ಅರಸೀಕೆರೆ ನಗರದ ಎಪಿಎಂಸಿ ಪ್ರಾಂಗಣದಲ್ಲಿ ರಾಗಿ ಖರೀದಿ ಮಾಡಿ ಗೋದಾಮಿಗೆ ಸಾಗಿಸಲು ಚೀಲಗಳಲ್ಲಿ ಸಂಗ್ರಹಿಸಿರುವುದು.
- ಎಪಿಎಂಸಿ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಉಪ ಪ್ರಾಂಗಣ
- ರೈತರಿಂದ ಖರೀದಿಸಿದ ರಾಗಿ ದಾಸ್ತಾನಿಗೆ ಹಣ ಪಾವತಿ ಆಗದಿರುವುದು
ಅರಸೀಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನಗರದ ಎಪಿಎಂಸಿ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಉಪ ಪ್ರಾಂಗಣಗಳಲ್ಲಿ ರೈತರಿಂದ ಖರೀದಿಸಿದ ರಾಗಿ ದಾಸ್ತಾನಿಗೆ ಹಣ ಪಾವತಿ ಆಗದಿರುವುದು ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.
ಫಲಾನುಭವಿಗಳು ಪಾಸ್ ಪುಸ್ತಕ ಹಿಡಿದು ಬ್ಯಾಂಕ್‌ಗಳಿಗೆ ಎಡತಾಕುತ್ತಿರುವ ದೃಶ್ಯ ನಿತ್ಯವೂ ಕಂಡುಬರುತ್ತಿದ್ದು, ವಿಳಂಬ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಪೂರ್ವ ಮುಂಗಾರು ಮಳೆಯಿಂದ ರೈತರು ಜಮೀನು ಹದಗೊಳಿಸುವ ಕಾಯಕದಲ್ಲಿ ತೊಡಗಿದ್ದು, ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಲಭ್ಯವಿರುವ ಮಾಹಿತಿ ಅನುಸಾರ ಫೆಬ್ರವರಿ ಕೊನೆಯ ವಾರದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ ಮಾಸಾಂತ್ಯದವರೆಗೆ ಮಾತ್ರವೇ ರೈತರ ಖಾತೆಗೆ ಹಣ ಜಮೆಯಾಗಿದೆ. ಇನ್ನುಳಿದ ಒಂದೂವರೆ ತಿಂಗಳಿನಿಂದ ಹಣ ಬಾರದಿರುವುದರಿಂದ ರೈತರನ್ನು ಕಂಗಾಲಾಗಿಸಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಪ್ರತಿ ಕ್ವಿಂಟಾಲ್‌ಗೆ 4886 ರೂ.ನಂತೆ ತಾಲೂಕಿನ ಗಂಡಸಿಯಲ್ಲಿ 13,693, ಜಾವಗಲ್ 95,300, ಜೆ.ಸಿ.ಪುರ 81,836, ಬಾಣಾವರ 65,102 ಹಾಗೂ ನಗರದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಒಟ್ಟು 4,66,931 ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಈಗಾಗಲೇ ಖರೀದಿ ಮಾಡಲಾಗಿದೆ. ಈ ಪೈಕಿ ಬೆರಳೆಣಿಕೆ ರೈತರಿಗೆ ಮಾತ್ರವೇ ಹಣ ಪಾವತಿಯಾಗಿದೆ. ಸರ್ಕಾರದಿಂದ ಬರುವ ಲಾಭದ ಹಣ ಪಡೆದು ಮದುವೆ, ನಾಮಕರಣ, ಸೇರಿದಂತೆ ಶುಭ ಸಮಾರಂಭಗಳನ್ನು ಹಮ್ಮಿಕೊಂಡಿದ್ದವರಲ್ಲಿ ಆತಂಕ ಮನೆ ಮಾಡಿದೆ. ಹಣದ ಸಿಗದೆ ಶುಭ ಕಾರ್ಯ ಮುಂದೂಡಿರುವ ಪ್ರಸಂಗವೂ ಇದೆ. ಅನ್ನದಾತನ ಪರಿಸ್ಥಿತಿ ಹೀಗಿದ್ದರೂ ಸರ್ಕಾರ ವಿಳಂಬ ಮಾಡುತ್ತಿರುವುದು ಸಹನೆ ಕಟ್ಟೆಯೊಡೆಯುವಂತೆ ಮಾಡಿದೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ಅನ್ನದಾತರಿಗೆ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹಣ ಹಿಂಪಡೆಯುವುದು ಸವಾಲಾಗಿದೆ. ಕೆಲ ಬ್ಯಾಂಕ್‌ಗಳು ಒಂದು ಲಕ್ಷ ಮಿತಿ ಹೇರಿದ್ದರೆ, ಕೆಲವೆಡೆ 50 ಸಾವಿರ ರೂ.ಗೆ ಸೀಮಿತಗೊಳಿಸಲಾಗುತ್ತಿದೆ ಎನ್ನುವ ದೂರುಗಳಿವೆ. ಹೇಗಾದರೂ ಸರಿ ತಮ್ಮ ಪಾಲಿನ ಹಣ ವಾಪಸ್ ಪಡೆಯಬೇಂಬ ಹಂಬಲದಿಂದ ಪ್ರತಿನಿತ್ಯ ಬ್ಯಾಂಕ್, ಅಂಚೆ ಕಚೇರಿಗೆ ಅನ್ನದಾತರು ಅಲೆಯಲಾರಂಭಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮಧ್ಯವರ್ತಿಗಳು ಎಟಿಎಂಗಳ ಬಳಿ ನಿಂತು ಕಮಿಷನ್ ಪಡೆಯುವ ಹುನ್ನಾರ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.
