ಕಲಬುರಗಿಯಲ್ಲಿ ಮಂಗಳವಾರ ಕರೆದಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಡಿಸಿ ಮೊಹ್ಮದ್ ಇಕ್ರಮುಲ್ಲಾ ಷರೀಫ್ ಪೋಸ್ಟರ್ ಬಿಡುಗಡೆ ಮಾಡಿದರು. ರಾಹುಲ್ ಸಂಕನೂರ, ಅವಿನಾಶ ಶಿಂಧೆ, ಡಾ.ಶರಣಬಸಪ್ಪ ಕ್ಯಾತನಾಳ, ರೂಕಿಯ್ಯ ಅಸನಾ ರಬ್, ಡಾ.ಸಿದ್ದು ಪಾಟೀಲ್, ಶಂಕ್ರಮ್ಮ ಡವಳಗಿ, ರಾಜಕುಮಾರ ರಾಠೋಡ್ ಇತರರಿದ್ದರು.
- ಡಿಸಿ ಇಕ್ರಮುಲ್ಲಾ ಷರೀಫ್ ಸೂಚನೆ
- ಪಲ್ಸ್ ಪೋಲಿಯೋ ಟಾಸ್ಕ್ ಪೋರ್ಸ್ ಸಮಿತಿ ಸಭೆ
ಕಲಬುರಗಿ: ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಜೂ.28ರಂದು ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಹೈರಿಸ್ಕ್ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹೆದ್ದಾರಿ ಚೆಕ್ಪೋಸ್ಟ್ಗಳಲ್ಲಿ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹ್ಮದ್ ಇಕ್ರಮುಲ್ಲಾ ಶರೀಫ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯಾರ್ಥಿಗಳಿಂದ ಜಾಥಾ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಜೂ.28ರಂದು ಜಿಲ್ಲೆಯ ಎಲ್ಲ ಬೂತ್ಗಳಲ್ಲಿ ಲಸಿಕೆ ಹಾಕಲಾಗುವುದು. 29ರಿಂದ ಜು.1ರವರೆಗೆ 1,475 ತಂಡಗಳು ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಬೇಕು. ಯಾವೊಂದು ಮಗು ಲಸಿಕೆಯಿಂದ ವಂಚಿತವಾಗಬಾರದು ಎಂದರು.
ಲಸಿಕಾಕರಣಕ್ಕೆ ಜಿಲ್ಲೆಯ 5 ವರ್ಷದೊಳಗಿನ ಅಂದಾಜು 3,51,716 ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ 1,519 ಕೇಂದ್ರಗಳಲ್ಲಿ (ಬೂತ್) ಲಸಿಕೆ ಹಾಕಲಾಗುವುದು. ಇದಕ್ಕಾಗಿ 3,364 ಸಿಬ್ಬಂದಿ ಹಾಗೂ 334 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 132 ಟ್ರಾನ್ಸಿಟ್ ಹಾಗೂ ದೂರದ ಪ್ರದೇಶಗಳಿಗಾಗಿ 31 ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ. ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಕೊಳೆಗೇರಿ, ವಲಸೆ ಕಾರ್ಮಿಕರ ಪ್ರದೇಶ ಮತ್ತು ಇಟ್ಟಿಗೆ ಭಟ್ಟಿಗಳ ಮೇಲೆ ತೀವ್ರ ನಿಗಾ ಇರಿಸಬೇಕು. ಉನ್ನತ ಅಧಿಕಾರಿಗಳ ತಂಡ ಖುದ್ದಾಗಿ ಹೈರಿಸ್ಕ್ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ ಅಭಿಯಾನ ಯಶಸ್ವಿಗೊಳಿಸಬೇಕು. ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರ ನೀಡಬೇಕು. ಪಲ್ಸ್ ಪೋಲಿಯೋ ಯಶಸ್ಸಿಗೆ ಶಿಕ್ಷಣ ಇಲಾಖೆ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ, ಪೊಲೀಸ್ ಸೇರಿ ವಿವಿಧ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಹೆಚ್ಒ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಸರ್ಜನ್ ರೂಕಿಯ್ಯ ಅಸನಾ ರಬ್, ಆರ್ಸಿಎಚ್ ಅಧಿಕಾರಿ ಡಾ.ಸಿದ್ದು ಪಾಟೀಲ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ರಾಜಕುಮಾರ ರಾಠೋಡ್ ಇತರರಿದ್ದರು. ಸರ್ವೇಕ್ಷಣಾಧಿಕಾರಿ ಅನಿಲ ತಾಳಿಕೋಟಿ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಪಲ್ಸ್ ಪೋಲಿಯೋ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪೋಲಿಯೋ ಲಸಿಕೆ ಹಾಕುವ ದಿನ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ವಲಸೆ ಮತ್ತು ಕಟ್ಟಡ ಕಾರ್ಮಿಕರ ಮಕ್ಕಳನ್ನು ತಲುಪಲು ವಿಶೇಷ ಮೈಕ್ರೋ ಪ್ಲಾನ್ ಸಿದ್ಧಪಡಿಸಿಕೊಳ್ಳಬೇಕು.
— > ಮೊಹ್ಮದ್ ಇಕ್ರಮುಲ್ಲಾ ಶರೀಫ್ ಜಿಲ್ಲಾಧಿಕಾರಿ