ತ್ರಾಸಿ ಗ್ರಾಪಂ ವ್ಯಾಪ್ತಿಯ ಆನಗೋಡು ಎಂಬಲ್ಲಿ ಸೌಪಣಿಕಾ ನದಿಯಲ್ಲಿ ಅವೈಜ್ಞಾನಿಕವಾಗಿ ಮರಳು ತೆಗೆಯುತ್ತಿರುವುದು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ತ್ರಾಸಿ ಗ್ರಾಪಂ ವ್ಯಾಪ್ತಿಯ ಆನಗೋಡು ಪ್ರದೇಶ ಮರಳುಗಾರಿಕೆಗೆ ನಲುಗಿ ಹೋಗಿದೆ. ಈ ಭಾಗದ ಸೌಪರ್ಣಿಕಾ ನದಿಯಲ್ಲಿ ಅವೈಜ್ಞಾನಿಕವಾಗಿ ನಿಯಮ ಮೀರಿ ಮರಳು ತೆಗೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ತ್ರಾಸಿ ಗ್ರಾಮ ಪಂಚಾಯಿತಿಯ ಆನಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳಿದ್ದು, ಮರಳುಗಾರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಸೌಪರ್ಣಿಕಾ ನದಿಯಿಂದ ಮರಳಿನ ದಿಬ್ಬವನ್ನು ತೆರವುಗೊಳಿಸಲು ಬಂದರು, ಮೀನುಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದಿರುವ ಗುತ್ತಿಗೆದಾರರು ಹೊರ ರಾಜ್ಯದ ನೂರಾರು ಕಾರ್ಮಿಕರನ್ನು ಬಳಸಿ ಮರಳು ದಿಬ್ಬ ಇಲ್ಲದಿದ್ದರೂ ನದಿಯಿಂದ ಅವೈಜ್ಞಾನಿಕವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳೀಯರು ಅನೇಕ ಬಾರಿ ಪ್ರತಿಭಟನೆ ಮಾಡಿ ಎಚ್ಚರಿಸಿದ್ದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳದಿರುವುದು ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿರಬಹುದೆಂಬ ಅನುಮಾನ ಮೂಡಿಸಿದೆ.
ಆಳ ಮರಳುಗಾರಿಕೆಯಿಂದ ಆತಂಕ: ಪ್ರಸ್ತುತ ಈ ಪ್ರದೇಶದಲ್ಲಿ ನೈಸರ್ಗಿಕವಾಗಿ ಯಾವುದೇ ಮರಳಿನ ದಿಬ್ಬ ರಚನೆಯಾಗಿಲ್ಲದಿದ್ದರೂ ನದಿಯ ದಡದ ಸಂರಕ್ಷಣೆಗೆ ಇರುವ ಕಾಂಡ್ಲವನವನ್ನು ತುಂಡರಿಸಿ ಭಾರಿ ಗಾತ್ರದ ದೋಣಿ ಬಳಸಿ ಆಳವಾಗಿ ಮರಳು ತೆಗೆಯುತ್ತಿರುವುದರಿಂದ ನದಿ ತೀರದ ದಂಡೆ, ತೆಂಗಿನ ಮರ, ನೀರಿನ ಮೋಟಾರ್ ಶೆಡ್‌ಗೆ ಹಾನಿಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ದಡದ ಸಮೀಪದಲ್ಲಿರುವ ಮನೆಗಳು ಕೂಡ ಕುಸಿಯುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಿರಿದಾದ ರಸ್ತೆಯಲ್ಲಿ ಟಿಪ್ಪರ್ ಸಂಚಾರ: ಮರಳು ಸಾಗಾಟಕ್ಕೆ ಜನವಸತಿ ಜಾಗದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಅಗಲ ಕಿರಿದಾದ ರಸ್ತೆಯಲ್ಲಿ ಬೆಳಗ್ಗೆಯಿಂದ ಸಂಜೆ ತನಕ ನಿರಂತರವಾಗಿ ಮರಳು ಸಾಗಾಟದ ಟಿಪ್ಪರ್‌ಗಳು ಸಂಚರಿಸುತ್ತವೆ. ಮಿತಿಮೀರಿದ ವೇಗದಲ್ಲಿ ಸಂಚರಿಸುವ ಟಿಪ್ಪರ್‌ಗಳಿಂದ ಆಗುತ್ತಿರುವ ಅಪಘಾತಗಳಿಂದಾಗಿ ಜನರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ನಿಯಮ ಬಾಹಿರವಾಗಿ ನಡೆಯುತ್ತಿರುವ ಮರಳುಗಾರಿಕೆಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು, ಬೇರೆ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಿರುವುದು ವಿಪರ್ಯಾಸ.
10ಕ್ಕೂ ಹೆಚ್ಚು ಶೆಡ್ ನಿರ್ಮಾಣ
ಈ ಪರಿಸರದಲ್ಲಿ ಹೊರ ರಾಜ್ಯದ ಕಾರ್ಮಿಕರು ಸುಮಾರು 10ಕ್ಕೂ ಹೆಚ್ಚು ಶೆಡ್ ನಿರ್ಮಿಸಿಕೊಂಡಿದ್ದು, ಈ ಶೆಡ್‌ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಸಮೀಪದ ಮನೆಯೊಂದರಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಎನ್ನಲಾಗಿದ್ದು, ಮೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಆನಗೋಡು ಪರಿಸರದಲ್ಲಿ ಸೌಪರ್ಣಿಕಾ ನದಿಯಲ್ಲಿ ಮರಳು ದಿಬ್ಬ ಇಲ್ಲದಿದ್ದರೂ ಅವೈಜ್ಞಾನಿಕವಾಗಿ, ನಿಯಮ ಬಾಹಿರವಾಗಿ ಮರಳು ತೆಗೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವೈಜ್ಞಾನಿಕವಾಗಿ ಮರಳು ತೆಗೆಯುವುದನ್ನು ಸ್ಥಗಿತಗೊಳಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.