ಬೆಂಗಳೂರು : ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸಮುದಾಯದ ಸಂಘಟನೆ ಮತ್ತು ಸದಸ್ಯತ್ವ ನೋಂದಣಿಗೆ ವೇಗ ಕೊಡುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ (ಅಭಾವೀಮ) ನೂತನ ವೆಬ್ಸೈಟ್ ಆರಂಭಿಸಿದ್ದು, ಅಂತರ್ಜಾಲದ ಬಳಕೆ ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ ಎಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಸದಾಶಿವನಗರದ ಅಭಾವೀಮ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾಸಭೆಯ ಅಧಿಕೃತ ವೆಬ್ಸೈಟ್ ಬಿಡುಗಡೆಗೊಳಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಶಕ್ತಿ ಇರುವುದು ಒಗ್ಗಟ್ಟಿನಲ್ಲಿ. ಸಮಾಜದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಪೂರ್ವಜರ ಸಾಧನೆಗಳನ್ನು ನೆನಪಿಸಿಕೊಂಡು ಹೆಮ್ಮೆಪಟ್ಟರೆ ಸಾಲದು. ವರ್ತಮಾನದಲ್ಲಿ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ನಮ್ಮ ಸಮುದಾಯದಲ್ಲಿ ಶೇ.20ರಷ್ಟು ಜನ ಪ್ರಬಲರಾಗಿರಬಹುದು. ಶೇ.50ರಷ್ಟು ಜನ ಮಧ್ಯಮ ವರ್ಗದಲ್ಲಿದ್ದರೆ, ಸುಮಾರು ಶೇ.30ರಷ್ಟು ಜನ ಬಡತನದಲ್ಲಿದ್ದಾರೆ. ಈ ಬಡವರು, ಶೋಷಿತರು ಹಾಗೂ ಹಿಂದುಳಿದವರಿಗೆ ನ್ಯಾಯ ಒದಗಿಸುವುದು ಸಮಾಜದ ಕರ್ತವ್ಯ. ಮಹಾಸಭೆಯ ಸದಸ್ಯತ್ವದ ಸಂಖ್ಯೆಯನ್ನು ಒಂದು ವರ್ಷದಲ್ಲಿ 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಹೊಸದಾಗಿ ಬಿಡುಗಡೆಗೊಂಡಿರುವ ವೆಬ್ಸೈಟ್ ಪೂರಕವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಶಾಸಕ ಗಣೇಶ್ ಹುಕ್ಕೇರಿ, ಅಭಾವೀಮ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ, ಮುಖಂಡರಾದ ಗುರುಸ್ವಾಮಿ, ಮನೋಹರ ಅಬ್ಬಿಗೆರೆ, ಮುಕ್ತಾಂಬ, ಆಡಳಿತಾಧಿಕಾರಿ ತೋಂಟದಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಶುಕ್ರವಾರ ನಿಧನರಾದ ಮಾಜಿ ಶಾಸಕ ಶಿವಾನಂದ ಕೌಜಲಗಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೆಬ್ಸೈಟ್ ವಿನ್ಯಾಸಗೊಳಿಸದ ಶಿವಯೋಗಿ ಮತ್ತವರ ತಂಡದ ಇಂಜಿನಿಯರ್ಗಳನ್ನು ಸನ್ಮಾನಿಸಲಾಯಿತು.
ಅಭಾವೀಮ ಸದಸ್ಯತ್ವ ಅಭಿಯಾನವನ್ನು ತಳಮಟ್ಟದಿಂದ ಬಲಪಡಿಸಬೇಕು. ರಾಜ್ಯದ 236 ತಾಲೂಕುಗಳ ಪೈಕಿ ಕನಿಷ್ಠ 150 ತಾಲೂಕುಗಳಲ್ಲಿ ತಲಾ 10 ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಮಹಾಸಭೆ ಒಂದು ಸಮುದ್ರವಿದ್ದಂತೆ. ಸಮಾಜದ ಅಭಿವೃದ್ಧಿಗೆ ಪದಾಧಿಕಾರಿಗಳು ಸ್ವಪ್ರೇರಣೆಯಿಂದ ಸೇವೆ ಸಲ್ಲಿಸಬೇಕು.ಶಂಕರ ಬಿದರಿ, ಅಭಾವೀಮ ರಾಜ್ಯಾಧ್ಯಕ್ಷ