ಚನ್ನರಾಯಪಟ್ಟಣದಲ್ಲಿ ಐಕ್ಯತಾ ಸಮಾವೇಶದ ಭಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಡಿ.ಶಿವಶಂಕರ, ಡಾ.ಎಸ್.ವಿಜಯಕುಮಾರ್, ಆರ್.ಮೋಹನ್, ಕೆಂಪ ಸಿದ್ದಯ್ಯ, ಜಲೇಂದ್ರ, ಸಂತೋಷ್‌ಕುಮಾರ್, ವೆಂಕಟೇಶ್ ಇತರರಿದ್ದರು.
- ಪರಿಶಿಷ್ಟ ಜಾತಿ-ಪಂಗಡಗಳ ಜಾಗೃತ ನೌಕರರ ರಾಜ್ಯಮಟ್ಟದ 6ನೇ ಐಕ್ಯತಾ ಸಮಾವೇಶ
- ಆ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ
ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಕೇಂದ್ರ ಸಮಿತಿಯಿಂದ ಪರಿಶಿಷ್ಟ ಜಾತಿ-ಪಂಗಡಗಳ ಜಾಗೃತ ನೌಕರರ ರಾಜ್ಯಮಟ್ಟದ 6ನೇ ಐಕ್ಯತಾ ಸಮಾವೇಶವನ್ನು ಆ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಎಸ್ಪಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ ಹೇಳಿದರು.
ಸಮಾವೇಶದ ಭಿತ್ತಿ ಪತ್ರಗಳನ್ನು ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳೊಂದಿಗೆ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದು, ಕಂದಾಯ ಮಂತ್ರಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಕ್ಯೂಚಿ ಭಾಷಣ ಮಾಡಲಿದ್ದಾರೆ. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿ ದ್ದಾರೆ. ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಶಾಸಕರು ಹಾಗೂ ಸಚಿವರನ್ನು ಅಭಿನಂದಿಸಲಾಗುವುದು ಎಂದರು.
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆಸಿದ ಹೋರಾಟ ಐತಿಹಾಸಿಕ. ಅದರ ಫಲವಾಗಿ ಎಲ್ಲಿಯೂ ಇಲ್ಲದ ಬಡ್ತಿ ಮೀಸಲಾತಿ ಕರ್ನಾಟಕದಲ್ಲಿದೆ. ಇದು ಸಮನ್ವಯ ಸಮಿತಿಯ ಮೈಲಿಗಲ್ಲು. ಉದ್ಯೋಗ ಮತ್ತು ಶೈಕ್ಷಣಿಕವಾಗಿ ರಾಜ್ಯ ಸರ್ಕಾರ ನೀಡಿರುವ ಒಳ ಮೀಸಲಾತಿ ಕುರಿತ ಎನ್‌ಪಿಎಸ್ ಅನ್ನು ಹಿಂಪಡೆದು ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ ಮಾಡಬೇಕು. ಅಲ್ಲದೆ ಸೇವಾ ವಲಯದಲ್ಲಿ ಮೀಸಲಾತಿ ಸೌಲಭ್ಯ ಅನುಷ್ಠಾನಗೊಳಿಸುವಂತೆ, ಸರ್ಕಾರವನ್ನು ಒತಾಯಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬುವುದು, ಬ್ಯಾಕಲಾಗ್ ಹುದ್ದೆ ಭರ್ತಿ ಮಾಡುವುದು, ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯಗಳ ಕುರಿತು ಗಮನ ಸೆಳೆಯಲಾಗುವುದು.ಸಮಾವೇಶದ ಅಂಗವಾಗಿ ಸ್ಮರಣ ಸಂಚಿಕೆಯನ್ನೂ ಸಹ ಹೊರ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್, ಹಿರಿಯ ಉಪಾಧ್ಯಕ್ಷರಾದ ಆರ್.ಮೋಹನ್, ಕೆಂಪ ಸಿದ್ದಯ್ಯ, ತಾಲೂಕು ಅಧ್ಯಕ್ಷ ಜಲೇಂದ್ರ, ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಸಹಕಾರ್ಯದರ್ಶಿ ಸತೀಶ್, ಉಪಾಧ್ಯಕ್ಷ ಪುಟ್ಟರಾಜು ಸುದ್ದಿಗೋಷ್ಠಿಯಲ್ಲಿದ್ದರು.