ಆತಂಕ: ಐದು ಎಕರೆಗಿಂತ ಮೇಲ್ಪಟ್ಟು ಜಮೀನು ಹೊಂದಿರುವ ರೈತರಿಗೆ 50 ಕ್ವಿಂಟಾಲ್ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಬಾರದಿದ್ದರೂ ರೈತನ ಫ್ರೂಟ್ ಐಡಿಯಲ್ಲಿ ಮಾರಾಟ ಮಿತಿ ನಿಗದಿಯಾಗಿದೆ. ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಕೆಲ ದಲ್ಲಾಳಿಗಳು ರೈತರ ದಾಖಲೆ ಪಡೆದು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಮಾರಾಟ ಮಾಡಿದ್ದಾರೆ. ಬ್ಯಾಂಕ್ ದಾಖಲೆಗಳಲ್ಲಿ ಆದಾಯ ಮಿತಿ ದಾಖಲಾಗುತ್ತಿದ್ದು ಬಿಪಿಎಲ್ ಕಾರ್ಡ್ ರದ್ದಾಗುವ ಆತಂಕದಲ್ಲಿದ್ದಾರೆ.
ರಾಗಿಯನ್ನು ಈಗಾಲೇ ಖರೀದಿ ಮಾಡಿದ್ದು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗಂಡಸಿ, ಹಾಸನ, ಅರಸೀಕೆರೆ ಹಾಗೂ ಜಾವಗಲ್ ಗೋದಾಮುಗಳಲ್ಲಿ ದಾಸ್ತಾನು ಸಂಗ್ರಹಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡಿರುವ ರಾಗಿ ದಾಸ್ತಾನಿಗೆ ಮಾರ್ಚ್ ಅಂತ್ಯದವರೆಗೆ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಬಾಕಿ ಮೊತ್ತ ಪಾವತಿ ಶೀಘ್ರವೇ ನೀಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ದಾಸ್ತಾನು ಮಾರಾಟ ಮಾಡಿರುವವರು ಆತಂಕಪಡುವ ಅಗತ್ಯವಿಲ್ಲ.
ಶ್ರೀನಾಥ್ ರಾಗಿ ಖರೀದಿ ಕೇಂದ್ರದ ಅಧಿಕಾರಿ, ಅರಸೀಕೆರೆ
ರಾಗಿ ಮಳೆಯಾಶ್ರಿತ ವಾರ್ಷಿಕ ಬೆಳೆಯಾಗಿದ್ದು ಸಾಲ ಮಾಡಿ ಫಸಲು ಬೆಳೆದಿದ್ದೇವೆ. ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ಒಂದೂವರೆ ತಿಂಗಳಾದರೂ ಹಣ ಬಂದಿಲ್ಲ. ಇದರಿಂದ ಪೂರ್ವ ಮುಂಗಾರು ಬೆಳೆ ಬಿತ್ತನೆ ಮಾಡಲು ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಹಣವಿಲ್ಲದಂತಾಗಿದೆ. ಈ ಸರ್ಕಾರಗಳು ಸಂಕಷ್ಟ ಅರಿತು ತಕ್ಷಣವೇ ನೆರವಿಗೆ ಧಾವಿಸಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಗಿ ಖರೀದಿಗೆ ಆತುರ ತೋರುತ್ತವೆ. ಆದರೆ ಹಣ ಜಮೆ ಮಾಡುವ ವಿಷಯದಲ್ಲಿ ನಿರ್ಲಕ್ಷೃ ಮಾಡುತ್ತವೆ. ವಿಳಂಬ ಧೋರಣೆಯಿಂದಾಗಿ ಅನ್ನದಾತರ ಮನೆಯಲ್ಲಿ ನಡೆಯುವ ಮದುವೆ, ನಾಮಕರಣ,ತಿಥಿ ಸೇರಿದಂತೆ ಸಮಾರಂಭಗಳನ್ನು ಮುಂದೂಡುವಂತಾಗಿದೆ. ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಲಿದ್ದು ಸಂಕಷ್ಟ ಅರಿತು ರೈತರ ಖಾತೆಗೆ ಹಣ ಬಿಡುಗಡೆ ಮಾಡಬೇಕು. ವಿಳಂಬ ನೀತಿ ಅನುಸರಿಸಿದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.
ಕನಕಂಚೇನಹಳ್ಳಿ ಪ್ರಸನ್ನಕುಮಾರ್ ರೈತ ಮುಖಂಡ, ಅರಸೀಕೆರೆ