ನೆಲಮಂಗಲದ ಪಶುಪಾಲನಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಚಾಲನೆ ನೀಡಿದರು. ಗ್ರೇಡ್&2 ತಹಸೀಲ್ದಾರ್ ಕಲಾವತಿ, ಪಶು ವೈದ್ಯಾಧಿಕಾರಿ ಡಾ.ಮಸೂದ್ಖಾನ್, ಡಾ.ನಾಗರಾಜು, ಜಾನುವಾರು ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ಇತರರು ಇದ್ದರು.
ನೆಲಮಂಗಲ : ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಿಸಲು ರೈತರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ತಿಳಿಸಿದರು. ನಗರದ ಪಶುಪಾಲನಾ ಆಸ್ಪತ್ರೆಯಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ, ಸಹಕಾರಿ ಹಾಲು ಉತ್ಪಾದಕ ಮಂಡಳಿ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಿದ್ದ ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಭಿಯಾನವನ್ನು 2019 ರಿಂದ ಇಲ್ಲಿಯವರೆಗೆ 8 ಸುತ್ತಿನಲ್ಲಿ ನಡೆಸಲಾಗಿದೆ. ಕಾಲುಬಾಯಿ ರೋಗ ಕಾಣಿಸಿಕೊಂಡ ರಾಸುಗಳು ಮೃತಪಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ರಾಸುಗಳ ರಕ್ಷಣೆ ಹಾಗೂ ರೈತರ ಸಂಕಷ್ಟ ನಿವಾರಣೆಗೆ ಅಭಿಯಾನ ಪ್ರಾರಂಭಿಸಲಾಗಿದೆ. ಜತೆಗೆ ಕಾಲುಬಾಯಿ ರೋಗ ನಿಮೂರ್ಲನೆಗೊಳಿಸಲು ಜಾನುವಾರುಗಳಿಗೆ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಬೇಕು. ಪ್ರತಿ ಗ್ರಾಮಕ್ಕೂ ವೈದ್ಯರ ತಂಡ ಭೇಟಿ ನೀಡಲಿದ್ದು, ಜಾನುವಾರುಗಳಿಗೆ ಉಚಿತ ಲಸಿಕೆ ಹಾಕುವರು. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎ.ಡಿ.ಶಿವರಾಮು ಮಾತನಾಡಿ, ಜಾನುವಾರುಗಳ ಬಾಯಿಯಲ್ಲಿ ಹುಣ್ಣು, ಕಾಲಿನ ಗೊರಸಿನಲ್ಲಿ ಗಾಯ ಮತ್ತು ಬೊಕ್ಕೆ, ಜೊಲ್ಲು ಸುರಿಯುವುದು, ಮೇವು ತಿನ್ನದೆ ನಿತ್ರಾಣಗೊಳ್ಳುತ್ತವೆ. ಹಾಲು ಕಡಿಮೆಯಾಗಿ, ಮುಂದಿನ ಅವಧಿಯಲ್ಲಿ ಜಾನುವಾರುಗಳು ಗರ್ಭ ಧರಿಸದೆ ಇರಬಹುದು. ಇದರಿಂದ ಹಾಲಿನ ಗುಣಮಟ್ಟ ಕಡಿಮೆಯಾಗಿ ಆರ್ಥಿಕ ನಷ್ಟ ಉಂಟುಮಾಡುತ್ತದೆ. ರೈತರು ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ 2030 ರೊಳಗೆ ಕಾಲುಬಾಯಿ ರೋಗ ಮುಕ್ತ ದೇಶ ನಿಮಾರ್ಣ ಮಾಡುವ ಗುರಿ ಹೊಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು.
ತಂಡ ರಚನೆ : ಈಗಾಗಲೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಪೋಸ್ಟರ್ಅಂಟಿಸಿ ಪ್ರಕಟಿಸಲಾಗುತ್ತದೆ. ಜತೆಗೆ ಅಟೋ ಪ್ರಚಾರ ಮಾಡಲಾಗಿದೆ. ತಾಲೂಕಿನಾದ್ಯಂತ 75 ಅಧಿಕಾರಿಗಳನ್ನು ಒಳಗೊಂಡು 282 ಗ್ರಾಮದಲ್ಲಿ ಇಲಾಖೆಯಿಂದ 34 ತಂಡ ರಚಿಸಿ ಲಸಿಕೆ ನೀಡಲಾಗುತ್ತಿದೆ ಎಂದು ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎ.ಡಿ.ಶಿವರಾಮು ಮಾಹಿತಿ ನೀಡಿದರು.