ಟಿಟಿಡಿಯಲ್ಲಿ ವೈಕುಂಠ ಏಕಾದಶಿ ಸಿದ್ಧತೆ ಕುರಿತು ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಕೆ. ವೀರಾಂಜನೇಯಲು, ಟಿಟಿಡಿ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ಇದ್ದರು.  
ರಾಜ್ಯ

ವೈಕುಂಠ ಏಕಾದಶಿ, ಟಿಟಿಡಿ ದೇಗುಲದಲ್ಲಿ ಸಕಲ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ದಿನವಿಡೀ ಭಕ್ತಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ
  • ಭಕ್ತರಿಗಾಗಿ ಲಡ್ಡು ಪ್ರಸಾದ, ಅನ್ನದಾನ ವ್ಯವಸ್ಥೆ
ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ ತಿರುಪತಿ ತಿರುಮಲ ದೇವಸ್ಥಾನದಲ್ಲಿ (ಟಿಟಿಡಿ) 30ರಂದು ನಸುಕಿನ 1.35 ಗಂಟೆಯಿಂದಲೇ ಭಕ್ತರಿಗೆ ವೈಕುಂಠದ್ವಾರದ ಮೂಲಕ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀವಾರಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ವಿಶೇಷ ದಿನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ರಾತ್ರಿ 11.45ರವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. 70 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಸರತಿ ಸಾಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಜತೆಗೆ ಅನ್ನಪ್ರಸಾದ ವಿನಿಯೋಗಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಕೆ. ವೀರಾಂಜನೇಯಲು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2ರಿಂದಲೇ ಶ್ರೀವಾರಿ ಲಡ್ಡು ಪ್ರಸಾದ ಮಾರಾಟ (ಪ್ರತಿ ಲಡ್ಡುವಿಗೆ ರೂ. 50) ವ್ಯವಸ್ಥೆ ಇದ್ದು, ದಾಸ್ತಾನು ಇರುವವರೆಗೂ ಲಭ್ಯವಿರುತ್ತದೆ. ಜತೆಗೆ 2026ರ ಟಿಟಿಡಿ ಡೈರಿಗಳು, ಕ್ಯಾಲೆಂಡರ್‌ಗಳು, ಅಗರಬತ್ತಿ ಮತ್ತು ಇತರೆ ಟಿಟಿಡಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಬೆಂಗಳೂರಿನ ಹಿಂದು ಧರ್ಮ ಪರಿರಕ್ಷಣಾ ಟ್ರಸ್ಟ್ ವತಿಯಿಂದ ದೇವಸ್ಥಾನದ ಆವರಣದಲ್ಲಿ ದಿನವಿಡೀ ಭಕ್ತಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಭಕ್ತರು ವೈಕುಂಠ ಏಕಾದಶಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ.


80 ಸಾವಿರಕ್ಕೂ ಹೆಚ್ಚು ಭಕ್ತರಿಗೆ ದರ್ಶನ ವ್ಯವಸ್ಥೆ

ವೈಕುಂಠ ಏಕಾದಶಿಯ ಪ್ರಯುಕ್ತ ಬೃಹತ್ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಿರುಮಲದಲ್ಲಿ ಈ ಬಾರಿ ವೈಕುಂಠ ದ್ವಾರದ ಮೂಲಕ ಪ್ರತಿದಿನ ಸುಮಾರು 80 ಸಾವಿರಕ್ಕೂ ಹೆಚ್ಚು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿ ವ್ಯವಸ್ಥೆ ಮಾಡುತ್ತಿದೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಾಯುವ ಸಮಯದಲ್ಲಿ ಅನ್ನಪ್ರಸಾದ ಮತ್ತು ಪಾನೀಯಗಳ ವ್ಯವಸ್ಥೆ ಜತೆಗೆ ಭಕ್ತರ ಸುರಕ್ಷತೆ ಹಾಗೂ ಸೌಕರ್ಯಗಳ ಬಗ್ಗೆಯೂ ಅಚ್ಚುಕಟ್ಟಾದ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಮಂಡಳಿ ಸದಸ್ಯ ಎಸ್. ನರೇಶ್‌ಕುಮಾರ್ ಹೇಳಿದರು.