Use balanced fertilizer to protect the soil. 
ರಾಜ್ಯ

ಮಣ್ಣಿನ ರಕ್ಷಣೆಗೆ ಸಮತೋಲಿತ ರಸಗೊಬ್ಬರ ಬಳಸಿ

ಹುಳಿಯಾರು: ರೈತರು ಸಮಗ್ರ ಹಾಗೂ ಸಮತೋಲಿತ ರಸಗೊಬ್ಬರಗಳನ್ನು ಬಳಸುವ ಮೂಲಕ ಭೂಮಿಯ ತೇವಾಂಶ ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೃಷಿ ಅಧಿಕಾರಿ ಎಸ್​.ರಾಧಮ್ಮ ತಿಳಿಸಿದರು.
ಹುಳಿಯಾರು ಹೋಬಳಿಯ ತಿಮ್ಮಲಾಪುರ ಪಂಚಾಯತಿಯಲ್ಲಿ ಬುಧವಾರ ಆಯೋಜಿಸಿದ್ದ 'ಧರ್ತಿ ಮಾತಾ ಬಚಾವೋ' ಆಂದೋಲನದ ಅರಿವು ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿಮೀರುತ್ತಿದ್ದು, ರೈತರು ಅನಗತ್ಯವಾಗಿ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ. ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ. ಇದಕ್ಕೆ ಸರಳವಾದ ಆದರೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಹಿಂತಿರುಗಿಸುವುದಾಗಿದೆ ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಬಳಕೆಯನ್ನು ನಿಯಂತ್ರಿಸಲು ಕೃಷಿ ಇಲಾಖೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಪ್ರತಿ ಎಕರೆಗೆ ತಿಂಗಳಿಗೆ ಕೇವಲ ಒಂದು ಚೀಲ ಯೂರಿಯಾ ಮಾತ್ರ ವಿತರಿಸಲಾಗುವುದು ಎಂದರು.