ಮಲ್ಲಯ್ಯಪುರದ ಗ್ರಾಮದ ಕೃಷ್ಣಯ್ಯ ಅವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಕಲ್ಲು ಕಂಬವುಳ್ಳ ಸೋಲಾರ್ ತಂತಿ ಬೇಲಿ ನಾಶಪಡಿಸಿರುವುದು.  
ರಾಜ್ಯ

ಮಲ್ಲಯ್ಯನಪುರದಲ್ಲಿ ನಿಲ್ಲದ ಕಾಡಾನೆ ಹಾವಳಿ

ಹನೂರು: ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಕಾಡಾನೆಯೊಂದರ ಹಾವಳಿ ಹೆಚ್ಚಾಗಿದ್ದು, ಸೋಮವಾರ ರಾತ್ರಿ ಜಮೀನೊಂದಕ್ಕೆ ಲಗ್ಗೆ ಇಟ್ಟು ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿದೆ. ಇದರಿಂದ ಬೇಸತ್ತ ರೈತರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತಿರುವ ಈ ಗ್ರಾಮದಲ್ಲಿ ರೈತರು ಜಮೀನನ್ನು ಹೊಂದಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಯೊಂದು ಈ ಭಾಗದ ಜಮೀನುಗಳಿಗೆ ಆಗಾಗ್ಗೆ ಲಗ್ಗೆ ಇಟ್ಟು ಮುಸುಕಿನ ಜೋಳ, ಬಾಳೆ, ನೀರಾವರಿ ಪರಿಕರ ಹಾಗೂ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿದೆ.

ಗ್ರಾಮದ ತಿರುಮಮ್ಮ, ಶಿವರಾಜು, ಚಂದ್ರಮ್ಮ, ಮುನಿಯಪ್ಪ, ರಾಜಗೋಪಾಲ, ಕೃಷ್ಣಪ್ಪ, ರಾಜಪ್ಪ ಹಾಗೂ ಗೋವಿಂದ ಅವರ ಜಮೀನಿನಲ್ಲೆ ಬೆಳೆದಿದ್ದ ಫಸಲನ್ನು ಕಾಡಾನೆ ತಿಂದು, ತುಳಿದು ನಾಶಪಡಿಸಿದೆ. ಕಾಡಾನೆಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಹಲವು ಬಾರಿ ಬಾರಿ ತಿಳಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಕಳೆದ ವಾರ ಈ ಭಾಗದ 3 ಜಮೀನಿಗೆ ರಾತ್ರಿ ವೇಳೆ ಲಗ್ಗೆ ಇಟ್ಟ ಕಾಡಾನೆ ದಾಂಧಲೆ ನಡೆಸಿ ಫಸಲು ನಾಶಪಡಿಸಿತ್ತು. ಆನೆಯನ್ನು ಕಾಡಿಗೆ ಓಡಿಸಲು ರೈತರು ಹರಸಾಹಸ ಪಟ್ಟಿದ್ದರು. ಈ ಬಗ್ಗೆ ತಿಳಿದು ಸ್ಥಳಕ್ಕೆ ಎಸಿಎಫ್ ಮರಿಸ್ವಾಮಿ ಅವರು ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಮತ್ತೆ ಕಾಡಾನೆ ರಾತ್ರಿ 8ರ ವೇಳೆಯಲ್ಲಿ ಗ್ರಾಮದ ಕೃಷ್ಣಯ್ಯ ಅವರ ಜಮೀನಿಗೆ ಲಗ್ಗೆ ಇಟ್ಟು ಕಲ್ಲು ಕಂಬ ಹಾಗೂ ಸೋಲಾರ್ ತಂತಿ ಬೇಲಿ ನಾಶಪಡಿಸಿದೆ. ದಾಂಧಲೆ ನಡೆಸುತ್ತಿದ್ದ ಕಾಡಾನೆಯನ್ನು ಅಕ್ಕಪಕ್ಕದ ರೈತರು ನಿದ್ರೆಗೆಟ್ಟು ಬ್ಯಾಟರಿ ಬೆಳಕಿನಲ್ಲಿ ಸದ್ದು ಮಾಡುತ್ತಾ ಕಾಡಿಗೆ ಓಡಿಸುವುದರ ಮೂಲಕ ತೊಂದರೆ ಅನುಭವಿಸಿದರು. ಕಾಡಾನೆ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.

ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಫಸಲು, ನೀರಾವರಿ ಪರಿಕರ ಹಾಗೂ ಸೋಲಾರ್ ತಂತಿ ಬೇಲಿ ನಾಶ ಪಡಿಸುವುದು ನಿಂತಿಲ್ಲ. ಕಾಡಾನೆ ಹಾವಳಿಯಿಂದ ಕೆಲವು ರೈತರು ಕೃಷಿ ಮಾಡದೇ ಜಮೀನನ್ನು ಪಾಳು ಬಿಟ್ಟಿದ್ದಾರೆ. ಈ ಭಾಗದಲ್ಲಿ ಕಾಡಾನೆ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಇಲಾಖೆಯ ವಿರುದ್ಧ ರೈತರೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಶಿವರಾಜು, ನಾಗೇಂದ್ರ, ಚಂದ್ರಯ್ಯ, ರಾಜೇಂದ್ರ, ಸುರೇಶ್, ರಘು, ರಾಜಗೋಪಾಲ್, ಕೃಷ್ಣಯ್ಯ, ಮಾದೇಶ್, ಮುನಿಯಪ್ಪ ಇತರರು ಇದ್ದರು.