ಬಿಎಸ್​ವೈ ಅಭಿಮಾನೋತ್ಸವ 
ರಾಜ್ಯ

ವಜ್ರಾದಪಿ ಕಠೋರಾಣಿ.. ಮೃದೂನಿ ಕುಸುಮಾದಪಿ...

ನಿರುಪಾದಿ ಬ್ಯಾಡಗಿ
(ಲೇಖಕರು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್)
ರಾಜಕಾರಣ ಅಥವಾ ರಾಜಕೀಯ ಎಂಬುದು ದ್ವೇಷ, ಅಸೂಯೆ, ಪಿತೂರಿ, ಕುತಂತ್ರಗಳಿಂದ ತುಂಬಿರುವ ಇಂದಿನ ದಿನಮಾನಗಳಲ್ಲಿ ಇವುಗಳನ್ನು ಮೀರಿ ಕೇವಲ ಜನಪರ ಹೋರಾಟ ಮತ್ತು ಸೇವೆಯ ಮೂಲಕ ರಾಜಕಾರಣದ ಅತ್ಯುನ್ನತ ಸ್ಥಾನವನ್ನು ತಲುಪಿ, ಯುವ ರಾಜಕಾರಣಿಗಳಿಗೆ ಮೂರ್ತರೂಪದ ಉದಾಹರಣೆಯಂತಿರುವ ಬಿ.ಎಸ್. ಯಡಿಯೂರಪ್ಪನವರು ರಾಜ್ಯ ಕಂಡ ಅಪರೂಪದ ನಾಯಕ, ಹೋರಾಟದ ಮೂಲಕ ನಾಡಿನ ತುಂಬ ಮನೆಮಾತಾದ ಮಹಾ ನಾಯಕ, ಅಧಿಕಾರ-ಅಭಿವೃದ್ಧಿಯ ನೈಜ ಚಿತ್ರಣವನ್ನು ಅಚ್ಚಳಿಯದಂತೆ ಬಿಚ್ಚಿಟ್ಟ ಸವೋಚ್ಚ ನಾಯಕ.

ಯಡಿಯೂರಪ್ಪನವರನ್ನು ಹೊರ ಗಿನಿಂದ ನೋಡಿದ ಯಾರೇ ಆದರೂ ಬಹಳ ಕೋಪದ ಸ್ವಭಾವ ಎಂದು ಭಾವಿಸುತ್ತಾರೆ. ಆ ಭಾವನೆ ಸತ್ಯ ಕೂಡ. ಯಾಕೆಂದರೆ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಪರಿಶ್ರಮ ಇದ್ದಲ್ಲಿ ಕೋಪ ಸಹಜವಾಗಿಯೇ ಇರುತ್ತದೆ. ಬೂಟಾಟಿಕೆ, ಆಡಂಬರಗಳಿಲ್ಲದೆ ಇದ್ದಿದ್ದನ್ನು ಇದ್ದಂತೆಯೇ ವ್ಯಕ್ತ ಮಾಡುವ ಸ್ವಭಾವ ಯಡಿಯೂರಪ್ಪನವರದ್ದು. ಆದರೆ ಆ ಕೋಪ ಕೇವಲ ನಿಗದಿತ ವಿಷಯಕ್ಕೆ ಸಂಬಂಧಪಟ್ಟಿರುತ್ತಿತ್ತೇ ವಿನಃ ದೀರ್ಘಕಾಲಕ್ಕೆ ಅದನ್ನು ಮುಂದುವರೆಸುವ ಸ್ವಭಾವ ಅವರದ್ದಲ್ಲ.
‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬ ಸುಭಾಷಿತದಂತೆ ಯಡಿಯೂರಪ್ಪನವರ ಮನಸ್ಸು ವಜ್ರದಷ್ಟು ಕಠಿಣವೆನಿಸಿದರೂ ಕ್ಷಣಮಾತ್ರದಲ್ಲಿ ಹೂವಿನಷ್ಟು ಮೃದುವಾಗುತ್ತದೆ. ಇದನ್ನು ಸಾಕಷ್ಟು ಬಾರಿ ಪ್ರತ್ಯಕ್ಷ ಕಂಡವನು ನಾನು. ರಾಜಕೀಯದಲ್ಲಿ ಸ್ವಪಕ್ಷದವರಿರಲಿ, ವಿರೋಧ ಪಕ್ಷದವರೇ ಇರಲಿ ಆಗಾಗ ಮಾತು-ಮನಸ್ತಾಪಗಳು ಸಹಜ. ಆದರೆ ಅಂತಹ ಯಾವುದೇ ಮನಸ್ತಾಪಗಳಿದ್ದರೂ ಕೇವಲ ಐದು-ಹತ್ತು ನಿಮಿಷದಲ್ಲಿ ಅದನ್ನು ಮರೆತು, ಅವರೊಂದಿಗೆ ಮತ್ತೆ ಬೆರೆತು, ‘ಇವರು ನಮ್ಮವರು’ ಎಂದು ಬೆನ್ನು ಚಪ್ಪರಿಸಿ ಅವರನ್ನು ಜೊತೆಗೆ ಕರೆದುಕೊಂಡು ಹೋಗುವ ಹೃದಯ ವೈಶಾಲ್ಯ ಯಡಿಯೂರಪ್ಪನವರ ವಿಶೇಷ ಗುಣಗಳಲ್ಲಿ ಒಂದು. ಹೊರನೋಟಕ್ಕೆ ಎಷ್ಟೇ ಒರಟಾಗಿ ಕಂಡರೂ, ಆಂತರ್ಯದಲ್ಲಿ ಶೋಷಿತರ ಬಗ್ಗೆ ಸತ್ಕಾಳಜಿ ಹೊಂದಿದ ಕರುಣಾಮಯಿ ಅವರು. ಇಂತಹ ರಾಜಕಾರಣಿಯನ್ನು ಪಡೆದಿರುವುದು ಕರ್ನಾಟಕ ರಾಜ್ಯದ ಹೆಮ್ಮೆ ಮತ್ತು ಅಭಿಮಾನದ ಸಂಗತಿ.
ರಾಜಕೀಯ ಪಕ್ಷದ ಸಂಘಟನೆ, ಗುರಿ ಸಾಧನೆಯಲ್ಲಿ ಅವರ ಕಾರ್ಯಕ್ಷಮತೆಗೆ ನಾಡಿನಲ್ಲಿ ಮತ್ತೊಬ್ಬರು ಸರಿಸಾಟಿಯಾಗಲಾರರು. ರಾಜ್ಯದ ಯಾವುದೇ ಕ್ಷೇತ್ರದ ಯಾವುದೇ ಅಭ್ಯರ್ಥಿಯಾದರೂ, ಒಂದು ವೇಳೆ ರಾಜಕೀಯ ಲೆಕ್ಕಾಚಾರದ ಪ್ರಕಾರ ಸೋಲುವ ಅಭ್ಯರ್ಥಿ ಇದ್ದರೂ, ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂಬ ಸಂಕಲ್ಪ ಮಾಡಿದರೆ; ಅದನ್ನು ಸಾಧಿಸಿಯೇ ತೀರುತ್ತಿದ್ದ ರಾಜಕೀಯದ ಛಲದಂಕಮಲ್ಲ ಯಡಿಯೂರಪ್ಪನವರು. ಹಾಗೆ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ಹಲವು ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ. ಆ ಕಾರಣದಿಂದಲೇ ರಾಜ್ಯದ ಯಾವುದೇ ಮೂಲೆಗೆ ಹೋದರೂ ಅವರನ್ನು ಬೆಂಬಲಿಸುವ, ಪ್ರೀತಿಸುವ, ಅಭಿಮಾನಿಸುವ ದೊಡ್ಡ ಪಡೆ ಇಂದಿಗೂ ಸಕ್ರಿಯವಾಗಿದೆ. ಈ ಹಿನ್ನೆಲೆಯಲ್ಲಿಯೇ ಅವರ ಆದೇಶದಂತೆ ಧಾರವಾಡ ಲೋಕಸಭಾ ಕ್ಷೇತ್ರದ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಾನು, ಮೂರು ಬಾರಿ ಸಂಸದನಾಗಿ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದರು. ಮಾತ್ರವಲ್ಲದೆ ಮುಂದೆ ಮುಖ್ಯಮಂತ್ರಿಗಳಾಗಿದ್ದಾಗ, ನನ್ನ ಕಡೆಯಿಂದ ಯಾವುದೇ ಬೇಡಿಕೆ, ಅಪೇಕ್ಷೆ ಇಲ್ಲದಿದ್ದರೂ, ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿ ರಾಜ್ಯದ ಜನರ ಸೇವೆ ಮಾಡಲು ಅವಕಾಶ ನೀಡಿದ್ದರು. ನಾನು ತಿಳಿದ ಮಟ್ಟಿಗೆ ಸಾಧ್ಯವಿದ್ದ ಕಡೆಯಲ್ಲಿ ತಮ್ಮ ಮಿತಿಯನ್ನು ಮೀರಿ ಅಭ್ಯರ್ಥಿಗಳಿಗೆ, ಪಕ್ಷದ ಮುಖಂಡರಿಗೆ ಸಹಾಯ ಮಾಡುತ್ತಿದ್ದರು. ಇಂತಹ ಅಪರೂಪದ ರಾಜಕಾರಣಿಯನ್ನು ನಾನಂತೂ ಹಿಂದೆ ಕಂಡಿಲ್ಲ, ಮುಂದೆಯೂ ಕಾಣಲು ಸಾಧ್ಯವಿಲ್ಲ.
