ರಾಯಚೂರು
ಜಿಲ್ಲಾ ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮಿಗೆ ಬುಧವಾರ ತಡರಾತ್ರಿ ಲಘು ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿಯ ಬಂಡೊಳ್ಳಿ ವಾಲ್ಮೀಕಿ ಪೀಠದ ಸ್ಥಳ, ದೇವದುರ್ಗದ ತಿಂಥಣಿ ಕನಕಗುರು ಪೀಠಕ್ಕೆ ಭೇಟಿ ನೀಡಿ, ಬಳಿಕ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ತೆರಳಿ ವಿಶ್ರಾಂತಿ ಪಡೆಯುವ ವೇಳೆಲಘು ಹೃದಯಾಘಾತವಾಗಿದ್ದು, ಕೂಡಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿವರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೈದ್ರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದೆ. ಚಿಕಿತ್ಸೆ ಬಳಿಕ ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮಿ ಚೇತರಿಸಿಕೊಂಡಿದ್ದಾರೆ.
ಬೆಳಿಗ್ಗೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಸ್ವಾಮಿಜಿಗೆ ರಾತ್ರಿ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ರಾಯಚೂರಿನಲ್ಲಿ ಆಸ್ಪತ್ರೆಗೆ ದಾಖಲಾದ ವೇಳೆ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ್ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ್ ಆಸ್ಪತ್ರೆಗೆ ತೆರಳಿ ಸ್ವಾಮಿಜಿ ಆರೋಗ್ಯ ವಿಚಾರಿಸಿದ್ದಾರೆ.