ಬಾಗಲಕೋಟೆ ಬಿವಿವಿ ಸಂಘದ ಎಚ್‌ಎಸ್‌ಕೆ ಆಸ್ಪತ್ರೆಯಲ್ಲಿ ಸಜ್ಜಲಶ್ರೀ ವಿಜ್ಞಾನ ಕಾಲೇಜಿನ ವತಿಯಿಂದ ಗುರುವಾರ ನಡೆದ ರಾಷ್ಟಿçÃಯ ಲಸಿಕಾ ಸಪ್ತಾಯ ೨೦೨೬ನ್ನು ಕಾಲೇಜಿನ ಪ್ರಾಧ್ಯಾಪಕರು ಸಸಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು.
ಬಾಗಲಕೋಟೆ: ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಲಸಿಕೆಗಳು ನಮ್ಮ ಆರೋಗ್ಯ ರಕ್ಷಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ಪ್ರಾಚಾರ್ಯ ಡಾ.ದಿಲೀಪ್ ನಾಟೇಕರ ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಕಾಲೇಜಿನ ಚಿಕ್ಕ ಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಗುರುವಾರ ರಾಷ್ಟ್ರೀಯ ಲಸಿಕಾ ಸಪ್ತಾಹ ೨೦೨೬' ಈ ಕಾರ್ಯಕ್ರಮವನ್ನು `ಪ್ರತಿ ತಲೆಮಾರಿಗೆ ಲಸಿಕೆಗಳು ಫಲಕಾರಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಎಚ್‌ಎಸ್‌ಕೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಸಿಕೆಗಳು ಮಕ್ಕಳು ಹಾಗೂ ದೊಡ್ಡವರನ್ನು ಹಲವಾರು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಲಸಿಕೆಗಳು ನಮ್ಮ ಸಮಾಜವನ್ನು ಸುರಕ್ಷಿತವಾಗಿ ಇಡುತ್ತವೆ. ನಾವು ಲಸಿಕೆ ಪಡೆದರೆ ನಾವು ಮಾತ್ರವಲ್ಲ ನಮ್ಮ ಸುತ್ತಮುತ್ತಲಿನವರನ್ನು ಸಹ ರಕ್ಷಿಸುತ್ತೇವೆ. ನಮ್ಮ ದೇಶದಲ್ಲಿ ಸರ್ಕಾರ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದೆಯಾದರೂ ಕೆಲವರು ಅರಿವಿನ ಕೊರತೆಯಿಂದ ಅಥವಾ ಭಯದಿಂದ ಲಸಿಕೆ ಪಡೆಯುವುದನ್ನು ತಪ್ಪಿಸುತ್ತಾರೆ. ಇದು ಅಪಾಯಕಾರಿ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಕೊಡಿಸಬೇಕು ಎಂದು ತಿಳಿಸಿದರು.
ಎಚ್.ಎಸ್.ಕೆ. ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ದಡ್ಡಿ ಮಾತನಾಡಿ, ಲಸಿಕೆಗಳು ಅಪಾಯಕಾರಿ ರೋಗಗಳಿಂದ ರಕ್ಷಿಸುವ ಅತ್ಯಂತ ಮುಖ್ಯ ವಿಧಾನವಾಗಿದೆ. ಆದರೆ, ಲಸಿಕೆ ಕೊಡುವುದಷ್ಟೇ ಸಾಕಾಗುವುದಿಲ್ಲ, ಅದನ್ನು ಸರಿಯಾದ ಸಮಯದಲ್ಲಿ ನೀಡುವುದು ಬಹಳ ಮುಖ್ಯ. ಸರ್ಕಾರದ ಮೂಲಕ ಮಕ್ಕಳಿಗೆ ವಿವಿಧ ಹಂತಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಮಗು ಹುಟ್ಟಿದ ಕೂಡಲೇ ಬಿ.ಸಿ.ಜಿ, ಓ.ಪಿ.ವಿ, ಮತ್ತು ಹೆಪಟೈಟಿಸ್-ಬಿ ಲಸಿಕೆಗಳನ್ನು ನೀಡಲಾಗುತ್ತದೆ ಎಂದ ಅವರು, ಮಕ್ಕಳು, ಗರ್ಭಿಣಿಯವರಿಗೆ ಯಾವ ಯಾವ ಹಂತದಲ್ಲಿ ಯಾವ ಲಸಿಕೆ ನೀಡಲಾಗುತ್ತದೆ ಎನ್ನುವ ಮಾಹಿತಿ ನೀಡಿದರು.
ಮಹಾವಿದ್ಯಾಲಯದ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ದಾನೇಶ್ವರಿ ಹಿರೇಮಠ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಕ್ಕಳ ಲಸಿಕಾ ದಿನಾಂಕಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಲಸಿಕೆಗಳು ನಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸುತ್ತವೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಗರ್ಭಕಂಠಕ ಕ್ಯಾನ್ಸರ್ ರೋಗದ ಅಪಾಯ ತಪ್ಪಿಸಲು ಲಸಿಕೆ ಕೊಡಿಸುವುದು ಅತ್ಯಂತ ಅವಶ್ಯಕ. ೧೨ ರಿಂದ ೧೪ ವರ್ಷದ ಮಕ್ಕಳಿಗೆ ಹೆಣ್ಣು ಮತ್ತು ಗಂಡು ಇಬ್ಬರಿಗೂ ನೀಡುವುದು ಉತ್ತಮ. ಈ ವಯಸ್ಸಿನಲ್ಲಿ ಲಸಿಕೆ ನೀಡಿದರೆ ದೇಹದಲ್ಲಿ ಉತ್ತಮ ರಕ್ಷಣೆ ನಿರ್ಮಾಣವಾಗುತ್ತದೆ ಎಂದರು.
ಪಿಬಿಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನದ ಮೂಲಕ ಲಸಿಕೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಡಾ.ಪ್ರಶಾಂತ ಕುಲಕರ್ಣಿ, ಡಾ. ನಿಂಗನಗೌಡ ಪಾಟೀಲ, ಸಹಾಯಕ ಪ್ರಾಧ್ಯಾಪಕ ಸಂತೋಷ ಸಜ್ಜನ, ಉಪನ್ಯಾಸಕರಾದ ಚಂದ್ರಾ ಜಾಟ್, ರಾಜಶೇಖರ ಕಾಬನೂರ, ಶಿವಾನಂದ ಡಿ, ಮಹಾಂತೇಶಗೌಡ ಪಾಟೀಲ ಉಪಸ್ಥಿತರಿದ್ದರು.