valmiki-nigama 
ರಾಜ್ಯ

ಹಗರಣಗಳಿಂದ ವಾಲ್ಮೀಕಿ ನಿಗಮ ಹೈರಾಣ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಗ್ರಹಣ, ಮರೀಚಿಕೆಯಾದ ಪರಿಶಿಷ್ಟರ ಕಲ್ಯಾಣ

ಪ್ರಮುಖ ಮುಖ್ಯಾಂಶಗಳು

  • ಹಗರಣಗಳಿಂದ ವಾಲ್ಮೀಕಿ ನಿಗಮ ಹೈರಾಣ
  • ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಗ್ರಹಣ
  • ಮಣ್ಣುಪಾಲಾದ ಯೋಜನೆಗಳ ಅನುಷ್ಠಾನ
  • ವೈಫಲ್ಯಕ್ಕೆ ಸೇವಾಸಿಂಧು ತಂತ್ರಾಂಶವೂ ಕಾರಣ
ವಿಜಯಪುರ: ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆ ಆರಂಭಗೊಂಡ ಬೆನ್ನಲ್ಲೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು ಮತ್ತು ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ತಮ್ಮ ಸಮುದಾಯದ ನಿಗಮಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಆಗ್ರಹಿಸುತ್ತಿರುವ ಬೆನ್ನಲ್ಲೇ 2025-26 ನೇ ಸಾಲಿನ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬಂದಿದೆ.
ಸಾಲು ಸಾಲು ಹಗರಣ, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಾಗುತ್ತಿರುವ ವಿಳಂಬ, ಶಾಸಕರ ನಿರ್ಲಕ್ಷೃದಿಂದಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮರೀಚಿಕೆಯಾಗಿದೆ.
2025-26ನೇ ಸಾಲಿನ ಗುರಿ, ಅನುದಾನ ಹಂಚಿಕೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ತ್ವರಿತವಾಗಿ ಫಲಾನುಭವಿಗಳ ಆಯ್ಕೆ ಪೂರ್ಣಗೊಳಿಸಿ ಬಳಿಕ 2026-27ನೇ ಸಾಲಿಗೆ ಗುರಿ ಮತ್ತು ಅನುದಾನ ನಿಗದಿಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಹಗರಣಗಳ ಸುಳಿಯಲ್ಲಿ ವಾಲ್ಮೀಕಿ ನಿಗಮ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿನ ಹಗರಣದಿಂದಾಗಿ ಪರಿಶಿಷ್ಟ ಪಂಗಡದವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಿಗಮದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ, ಎಸ್‌ಐಟಿ, ಸಿಬಿಐ ಮತ್ತು ಇಡಿ ತನಿಖಾ ತಂಡಗಳಿಂದ ತನಿಖೆ ನಡೆಯುತ್ತಿದೆ. ಆಯವ್ಯಯದಲ್ಲಿ ನಿಗದಿಯಾದ ಅನುದಾನ ಅನುಸಾರ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾವಾರು ಮತ್ತು ವಿಧಾನಸಭೆ ಕ್ಷೇತ್ರವಾರು ಕ್ರಿಯಾಯೋಜನೆ ಸಿದ್ಧಪಡಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರದ ಸೌಲಭ್ಯ ಕಲ್ಪಿಸಬೇಕಿತ್ತು. ಆದರೆ ಈವರಗೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. 2025 ನ.20 ರಂದೇ ಗುರಿ ನಿಗದಿಪಡಿಸಿ, ಕ್ರಿಯಾಯೋಜನೆ ಕಳುಹಿಸಲಾಗಿದ್ದು, ಆಯಾ ಜಿಲ್ಲೆ ಮತ್ತು ವಿಧಾನ ಸಭೆ ಕ್ಷೇತ್ರಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಕೇವಲ 17 ಶಾಸಕರು ತಮ್ಮ ಕ್ಷೇತ್ರದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಇನ್ನುಳಿದ ಕ್ಷೇತ್ರಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

201.75 ಕೋಟಿ ರೂ. ಆರ್ಥಿಕ ಗುರಿ ನಿಗದಿ

ರಾಜ್ಯದಲ್ಲಿ 3824100 ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ. 2025-26ನೇ ಸಾಲಿಗೆ 201.75 ಕೋಟಿ ರೂಪಾಯಿ ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತಾತ್ಮಕ ವೆಚ್ಚ ಹೊರತುಪಡಿಸಿ 181.75 ಕೋಟಿ ರೂಪಾಯಿ ಅನುದಾನದಡಿ ನಿಗಮದ ಆರ್ಥಿಕಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ, ನಿಗದಿತ ಗುರಿಯಂತೆ ಈವರೆಗೆ ಫಲಾನುಭವಿಗಳ ಆಯ್ಕೆ, ಯೋಜನೆಗಳ ಅನುಷ್ಟಾನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸೇವಾ ಸಿಂಧು ತಂತ್ರಾಂಶದಲ್ಲಿನ ತಾಂತ್ರಿಕ ಕಾರಣಗಳಿಂದಾಗಿ ಆನ್‌ಲೈನ್ ಮೂಲಕ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಡೌನ್‌ಲೋಡ್ ಮಾಡಿ ಆಯ್ಕೆ ಸಮಿತಿ ಮುಂದೆ ಮಂಡಿಸಲು ಸಮಸ್ಯೆಯುಂಟಾಗಿದ್ದು, ನಂತರ ಸಮಸ್ಯೆ ನಿವಾರಿಸಲಾಗಿದೆ. ಪ್ರಸ್ತುತ ಫಲಾನುಭವಿಗಳ ಪಟ್ಟಿ ಡೌನ್‌ಲೋಡ್ ಮಾಡಿ ಆಯಾ ವಿಧಾನ ಸಭೆ ಕ್ಷೇತ್ರದ ಶಾಸಕರ ಮುಂದೆ ಮಂಡಿಸಲಾಗುತ್ತಿದೆ. ಮಾರ್ಚ್ ಅಂತ್ಯದ ವೇಳೆ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ.