ನವಜಾತ ಶಿಶು ತಪಾಸಣೆ ಯೋಜನೆ’  
ರಾಜ್ಯ

ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆಗೆ ಒಪ್ಪಿಗೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * 5.58 ಕೋಟಿ ರೂ. ಅನುದಾನ
ಬೆಂಗಳೂರು: ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಮೂಲಕ ಶಿಶುಗಳ ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥತೆ ತಪಾಸಣೆಯನ್ನುಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) 5.58 ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ನವಜಾತ ಶಿಶುಗಳಲ್ಲಿ ಹೈಪೋಥೈರಾಯ್ಡಿಸಮ್, ಜನ್ಮಜಾತ ಅಡ್ರಿನಲ್ ಹೈಪೋಪ್ಲಾರ್ಸಿಯಾ, ಗ್ಯಾಲಕ್ಟೋಸಿಮೀಯಾ, ಫಿನೆಲ್ಕೆಟೋನೊರಿಯಾ ಮತ್ತು ಗ್ಲುಕೋಸ್-6 ಫಾಸ್ಟೆಟ್ ಡಿಹೈಡ್ರೊಜಿನಿಸ್ ಸೇರಿ ಐದು ಚಯಾಪಚಯ ಅಸ್ವಸ್ಥತೆ ತಪಾಸಣೆಗೆ ಈ ಯೋಜನೆ ಜಾರಿಗೊಂಡಿದೆ. ಈಗಾಗಲೇ ಗಣಿಬಾಧಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನದಡಿ ತಪಾಸಣೆಗೆ ಅನುಮೋದನೆ ನೀಡಲಾಗಿದೆ.
ಇದೀಗ ಕೆಕೆಆರ್‌ಡಿಬಿ ಅಡಿಯ ಪ್ರದೇಶಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ (ಗಣಿಭಾದಿತ ಪ್ರದೇಶ ಹೊರತುಪಡಿಸಿ) ನವಜಾತ ಶಿಶುಗಳಲ್ಲಿ ಈ ತಪಾಸಣೆ ನಡೆಸಲು ಒಪ್ಪಿಗೆ ನೀಡಲಾಗಿದೆ. ಈ ಜಿಲ್ಲೆಗಳ ಆರೋಗ್ಯ ಸಂಸ್ಥೆಗಳಲ್ಲಿ ಅಪರೂಪದ ಚಯಾಪಚಯ ಅಸ್ವಸ್ಥತೆ ಪತ್ತೆಹಚ್ಚಲು ವೈದ್ಯಕೀಯ ಉಪಕರಣಗಳ ಕೊರತೆ ಕಂಡುಬಂದಲ್ಲಿ ಸರ್ವೇ ನಡೆಸಿ ಒದಗಿಸಲಾದ ಅನುದಾನದ ಮಿತಿಯೊಳಗೆ ಪೂರೈಲು ಪ್ರಾಧಿಕಾರದ ಅನುಮೋದನೆ ಪಡೆಯಬೇಕು. ಆರೋಗ್ಯ ಸಿಬ್ಬಂದಿಗೆ ಈ ತಪಾಸಣೆ ಸಂಬಂಧ ತರಬೇತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.