Vaccinate and avoid losses in dairy farming dairy
ಶ್ರೀನಿವಾಸಪುರ:ಮನುಕುಲಕ್ಕೆ ಅನ್ನ ನೀಡುವ ರೈತನಿಗೆ ಬೆನ್ನೆಲುಬಾದ ಗೋ ಸಂತತಿ ಸಮೃದ್ಧಿಯಿಂದಿರಲಿ ಎಂಬ ಉದ್ದೇಶದಿಂದ ಸರ್ಕಾರ ಈ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ರಾಸುಗಳ ಸಾಕಣೆದಾರರು ಲಸಿಕಾ ಅಭಿಯಾನವನ್ನು ಸದ್ಭಳಕೆ ವಾಡಿಕೊಳ್ಳುಬೇಕು ಎಂದು ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ. ಮಂಜುನಾಥ ತಿಳಿಸಿದರು.
ತಾಲೂಕಿನ ದಳಸನೂರು ಹಾಲು ಉತ್ಪಾದಕರ ಸಂದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೋಮುಲ್‌ನಿಂದ ರಾಷ್ಟ್ರೀಯ ಜಾನುವಾರು ರೋಗಗಳ ತಡೆಗಾಗಿ ಆಯೋಜಿಸಿರುವ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ವಾತನಾಡಿದರು.
ಪ್ರಾಚೀನ ಕಾಲದಲ್ಲಿ ಪ್ರತಿ ಮನೆಯಲ್ಲಿಯೂ ಗೋವುಪೂಜೆ ನಡೆಯುತ್ತಿತ್ತು, ಇಂದು ಗೋವಿನ ಹಬ್ಬದ(ಸಂಕ್ರಾತಿ) ಸಮಯದಲ್ಲಿ ಮಾತ್ರ ಪೂಜೆ ನಡೆಯುತ್ತಿದೆ. ಇತ್ತೀಚೆಗೆ ಗೋವುಗಳನ್ನು ನಾನಾ ರೋಗಗಳು ಬಾಧಿಸುತ್ತಿದ್ದು, ರೋಗ ನಿರ್ಮೂಲನೆಗಾಗಿ ಪಶು ಇಲಾಖೆ ಜಾರಿಗೆ ತಂದಿರುವ ಔಷಧೋಪಚಾರ ಉಪಯೋಗಿಸುವಂತೆ ರೈತರಿಗೆ ಸಲಹೆ ನೀಡಿ, ರೋಗ ನಿರ್ಮೂಲನೆಗಾಗಿ ದೇವರನ್ನು ಪ್ರಾರ್ಥಿಸೋಣ ಎಂದರು.
ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಹೈನುಗಾರಿಕೆಯಲ್ಲಿ ನಷ್ಟ ತಪ್ಪಿಸಬೇಕು. ಈ ನಿಟ್ಟಿನಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಜ್ವರ ಲಸಿಕಾ ಅಭಿಯಾನದ 8ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.