ವಿಜಯಕುಮಾರ ತೇಗಲತಿಪ್ಪಿ 
ರಾಜ್ಯ

ವಚನ ಸಾಹಿತ್ಯ ಸಮ್ಮೇಳನ 30ರಂದು

ಕಲಬುರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್​ನಿಂದ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಆ.30ರಂದು ಕನ್ನಡ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ಆ.29ರಂದು ಬೆಳಗ್ಗೆ 11.15ಕ್ಕೆ ಕನ್ನಡ ಭವನದ ಕಲಾ ಸೌಧದಲ್ಲಿ ಹಿರಿಯ ಚಿತ್ರಕಲಾವಿದ ಡಾ.ಎ.ಎಸ್​.ಪಾಟೀಲ್​ ಸಾರಥ್ಯದ ಚೈತನ್ಯಮಯಿ ಆರ್ಟ್​ ಟ್ರಸ್ಟ್​ನಿಂದ ಬಸವಾದಿ ಶರಣರ ಸಂಬಂಧಿತ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಆ.30ರಂದು ಬೆಳಗ್ಗೆ 10.45ಕ್ಕೆ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ವಚನ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಲೇಖಕಿ ಡಾ.ಜಯದೇವಿ ಗಾಯಕವಾಡ ಉದ್ಘಾಟಿಸುವರು. ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಪದ್ಮಶ್ರೀ ಪುರಸತೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ್​ ಕಲ್ಲೂರ, ಅಕಾಡೆಮಿ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಉದ್ಯಮಿ ರವಿ ವಿಭೂತಿ, ಮಾಜಿ ಮಹಾಪೌರ ಶರಣು ಮೋದಿ, ಡಾ.ಗಣಪತಿ ಸಿಂಧೆ ಭಾಗವಹಿಸಲಿದ್ದಾರೆ. ಶರಣ ದಂಪತಿಗೆ ಬಸವ ಗೌರವ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಹಿರಿಯ ಹೋರಾಟಗಾರ ಮರಿಯಪ್ಪ ಹಳ್ಳಿ ಅಧ್ಯಕ್ಷತೆಯಲ್ಲಿ ಮಾತೆಂಬುದು ಜ್ಯೋರ್ತಿಲಿಂಗ, ಹಿರಿಯ ಲೇಖಕಿ ಡಾ.ಶೋಭಾದೇವಿ ಚೆಕ್ಕಿ ಅಧ್ಯಕ್ಷತೆಯಲ್ಲಿ ಯನಗೊಲಿದ ವಚನ ಎಂಬ ಆಧುನಿಕ ವಚನ ಗೋಷ್ಠಿಗಳು ನಡೆಯಲಿವೆ. ತೊನಸನಹಳ್ಳಿಯ ಅಲ್ಲಮಪ್ರಭು ಸಂಸ್ಥಾನ ಪೀಠದ ಶ್ರೀ ಮಲ್ಲಣ್ಣಪ್ಪ ಸ್ವಾಮಿಗಳ ಸಾನ್ನಿಧ್ಯದಲ್ಲಿ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಧಕರಿಗೆ ಕಾಯಕ ರತ್ನ ಪುರಸ್ಕಾರ ನೀಡಿ ಸತ್ಕರಿಸಲಾಗುವುದು. ಸಂಗೀತ ಕಲಾವಿದ ರೇವಯ್ಯ ವಸದಮಠ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಯಲಿದೆ.