ನಿವಾರಣೆಯಾಗದ ಸಿಲಿಂಡರ್ ಸಮಸ್ಯೆ cylinder
ಬಂಗಾರಪೇಟೆ: ನಗರದಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆಯ ಸಿಲಿಂಡರ್ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಣಿಜ್ಯ ಸಿಲಿಂಡರ್ಗಳ ಅಭಾವದಿಂದ ಹೋಟೇಲ್ ಉದ್ಯಮ ಕುಸಿತದ ಅಂಚಿನಲ್ಲಿದ್ದು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.cylinder
ಬಹುತೇಕ ಹೋಟೇಲ್ಗಳ ಬಾಗಿಲು ಮುಚ್ಚಿದ್ದು, ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸುಲಭವಾಗಿ ದೊರೆಯುವ ಕಾಫಿ ಮತ್ತು ಟೀ, ರುಚಿಕರ ತಿಂಡಿಗಳ ತಯಾರಿಕೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಸಿಲಿಂಡರ್ ಸಿಗದಿದ್ದರೆ ವ್ಯವಹಾರ ಹೇಗೆ ನಡೆಸುವುದು ಎಂದು ಮಾಲೀಕರು ಚಿಂತಿಸುತ್ತಿದ್ದಾರೆ.
ಕೆಲವು ಗ್ಯಾಸ್ ಏಜೆನ್ಸಿಗಳು ಕೃತಕವಾಗಿ ಸಮಸ್ಯೆ ಸೃಷ್ಟಿಸುತ್ತಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿವೆ.
ತಹಸೀಲ್ದಾರ್ ಸುಜಾತಮ್ಮ ಸಿಲಿಂಡರ್ ಸಂಸ್ಥೆಗೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಗ್ರಾಹಕರಿಂದಲೂ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹಿಸಿದರು. ಸರ್ಕಾರದ ನಿಯಮಾವಳಿ ಪ್ರಕಾರ ನೋಂದಣಿ ಮಾಡಿದ ದಿನದಿಂದ ನಿಗದಿತ ಅವಧಿಯೊಳಗೆ ಪೂರೈಕೆ ಆಗಬೇಕು. ಇದನ್ನು ಪಾಲಿಸದ ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೃಹ ಬಳಕೆ ಸಿಲಿಂಡರ್ಗೂ ಆತಂಕ: ಗೃಹ ಬಳಕೆ ಸಿಲಿಂಡರ್ಗಳ ಕೊರತೆ ಸಹ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಏಜೆನ್ಸಿಗಳ ಮುಂದೆ ಸಿಲಿಂಡರ್ ಹಿಡಿದು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿವೆ. ಗ್ಯಾಸ್ಬುಕ್ ಮಾಡಿದರೂ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಕೊರತೆ ಇಲ್ಲ ಎಂದು ಆಹಾರ ಸಚಿವರು ಹೇಳುತ್ತಿರುವುದು ವಾಸ್ತವಿಕತೆಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.