ಯಾದಗಿರಿಯಲ್ಲಿ ಬುಧವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್್ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾತನಾಡಿದರು. ಡಿಎಚ್ಒ ಡಾ.ಮಹೇಶ ಬಿರಾದಾರ, ಡಾ.ಮಲ್ಲಪ್ಪ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ
- ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ
ಯಾದಗಿರಿ: ಜಿಲ್ಲೆಯಾದ್ಯಂತ ಜೂ. 28ರಿಂದ ಜುಲೈ 1ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ ಐದು ವರ್ಷರೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಿಮಿತ್ತ ಬುಧವಾರ ಕರೆದಿದ್ದ ಜಿಲ್ಲಾ ಟಾಸ್ಕ್ ಫೋರ್ಸ್್ ಸಭೆ&2ರ ಅಧ್ಯತೆ ವಹಿಸಿ ಅವರು ಮಾತನಾಡಿದರು. ಜೂ.28 ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಬೂತ್ ಮಟ್ಟದಲ್ಲಿ ಹಾಗೂ ಮುಂದಿನ 2&3 ದಿನಗಳಿಗೆ (ಜೂನ್ 29ರಿಂದ ಜುಲೈ 1ರವರೆಗೆ) ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದು ತಾಕೀತು ಮಾಡಿದರು.
ವಲಸೆ ಹೋಗುವ ಕುಟುಂಬಗಳ ಹಾಗೂ ಅತೀ ಸ್ಮೂ ಪ್ರದೇಶಗಳಲ್ಲಿನ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ, ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಿಗಾ ವಹಿಸಬೇಕು. 5 ವರ್ಷದ ಮಕ್ಕಳಿಗೆ ಓಆರ್ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದು, ಎಲ್ಲ ಶಾಲಾ, ಕಾಲೇಜು, ವಸತಿ ನಿಲಯಗಳು, ಅಂಗನವಾಡಿ, ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿ, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಪಾಂಡ್ವೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಲವೀಶ್ ಒರ್ಡಿಯಾ, ಡಿಎಚ್ಒ ಡಾ.ಮಹೇಶ್ ಬಿರಾದಾರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜೀದ್ ಇತರರಿದ್ದರು.
ಸಾಂಕ್ರಾಮಿಕ ರೋದ ಬಗ್ಗೆ ಇರಲಿ ಎಚ್ಚರ
ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೆ, ಚಿಕೂನ್ ಗುನ್ಯಾ, ಆನೆಕಾಲು ರೋಗ ಹಾಗೂ ಮೆದುಳು ಜ್ವರ (ಎಇ) ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ರೋಗ ಈ ಹಿಂದೆ ಹೆಚ್ಚಿರುವ ಕಡೆಗಳಲ್ಲಿ ವಿಶೇಷ ನಿಗಾವಹಿಸಬೇಕು. ಡೆಂಘೆ ಪ್ರಕರಣಗಳು ಕಂಡು ಬಂದ ತಣ ತುರ್ತು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿಯೂ ಸೂಕ್ತ ಜಾಗೃತಿ ಮೂಡಿಸಿ, ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವಂತೆ ಡಿಸಿ ಸೂಚಿಸಿದರು.
1,66,928 ಮಕ್ಕಳಿಗೆ ಲಸಿಕೆ ಹಾಕುವ ಗುರಿ
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ಈ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಿಮಿತ್ತ ಜಿಲ್ಲೆಯ ಐದು ವರ್ಷರೊಳಗಿನ 1,66,928 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 665 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗುತ್ತಿದ್ದು, ಐದು ಮೋಬೈಲ್ ತಂಡಗಳು, ಸಮಸ್ಯಾತ್ಮಕ ಪ್ರದೇಶಗಳಲ್ಲಿ 34 ತಂಡಗಳನ್ನು ನಿಯೋಜಿಸಲಾಗಿದ್ದು, 134 ಮೇಲ್ವಿಚಾರಕರನ್ನು ನೇಮಿಸಲಾಗುತ್ತಿದೆ ಎಂದು ಹೇಳಿದರು. ಎಚ್ಪಿವಿ ಲಸಿಕಾ ಕಾರ್ಯಕ್ರಮಡಿಯಲ್ಲಿ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭ ಕಂಟದ ಕ್ಯಾನ್ಸರ್ ತಡೆಗಟ್ಟಲು ಜಿಲ್ಯಾದ್ಯಂತ ಈ ಲಸಿಕೆ ನೀಡಲಾಗುತ್ತಿದೆ. 14,254 ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದು ,ಇಲ್ಲಿಯವರೆಗೆ 8,973 ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲಾಗಿರುತ್ತದೆ. ಉಳಿದ ಹೆಣ್ಣು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಹಾಕಲಾಗುವುದು ಎಂದು ಅವರು ತಿಳಿಸಿದರು.