ನಾಡಿನ ಅಭಿವೃದ್ಧಿಯ ಹರಿಕಾರ: ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಜಾತಿ ವ್ಯವಸ್ಥೆಗೆ ಬಲಿಯಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಸರ್ವಜನಾಂಗದ ಗೌರವಾದರಗಳಿಗೆ ಪಾತ್ರವಾಗಿದ್ದ ನಾಡಿನ ಕೆಲವೇ ನಾಯಕರುಗಳಲ್ಲಿ ಯಡಿಯೂರಪ್ಪನವರು ಕೂಡ ಒಬ್ಬರು. ಅದಕ್ಕೆ ಸಾಕ್ಷಿಯೇ ಅತ್ಯುನ್ನತ ಮುಖ್ಯಮಂತ್ರಿ ಸ್ಥಾನದವರೆಗೆ ಅವರು ತಲುಪಿದ್ದು. ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರುವುದೆಂದರೆ; ಅದು ವರ್ಷಾನುಗಟ್ಟಲೆ ಮಾಡಿದ ಹೋರಾಟ, ಸಂಘಟನೆ, ಅಭಿವೃದ್ಧಿ, ಜನಪ್ರಿಯತೆಯಿಂದ ಸಿಕ್ಕ ಪರಿಶ್ರಮದ ಫಲ. ಈ ಮಾತನ್ನು ಸಾಕಾರಗೊಳಿಸಿದ ನಾಯಕರಲ್ಲಿ ಯಡಿಯೂರಪ್ಪನವರು ಅಗ್ರಗಣ್ಯರು. ಇಡೀ ದೇಶ ತಿರುಗಿ ನೋಡುವಂತೆ ಆಡಳಿತ ನಡೆಸಿದ ಯಡಿಯೂರಪ್ಪನವರ ನಾಯಕತ್ವದ ಹಿಂದಿನ ಗುಟ್ಟು- ಸಿದ್ಧತೆ, ಬದ್ಧತೆ ಹಾಗೂ ಪ್ರಬುದ್ಧತೆ.
ಯಾವುದೇ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ತಲುಪಬೇಕಾದರೆ ಅದರ ಹಿಂದೆ ಸಾಕಷ್ಟು ಸಿದ್ಧತೆ, ತಾವು ಕೈಗೊಂಡ ಕೆಲಸದ ಮೇಲಿನ ಬದ್ಧತೆ ಮತ್ತು ವಿಷಯದ ಆಳ-ಅಗಲಗಳನ್ನು ಅರ್ಥೈಸಿಕೊಳ್ಳಲು ಬೇಕಾದ ಪ್ರಬುದ್ಧತೆ ಬಹಳ ಮುಖ್ಯ. ಅಂತೆಯೇ ಯಡಿಯೂರಪ್ಪನವರು ಸವಾಲು ಎದುರಿಸುವಲ್ಲಿ ಸಿದ್ಧತೆ, ಪಕ್ಷ ಸಂಘಟನೆಯಲ್ಲಿ ಬದ್ಧತೆ, ಆಡಳಿತ ನಡೆಸುವಲ್ಲಿ ಪ್ರಬುದ್ಧತೆಯಿಂದ ಕೆಲಸ ಮಾಡಿದ್ದರ ಪರಿಣಾಮ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜಕಾರಣದಲ್ಲಿ ರಾಜಾಹುಲಿಯಾಗಿ ಪ್ರಸಿದ್ಧರಾಗಿದ್ದಾರೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವವನು ರಾಜಕಾರಣಿ ಅಥವಾ ಸಾಮಾನ್ಯ ನಾಯಕ ಎನಿಸಿಕೊಳ್ಳಬಹುದು. ಆದರೆ ಮುಂದಿನ ತಲೆಮಾರನ್ನು ಗಮನದಲ್ಲಿಟ್ಟು ಕೊಂಡು ಕೆಲಸ ಮಾಡುವವರು ಮುತ್ಸದ್ದಿ ಎನಿಸಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಮುಂದಿನ ಮೂರು ತಲೆಮಾರನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಅಭಿವೃದ್ಧಿಯ ಕನಸು ಕಂಡ ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ. ಅಧಿಕಾರ ಇರಲಿ, ಇಲ್ಲದಿರಲಿ, ಒಂದು ದಿನವೂ ಜನಮಾನಸದಿಂದ ದೂರವಾಗದೆ, ಸಂಪೂರ್ಣ ಸಕ್ರಿಯರಾಗಿದ್ದ ಯಡಿಯೂರಪ್ಪನವರು, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿಯವರಂತಹ ದಿಗ್ಗಜರೊಂದಿಗೆ ಪಕ್ಷ ಕಟ್ಟಿದ ಅನುಭವವುಳ್ಳ ಅಪರೂಪದ ರಾಜಕಾರಣಿ. ಬಿಜೆಪಿಯನ್ನು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು, ಪಕ್ಷ ಸಂಘಟನೆಗಾಗಿ ಮಾಡಿದ ಹೋರಾಟದ ದಿನಗಳನ್ನು ತಮ್ಮ ಅಧಿವೇಶನದ ಕೊನೆಯ ದಿವಸ ಪ್ರಸ್ತಾಪಿಸಿದ್ದು ಪಕ್ಷದ ಯುವ ಶಾಸಕರಿಗೆ, ಕಾರ್ಯಕರ್ತರಿಗೆ ಮಾತ್ರವಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಸ್ಪೂರ್ತಿ ತಂದಿತ್ತು. ಸ್ವತಃ ನರೇಂದ್ರ ಮೋದಿಯವರು ಟ್ವೀಟ್​ನಲ್ಲಿ ‘ಯಡಿಯೂರಪ್ಪನವರ ಭಾಷಣ ಪಕ್ಷದ ಕಾರ್ಯಕರ್ತನಾದ ನನಗೆ ಮತ್ತಷ್ಟು ಸ್ಪೂರ್ತಿ ನೀಡಿದೆ’ ಎಂದು ಬರೆದುಕೊಂಡಿದ್ದರು. ಈ ಮೂಲಕ ಯಡಿಯೂರಪ್ಪನವರ ಪಕ್ಷನಿಷ್ಠೆ, ಸಂಘಟನೆ ಹಾಗೂ ಕೊಡುಗೆ ರಾಷ್ಟ್ರಮಟ್ಟದಲ್ಲಿ ಅನಾವರಣಗೊಂಡಿತ್ತು.
ಸಕ್ಕರೆ ನಾಡಿನಿಂದ ಮಲೆನಾಡಿಗೆ: 1943ರ ಫೆಬ್ರವರಿ 27ರಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪನವರನ್ನು ಓರ್ವ ನಾಯಕನಾಗಿ, ಪ್ರಜಾಪ್ರಭುತ್ವದ ದೇಗುಲವೆನಿಸಿದ ವಿಧಾನಸೌಧದವರೆಗೆ ಕಳಿಸಿದ್ದು, ಜಗತ್ತಿನ ಮೊಟ್ಟ ಮೊದಲ ಸಂಸತ್ತು ಎಂದು ವಿಶ್ಲೇಷಿಸಲ್ಪಡುವ ‘ಅನುಭವ ಮಂಟಪ’ದ ಪ್ರಥಮ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುಗಳ ಜನ್ಮಸ್ಥಳವಾದ ಶಿಕಾರಿಪುರದ ಜನತೆ. ಪುರಸಭೆಯ ಸದಸ್ಯರಾಗುವ ಮೂಲಕ ಚುನಾವಣಾ ರಾಜಕೀಯವನ್ನು ಆರಂಭಿಸಿದ ಯಡಿಯೂರಪ್ಪನವರು ನಾಲ್ಕು ದಶಕಗಳಲ್ಲಿ 8 ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದು ಇತಿಹಾಸ. ಹಿರಿತನ, ಅನುಭವ, ಆಡಳಿತದ ಆಳ-ಅಗಲಗಳ ದಶದಿಕ್ಕುಗಳನ್ನು ಕಂಡಿದ್ದರೂ, ಮೊದಲ ಬಾರಿ ಆಯ್ಕೆಯಾದ ಯುವಶಾಸಕನ ಮಾತುಗಳನ್ನು ಕೂಡ ಸೌಜನ್ಯದಿಂದ ಕೇಳುವ ಔದಾರ್ಯ ಅವರದು. ಕ್ಷೇತ್ರದ ಸಾಮಾನ್ಯ ವ್ಯಕ್ತಿಯೊಂದಿಗೂ ಸಂಪರ್ಕ ಸಾಧಿಸಿದ್ದ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದಾಗಲೂ ಕ್ಷೇತ್ರದೊಂದಿಗಿನ ನಿಕಟ ಸಂಪರ್ಕವನ್ನು ಕಡಿದುಕೊಳ್ಳದೆ, ಶಿಕಾರಿಪುರ ಮಾತ್ರವಲ್ಲ ಇಡೀ ಶಿವಮೊಗ್ಗ ಜಿಲ್ಲೆಯನ್ನು, ವಿರೋಧ ಪಕ್ಷದವರು ಉಲ್ಲೇಖಿಸುವ ಮಟ್ಟಿಗೆ ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಗೊಳಿಸಿದ್ದಾರೆ.
