೊದಲನೆಯದೇ ವರಮಹಾಲಕ್ಷ್ಮಿ ಹಬ್ಬವಾಗಿದ್ದು, ಮಹಿಳೆಯರು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವರಲಕ್ಷ್ಮಿ ರೂಪದಲ್ಲಿ ದೇವಿಯನ್ನು ಪೂಜಿಸಿದರೆ, ಕುಟುಂಬಕ್ಕೆ ಒಳ್ಳೆಯದು ಮತ್ತು ಬೇಡಿದ ವರಗಳನ್ನು ತಾಯಿ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.

ವರಮಹಾಲಕ್ಷ್ಮಿ ಹಬ್ಬ ಯಾವಾಗ?

ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಹಬ್ಬವನ್ನು ಆಗಸ್ಟ್ 21, ಶುಕ್ರವಾರದಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಮುನ್ನ ಬರುವ ಈ ವ್ರತವನ್ನು ಆಚರಿಸುವುದು ವಾಡಿಕೆ. ಕರ್ನಾಟಕದ ಬಹುತೇಕ ಕಡೆ ಆಗಸ್ಟ್ 21ರ ಶುಕ್ರವಾರದಂದು ಹಬ್ಬ ಆಚರಣೆ ಮಾಡಲಾಗುತ್ತದೆ. ಆದಾಗ್ಯೂ, ಅವರವರ ಸಂಪ್ರದಾಯದಂತೆ ಶ್ರಾವಣದ ಕೊನೆಯ ಶುಕ್ರವಾರವಾರ ವರಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು?

ಪುರಾಣಗಳ ಪ್ರಕಾರ, ವರಮಹಾಲಕ್ಷ್ಮಿ ವ್ರತದ ಬಗ್ಗೆ ಪಾರ್ವತಿ ದೇವಿ ಶಿವನ ಬಳಿ ಕೇಳಿದಾಗ, ಶಿವನು ಚಾರುಮತಿ ಎಂಬ ಭಕ್ತೆಯ ಕಥೆಯನ್ನು ಹೇಳುತ್ತಾನೆ. ಬಡವೆಯಾದ ಚಾರುಮತಿ ಶ್ರದ್ಧೆಯಿಂದ ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ಲಕ್ಷ್ಮೀದೇವಿ ಸಕಲ ಸಂಪತ್ತು-ಸಂತೋಷವನ್ನು ಅನುಗ್ರಹಿಸಿದಳಂತೆ. ಹಾಗಾಗಿ ಕೃಪೆಗಾಗಿ ಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತೆ. ಈ ಹಬ್ಬವೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ.

ಲಕ್ಷ್ಮೀದೇವಿಯ ಅಲಂಕಾರ ಹೇಗೆ?

ಹಬ್ಬದ ದಿನ ಲಕ್ಷ್ಮೀಗೆ ಕಲಶ ಸ್ಥಾಪನೆ ಮಾಡಿ, ಕಣ್ಣು, ತಿಲಕ, ಕಿರೀಟ, ಮನೆಯಲ್ಲಿರುವ ಆಭರಣ ಹಾಗೂ ಹೂವಿನ ಹಾರಗಳಿಂದ ಅಲಂಕರಿಸಲಾಗುತ್ತದೆ.ದೇವಿಗೆ ಪ್ರಿಯವಾದ ಹಸಿರು ಅಥವಾ ಕೆಂಪು ಬಣ್ಣದ ಸೀರೆ ಉಡಿಸುವುದು. ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳಿಂದ ಅಲಂಕಾರ ಮಾಡಿ, ಬಾಳೆಕಂಬ ಹಾಗೂ ಮಾವಿನೆಲೆ ತೋರಣ ಹಾಕಿದರೆ ಮಂಟಪದ ಸೌಂದರ್ಯ ಹೆಚ್ಚುತ್ತೆ. ಪರಿಸರ ಸ್ನೇಹಿ ವಸ್ತುಗಳಿಂದ ಅಲಂಕಾರ ಮಾಡುವುದು ಉತ್ತಮ. ಮಾರುಕಟ್ಟೆಯಲ್ಲಿ ಸಿಗುವ ಲಕ್ಷ್ಮೀ ಮುಖವಾಡ, ರೆಡಿಮೇಡ್ ಕಲಶಗಳನ್ನೂ ಬಳಸಬಹುದು. ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಸರ್ಚ್​ ಮಾಡಿದರೆ ಸಾಕು ವರಮಹಾಲಕ್ಷ್ಮಿ ಅಲಂಕಾರದ ತರಹೆವಾರಿ ವಿಡಿಯೋಗಳು ಸಿಗುತ್ತವೆ

ನೈವೇದ್ಯಕ್ಕೆ ಏನು ಮಾಡಬಹುದು?

ವರಮಹಾಲಕ್ಷ್ಮಿಗೆ ಕಡಲೆಬೇಳೆಯಿಂದ ತಯಾರಿಸುವ ವಿವಿಧ ಸಿಹಿತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಪಾಯಸ, ಹೋಳಿಗೆ ಸೇರಿದಂತೆ ಮನೆಯಲ್ಲೇ ತಯಾರಿಸಿದ ಸಿಹಿತಿನಿಸುಗಳನ್ನು ದೇವಿಗೆ

ನೈವೇದ್ಯ

ಮಾಡಬಹುದು.

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?

ಇನ್ನು ಪೂಜೆಗೆ ರೇಡಿ ಮಾಡಿಕೊಂಡ ಬಳಿಕ ಮೊದಲು ವಿಘ್ನ ನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಗುತ್ತೆ. ನಂತರ ವರಲಕ್ಷ್ಮಿ ದೇವಿಗೆ ಪೂಜೆ ಮಾಡಿ, ‘ಹ್ರೀಂ ಶ್ರೀ ಲಕ್ಷ್ಮೀಭ್ಯೋ ನಮಃ’ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಬಹುದು. ಪೂಜೆ ಮುಗಿದ ಬಳಿಕ ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ಮತ್ತು ಸಿಹಿ ಹಂಚುವ ಸಂಪ್ರದಾಯವೂ ಇದೆ. ಈ ಮೂಲಕ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬದ ನೆಪದಲ್ಲಿ ಸ್ನೇಹ-ಸಂಬಂದಗಳನ್ನು ಸಂಭ್ರಮಿಸುತ್ತಾರೆ.