ಬೆಳಗಾವಿ ಕಾರಂಜಿಮಠದಲ್ಲಿ ನಡೆದ ಶ್ರಾವಣ ಶಿವಾನುಭವ ಕಾರ್ಯಕ್ರಮದಲ್ಲಿ ಗುರುಸಿದ್ಧ ಸ್ವಾಮೀಜಿ, ಸರಳಾ ಹೆರೇಕರ, ಡಾ.ವಿಜಯಲಕ್ಷ್ಮೀ ಪುಟ್ಟಿ, ಸುಧಾ ಪಾಟೀಲ ಇತರರಿದ್ದರು. 
ರಾಜ್ಯ

ವಚನ ಚಳವಳಿ ಮಾನವೀಯತೆ ಪ್ರತೀಕ

ವಿಜಯವಾಣಿ ಸುದ್ದಜಾಲ ಬೆಳಗಾವಿ

ಬಸವಾದಿ ಶರಣರ ವಚನ ಆಂದೋಲನದಲ್ಲಿ ಕೆಳವರ್ಗದ ಶರಣರ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಹಡಪದ ಅಪ್ಪಣ್ಣನವರ ಬದುಕು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಕಾರಂಜಿಮಠದಲ್ಲಿ ನಡೆದ ಶ್ರಾವಣ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು, ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿಹಾಡಿದರು. ವಚನ ಚಳವಳಿಗೆ ಹಡಪದ ಅಪ್ಪಣ್ಣನಂತಹ ಶರಣರ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಸಾಹಿತಿ ಡಾ.ವಿಜಯಲಕ್ಷ್ಮೀ ಪುಟ್ಟಿ ಮಾತನಾಡಿ, ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ಅವರು ಶರಣತತ್ವದ ಮಾರ್ಗದಲ್ಲಿ ಸಾಗಿ ಸರಳ, ಸುಂದರ ಹಾಗೂ ಆದರ್ಶ ದಾಂಪತ್ಯ ಜೀವನ ನಡೆಸಿದರು ಎಂದರು.
ಬಸವೇಶ್ವರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸರಳಾ ಹೆರೇಕರ ಅವರನ್ನು ಗುರುಸಿದ್ಧ ಸ್ವಾಮೀಜಿ ಸನ್ಮಾನಿಸಿದರು. ಕುಮಾರೇಶ್ವರ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಸಲ್ಲಿಸಿದರು. ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ಎ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿ.ಕೆ.ಪಾಟೀಲ, ಸುಧಾ ಪಾಟೀಲ ಇತರರಿದ್ದರು.