ಮಹಾಂತೇಶ ಕವಟಗಿಮಠ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಸನ್ಮಾನಿಸಿದರು. 
ರಾಜ್ಯ

ಸಂಘಟಿತರಾಗಿ ಬರ ಪರಿಸ್ಥಿತಿ ಎದುರಿಸಿ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಹಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳೆಲ್ಲ ಸೇರಿ ಸಂಘಟಿತವಾಗಿ ಎದುರಿಸಬೇಕಿರುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮನವಿ ಸಲ್ಲಿಸಿದ್ದಾರೆ.
ಈಚೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರನ್ನು ಭೇಟಿಯಾದ ಮಹಾಂತೇಶ ಕವಟಗಿಮಠ, ಕೆಎಲ್‌ಇ ಸಂಸ್ಥೆ ವತಿಯಿಂದ ಸತ್ಕರಿಸಿದರು. ಉತ್ತರ ಕರ್ನಾಟಕದಲ್ಲಿ ಅದರಲ್ಲೂ, ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದೆ. ಜಲಾಶಯಗಳು ಖಾಲಿ ಆಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ.
ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಮತ್ತು ಬೆಳೆ ನಷ್ಟ್ಟದಂತಹ ಸಮಸ್ಯೆ ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಿದರು.
ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರದ ಪರಿಹಾರ ಕಾರ್ಯಗಳಿಗೆ ಜನರ ಸಕ್ರಿಯ ಸಹಭಾಗಿತ್ವ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು, ಸಕ್ಕರೆ ಕಾರ್ಖಾನೆ, ಸಹಕಾರ ಸಂಘಗಳು ಮತ್ತು ಎನ್‌ಜಿಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ತಕ್ಷಣ ನೆರವು ಒದಗಿಸಿ, ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕು.
ಕಬ್ಬು ಬೆಳೆಗೆ ಡೊಣ್ಣೆಹುಳು ರೋಗದ ಹಾವಳಿ ಹೆಚ್ಚಾಗಿದ್ದು, ಅದನ್ನು ಹತೋಟಿಯಲ್ಲಿ ತರಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸಮಸ್ಯೆ ಪರಿಹರಿಸಲು ಸರ್ಕಾರ ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದರು.