ರಾಮನಗರಂ ರೈಲು ನಿಲ್ದಾಣವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣನವರು ಪರಿಶೀಲಿಸಿದರು.
ರಾಮನಗರ: ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ನವೀಕರಣಗೊಳ್ಳುತ್ತಿರುವ ರಾಮನಗರಂ ರೈಲು ನಿಲ್ದಾಣವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ (V.Somanna) ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರು-ರಾಮನಗರ ಪ್ರದೇಶವು ತ್ವರಿತ ಬೆಳವಣಿಗೆಯನ್ನು ಕಾಣುತ್ತಿದ್ದು, ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ರೈಲ್ವೆ ಮೂಲಸೌಕರ್ಯವನ್ನು ನವೀಕರಿಸಲಾಗುತ್ತಿದೆ ಎಂದರು.
ಅಂದಾಜು 20.96 ಕೋಟಿ ರೂ. ವೆಚ್ಚದಲ್ಲಿ ರಾಮನಗರಂ ರೈಲು ನಿಲ್ದಾಣದ ಆಧುನೀಕರಣಗೊಳ್ಳುತ್ತಿದ್ದು, ಇದರಲ್ಲಿ ನಿಲ್ದಾಣದ ಸಂಚಾರ ಪ್ರದೇಶದ ನವೀಕರಣ, ಹೊಸ ಪಾದಚಾರಿ ಮೇಲ್ಸೇತುವೆ, ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು ಮತ್ತು ನಿರೀಕ್ಷಣಾ ಕೊಠಡಿ, ಹೆಚ್ಚುವರಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಮೂರು ಲಿಫ್ಟ್‌ಗಳು ಮತ್ತು ಒಂದು ಎಸ್ಕಲೇಟರ್ ಮತ್ತು ಹೊಸ ಶೌಚಾಲಯ ನಿರ್ಮಾಣವು ಸೇರಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯು ಅಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಕಟ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಮು ರೈಲು ಸೇವೆಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿವೆ. ಹಾಗೆಯೇ ದೇಶಾದ್ಯಂತದ ಎಲ್ಲಾ ರಸ್ತೆ ಕೆಳ ಸೇತುವೆಗಳು ಮತ್ತು ರಸ್ತೆ ಮೇಲ್ಸೇತುವೆಗಳ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಲಿದೆ ಎಂದರು.