ರಾವೂರಿನ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಚನ ಸಂರಕ್ಷಣಾ ದಿನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಉದ್ಘಾಟಿಸಿದರು. ಧರ್ಮಣ್ಣ ಧನ್ನಿ, ಡಾ.ಗುಂಡಣ್ಣ ಬಾಳಿ, ಸೈಯದ್ ನಜಿರುದ್ದಿನ್ ಮುತ್ತಾವಲಿ ಇತರರಿದ್ದರು.
- ವಿಜಯಕುಮಾರ ತೇಗಲತಿಪ್ಪಿ ಅಭಿಮತ
- ರಾವೂರಿನಲ್ಲಿ ವಚನ ಸಂರಕ್ಷಣಾ ದಿನ
ಶಹಾಬಾದ್: ವಚನ ಸಾಹಿತ್ಯ ಬದುಕಿಗೆ ಆದರ್ಶವಾಗಿದ್ದು, ಅಂತಹ ಸಾಹಿತ್ಯ ಉಳಿಸಿ-ಬೆಳೆಸಿದ ಡಾ.ಫ.ಗು. ಹಳಕಟ್ಟಿ ಅಪ್ರತಿಮ ಸಾಧಕರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.
ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜನ್ಮದಿನ ಹಾಗೂ ವಚನ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ವಚನ, ಅವರ ಜೀವನವನ್ನು ಪುಸ್ತಕಗಳಲ್ಲಿ ಓದುತ್ತಿದ್ದರೆ ಅದು ಫ.ಗು.ಹಳಕಟ್ಟಿ ಅವರ ಪರಿಶ್ರಮ. ವೈಚಾರಿಕತೆ, ವೈಜ್ಞಾನಿಕತೆ ಮತ್ತು ಜೀವನ ಮೌಲ್ಯಗಳನ್ನು ಹೊಂದಿರುವ ಸಾಹಿತ್ಯ ಉಳಿಸಿದ್ದಕ್ಕೆ ನಾವೆಲ್ಲ ಹಳಕಟ್ಟಿ ಶರಣರಿಗೆ ಋಣಿ ಎಂದರು.
ಕಸಾಪ ಜಿಲ್ಲಾ ಗೌರವಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ನಜಿರುದ್ದೀನ್ ಮುತ್ತಾವಲಿ, ಸಿದ್ದಲಿಂಗ ಜ್ಯೋತಿ ಇತರರಿದ್ದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ 50 ಮಕ್ಕಳಿಗೆ ಮೆಡಲ್, ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು. 9ನೇ ತರಗತಿಯ ಭಾಗ್ಯಶ್ರೀ ನೂರು ವಚನಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನ ಸೆಳೆದಳು. ಈರಣ್ಣ ಹಳ್ಳಿ ವಚನ ಗಾಯನ ಮಾಡಿದರು. ಸಿದ್ದಲಿಂಗ ಬಾಳಿ ನಿರೂಪಣೆ ಮಾಡಿ ವಂದಿಸಿದರು.