- ಸೀಮಿತ ಅಧಿಕಾರ ಎಂದು ಹೈಕೋರ್ಟ್ ತೀರ್ಪು
- ಸ್ವೇಚ್ಛಾಚಾರದ ಪರಿಶೀಲನೆಗೆ ಮಾತ್ರ ಅವಕಾಶ
ಶ್ರವಣ್ ನೀರಬಿದಿರೆ ಬೆಂಗಳೂರು
ಗುತ್ತಿಗೆ ಮತ್ತು ಸರ್ಕಾರದ ವಾಣಿಜ್ಯ ಸಂಬಂಧಿತ ವಿಷಯಗಳಲ್ಲಿ ನ್ಯಾಯಾಂಗ ವಿಮರ್ಶೆಯ ಅಧಿಕಾರ ಚಲಾಯಿಸುವಾಗ ನ್ಯಾಯಾಲಯಗಳು ಸಂಯಮ ಕಾಯ್ದುಕೊಳ್ಳಬೇಕು. ಸರ್ಕಾರದ ನಿರ್ಧಾರವು ಪಕ್ಷಪಾತದಿಂದ ಕೂಡಿದ್ದು, ದುರುದ್ದೇಶ ಹೊಂದಿದ್ದರೆ ಮಾತ್ರ ನ್ಯಾಯಾಲಯ ಹಸ್ತಕ್ಷೇಪ ಮಾಡಬೇಕು. ಇಲ್ಲವಾದರೆ, ಅಧಿಕಾರಿಗಳು ನಿಗದಿಪಡಿಸಿದ ಮಾನದಂಡಗಳನ್ನು ಬದಲಾಯಿಸಬಾರದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಟೆಂಡರ್ ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯಗಳ ಮಿತಿಯನ್ನು ಸುಪ್ರೀಂಕೋರ್ಟ್ ಪದೇಪದೆ ಸ್ಪಷ್ಟಪಡಿಸಿದೆ. ಅದರನ್ವಯ, ವಂಚನೆಯ ಉದ್ದೇಶ ಇರುವ ಸ್ವೇಚ್ಛಾಚಾರದ ನಿಯಮಗಳ ಪರಿಶೀಲನೆಯನ್ನು ನ್ಯಾಯಾಲಯಗಳು ಮಾಡಬಹುದು. ಆದರೆ, ಅದನ್ನು ಬದಲಾಯಿಸಿ ತನ್ನದೇ ನಿರ್ಧಾರಗಳನ್ನು ಹೇರುವ ಅಧಿಕಾರ ಇಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಏರ್, ಆಯಿಲ್ ಮತ್ತು ಫ್ಯೂಲ್ ಫಿಲ್ಟರ್ಗಳ ಪೂರೈಕೆಗಾಗಿ 2024ರ ಮಾರ್ಚ್ನಲ್ಲಿ ಬಿಎಂಟಿಸಿ ಟೆಂಡರ್ ಆಹ್ವಾನಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದಿನ 3 ವರ್ಷಗಳಲ್ಲಿ 100 ಕೋಟಿ ರೂ. ವ್ಯವಹಾರ ನಡೆಸಿರಬೇಕು ಎಂದು ನಿಗದಿಪಡಿಸಿದ್ದ ಮಾನದಂಡವನ್ನು ಲೂಮನ್ ಇಂಡಸ್ಟ್ರೀಸ್ ಲಿ. ಎಂಬ ಕಂಪನಿ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಅರ್ಜಿ ಮಾನ್ಯ ಮಾಡಿದ ಏಕಸದಸ್ಯ ನ್ಯಾಯಪೀಠ, 3 ವರ್ಷಗಳ ವ್ಯವಹಾರ ಮಿತಿಯನ್ನು 6 ಕೋಟಿ ರೂ.ಗೆ ನಿಗದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಬಿಎಂಟಿಸಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಉತ್ತಮ ಗುಣಮಟ್ಟದ ವಸ್ತುಗಳನ್ನು ಖಾತರಿಪಡಿಸಲು ಬಿಎಂಟಿಸಿ ನಿಗದಿ ಮಾಡಿರುವ ಮಾನದಂಡ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿದೆ.
ನ್ಯಾಯಾಲಯಕ್ಕೆ ಸೀಮಿತ ಅಧಿಕಾರ
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಎಂಟಿಸಿ ನಿಗದಿ ಪಡಿಸದ ಷರತ್ತುಗಳನ್ನು ಪಾಲಿಸದೆ ಬೇರೆ ಘಟಕಗಳು ವ್ಯವಹಾರ ನಡೆಸಿದೆಯೇ ಎಂದು ಪರಿಶೀಲಿಸುವ ಅಗತ್ಯವಿಲ್ಲ. ಏಕೆಂದರೆ, ಟೆಂಡರ್ ಮಾನದಂಡವನ್ನು ಮೌಲ್ಯಮಾಪನ ಮಾಡಲು ನ್ಯಾಯಾಲಯಕ್ಕೆ ಸೀಮಿತ ಅಧಿಕಾರವಿದೆ. ಪ್ರಸ್ತುತ ಪ್ರಕರಣದಲ್ಲಿ ಬಿಎಂಟಿಸಿ ನಿಗದಿ ಪಡಿಸಿರುವ ಮಾನದಂಡಗಳು ಸೂಕ್ತ ಕಾರಣಗಳಿಂದ ಬೆಂಬಲಿತವಾಗಿದೆ. ಆದ್ದರಿಂದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ತೀರ್ಪು ನೀಡಿತು.