ಏಕಾಂಗಿ ಹೋರಾಟ, ಆರ್​ಎಸ್​ಎಸ್ ಒಡನಾಟ: ಬಹುಮತದ ಪರವಾಗಿ ಎಲ್ಲ ನಿರ್ಣಯಗಳು ನಡೆಯುವುದು ಪ್ರಜಾಪ್ರಭುತ್ವದ ನಿಯಮ. ಆದರೆ ಜನವಿರೋಧಿ ನಿರ್ಣಯವೊಂದನ್ನು ಕೈಗೊಂಡ ಬಹುಮತವುಳ್ಳ ಸರ್ಕಾರದ ನಿಲುವನ್ನು ವಿರೋಧಿಸಿ, ಬಗರ್ ಹುಕುಂ ರೈತರ ಭೂಮಿ ಕಸಿದುಕೊಳ್ಳುವ ಅರಣ್ಯಮಂತ್ರಿ ರಾಚಯ್ಯನವರ ಪ್ರಸ್ತಾವವನ್ನು ಹಿಂಪಡೆಯುವಂತೆ ಮಾಡಿದ ಯಡಿಯೂರಪ್ಪನವರ ಏಕಾಂಗಿ ಹೋರಾಟ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಒಂದು ದಾಖಲೆಯಾಗಿ ಉಳಿದಿದೆ.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ಎಂಟು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾದ ಯಡಿಯೂರಪ್ಪನವರು, ತಾಲೂಕು ಜನಸಂಘದ ಅಧ್ಯಕ್ಷ ಸ್ಥಾನದಿಂದ ಹಿಡಿದು ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ, ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಪ್ರಸ್ತುತ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗುವ ಮೂಲಕ ಪಕ್ಷದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ತಮ್ಮ ಎಲ್ಲ ಸಾಧನೆ, ಸ್ಥಾನಮಾನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ಕಾರಣವೆಂಬುದನ್ನು ಮನತುಂಬಿ ಸ್ಮರಿಸುವ ಯಡಿಯೂರಪ್ಪನವರು, ಆರ್​ಎಸ್​ಎಸ್ ಕಲಿಸಿದ ಸಂಸ್ಕಾರದಿಂದ ದೇಶ, ಧರ್ಮ, ಸಂಸ್ಕೃತಿ ವಿಷಯದಲ್ಲಿ ಎಂದೂ ರಾಜಿಯಾಗದೆ ಬೆಳೆದವರು. ರಾಜ್ಯದ ಹಿತಕ್ಕಾಗಿ ಹಿರಿಯರು, ಅನುಭವಿಗಳೊಂದಿಗೆ ರ್ಚಚಿಸಿ ನಿರ್ಣಯ ಕೈಗೊಳ್ಳುವುದು ಹಾಗೂ ಸಮಯಪ್ರಜ್ಞೆ ಯಡಿಯೂರಪ್ಪನವರು ಪಾಲಿಸಿಕೊಂಡು ಬಂದ ವಿಶೇಷ ಗುಣಗಳು.
ಅವರು ಜನಸೇವೆಯಲ್ಲಿ ತೊಡಗಿ ಸಾರ್ಥಕ 50 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.