ಗುಣಮಟ್ಟದ ಸೇವೆಗಾಗಿ ಮಾನದಂಡ:
ಬಿಎಂಟಿಸಿ ಪರ ವಕೀಲರು ವಾದ ಮಂಡಿಸಿ, ಟೆಂಡರ್ನ ಒಟ್ಟು ಮೌಲ್ಯ 6 ಕೋಟಿ ರೂ. ಆಗಿದ್ದರೂ ಗುಣಮಟ್ಟದ ಸಾಮಾಗ್ರಿಗಳನ್ನು ದೊಡ್ಡ ಮತ್ತು ಈಗಾಗಲೆ ವ್ಯವಸ್ಥಿತ ತಯಾರಿಕ ಸಾಮರ್ಥ್ಯ ಹೊಂದಿರುವ ಕಂಪನಿಗಳಿಂದ ಖರೀದಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ 100 ಕೋಟಿ ರೂ. ವಹಿವಾಟು ನಡೆಸಿರಬೇಕೆಂಬ ಮಾನದಂಡ ನಿಗದಿಪಡಿಸಲಾಗಿದೆ. ಕನಿಷ್ಠ ವಹಿವಾಟು ಮಾನದಂಡ ನಿಗದಿಪಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಅದನ್ನು ಅಸಮರ್ಥನೀಯ ಎಂದು ಕರೆಯುವುದು ಸರಿಯಲ್ಲ. ಗುಣಮಟ್ಟದ ಸೇವೆಯನ್ನು ಖಾತರಿಪಡಿಸಲು ಇದು ಅಗತ್ಯವಾಗಿದೆ ಎಂದು ವಾದಿಸಿದ್ದರು.
ಲೂಮನ್ ಇಂಡಸ್ಟ್ರೀಸ್ ಪರ ವಾದಿಸಿದ ವಕೀಲರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (ಕೆಕೆಆರ್ಟಿಸಿ) ಸಂಸ್ಥೆ ಇದೇ ರೀತಿಯ ಬಿಡಿಭಾಗಗಳ ಟೆಂಡರ್ ಅನ್ನು ಯಾವುದೇ ಕನಿಷ್ಠ ವ್ಯವಹಾರ ಮಿತಿ ಇಲ್ಲದೆ ಆಹ್ವಾನಿಸಿತ್ತು. ಅಲ್ಲದೆ, ಬಿಎಂಟಿಸಿ ಕೂಡ ಲೂಮನ್ ಕಂಪನಿಯ ವಸ್ತುಗಳನ್ನು ಟೆಂಡರ್ಗಿಂತ ಮೊದಲು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿದೆ. ಹಾಗಾಗಿ, 3 ವರ್ಷಗಳ ವಹಿವಾಟು ಮಿತಿ 100 ಕೋಟಿ ರೂ. ಇಲ್ಲ ಎಂಬ ಕಾರಣಕ್ಕೆ ಕಂಪನಿಗೆ ಟೆಂಡರ್ನಲ್ಲಿ ಭಾಗವಹಿಸಲು ನಿರಾಕರಿಸುವುದು ಸರಿಯಲ್ಲ ಎಂದು ಆಕ್ಷೇಪಣೆ ಸಲ್ಲಿಸಿದರು.
ಒಪ್ಪಂದ ರದ್ದುಪಡಿಸಿದ್ದ ಕೆಕೆಆರ್ಟಿಸಿ
ಕೆಕೆಆರ್ಟಿಸಿ ಟೆಂಡರ್ನಲ್ಲಿ ಭಾಗವಹಿಸಲು ಯಾವುದೇ ವಹಿವಾಟು ಮಿತಿ ಹೇರಿರಲಿಲ್ಲ ಎಂದಿದ್ದ ಲೂಮನ್ ಇಂಡಸ್ಟ್ರೀಸ್ ವಾದಕ್ಕೆ ಪ್ರತಿಕ್ರಿಯಿಸಿದ್ದ ಬಿಎಂಟಿಸಿ, ಕೆಕೆಆರ್ಟಿಸಿ ಯಾವುದೇ ಮಿತಿ ಹೇರಿರಲಿಲ್ಲ. ಆದರೆ, ಕಂಪನಿಗಳು ಪೂರೈಸಿದ ಕಡಿಮೆ ಗುಣಮಟ್ಟದ ವಸ್ತುಗಳಿಂದಾಗಿ ಆ ಒಪ್ಪಂದವನ್ನು ರದ್ದು ಪಡಿಸಲಾಗಿತ್ತು ಎಂದು ಹೈಕೋರ್ಟ್ಗೆ ಮಾಹಿತಿ ನೀಡಿತ್ತು.