ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬೆಂಗಳೂರು: ಇಂದು(ಫೆ. 01) ಮಂಡನೆಯಾದ 2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಎಂಎಸ್‌ಎಂಇ ಕೇಂದ್ರೀಕೃತ ಕ್ರಮಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಸ್ವಾಗತಿಸಿದ್ದು, ಈ ಕ್ರಮ ಜಾರಿಯಾದ್ರೆ ರಾಜ್ಯಾದ್ಯಂತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್‌ಎಂಇಗಳು) ವೃದ್ಧಿಗೆ ಬಲವಾದ ಬೆಂಬಲ ನೀಡಲಿವೆ ಎಂದು ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಫ್ಕೆಸಿಸಿಐ, ಪ್ರಸ್ತುತ ಎಂಎಸ್‌ಎಂಇಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಸಾಲ ಲಭ್ಯತೆ, ಪಾವತಿ ವಿಳಂಬ ಹಾಗೂ ಜಟಿಲ ಅನುಸರಣೆ ಪ್ರಕ್ರಿಯೆಗಳನ್ನು ಬಜೆಟ್ ಸಮರ್ಥವಾಗಿ ಪರಿಹರಿಸಿದೆ ಎಂದು ಅಭಿಪ್ರಾಯಪಟ್ಟಿದೆ. ₹10,000 ಕೋಟಿ ಮೌಲ್ಯದ SME ಗ್ರೋಥ್ ಫಂಡ್, ಬಲಪಡಿಸಿದ ಕ್ರೆಡಿಟ್ ಗ್ಯಾರಂಟಿ ಬೆಂಬಲ, CPSE ಗಳಿಂದ ಪಾವತಿಗಳಿಗೆ TReDS ಕಡ್ಡಾಯ ಬಳಕೆ, ಹಾಗೂ ಸುಲಭ ಇನ್ವಾಯ್ಸ್ ಫೈನಾನ್ಸಿಂಗ್ ಕ್ರಮಗಳು ಸಣ್ಣ ಉದ್ಯಮಗಳ ನಗದು ಪ್ರವಾಹ ಮತ್ತು ಹಣಕಾಸು ಸ್ಥಿರತೆಯನ್ನು ಸುಧಾರಿಸಲಿವೆ ಎಂದು ಹೇಳಿದೆ.
ಜೊತೆಗೆ ಉತ್ಪಾದನೆ, ಐಟಿ ಮತ್ತು ಐಟಿ ಆಧಾರಿತ ಸೇವೆಗಳು, ಸ್ಟಾರ್ಟ್‌ಅಪ್‌ಗಳು, ರಫ್ತು ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿನ ದೊಡ್ಡ ಪ್ರಮಾಣದ ಎಂಎಸ್‌ಎಂಇಗಳನ್ನು ಹೊಂದಿರುವ ಕರ್ನಾಟಕಕ್ಕೆ, ಸರಳೀಕೃತ ಅನುಸರಣೆ ವ್ಯವಸ್ಥೆ, ನಂಬಿಕಾಧಾರಿತ ಆಡಳಿತ ಮತ್ತು ಕಾರ್ಪೊರೇಟ್ ಮಿತ್ರ (Corporate Mitra) ರೂಪರೇಖೆಯಡಿ ಕೈಗೆಟುಕುವ ವೃತ್ತಿಪರ ಬೆಂಬಲವು ವಿಶೇಷವಾಗಿ ಉಪಯುಕ್ತವಾಗಲಿದೆ ಎಂದು ತಿಳಿಸಿದೆ.
ಹಾಗೆಯೇ ಹಳೆಯ ಕೈಗಾರಿಕಾ ಕ್ಲಸ್ಟರ್‌ಗಳ ಪುನಶ್ಚೇತನ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಗೆ ಬೆಂಬಲ, ಹಾಗೂ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ವಿಸ್ತರಣೆಯನ್ನು ಸ್ವಾಗತಿಸಿದ್ದು, ಈ ಕ್ರಮ ಕರ್ನಾಟಕದ ಎಂಎಸ್‌ಎಂಇಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ, ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಭಾರತ ವಿಸ್ತಾರ್ ಯೋಜನೆಯ ತೆಂಗು, ಕಾಯಿ ಮತ್ತು ಶ್ರೀಗಂಧದಂತಹ ಸಾಂಪ್ರದಾಯಿಕ ಹಾಗೂ ಕೃಷಿ ಆಧಾರಿತ ಎಂಎಸ್‌ಎಂಇಗಳಿಗೆ ಮಹತ್ವದ ಲಾಭವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟಿದೆ.
ಕೇಂದ್ರ ಬಜೆಟ್ 2026-27ರಲ್ಲಿ ಘೋಷಿಸಲಾದ SHE ಯೋಜನೆ ಮಹಿಳಾ ನೇತೃತ್ವದ ಉದ್ಯಮಗಳನ್ನು ಬಲಪಡಿಸಲು ಮಾರುಕಟ್ಟೆ ಪ್ರವೇಶ, ಉದ್ಯಮ ಮಾಲೀಕತ್ವ ಮತ್ತು ಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ ಧನಾತ್ಮಕ ಕ್ರಮವಾಗಿದೆ. ಜೊತೆಗೆ, ಜಿಲ್ಲಾಮಟ್ಟದಲ್ಲಿ ಬಾಲಕಿಯರ ವಸತಿ ಗೃಹ(Girls Hostel) ಸ್ಥಾಪನೆ ಪ್ರಸ್ತಾವನೆ ಶ್ಲಾಘನೀಯ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಎಫ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಕೇಂದ್ರ ಬಜೆಟ್ 2026–27 ಎಂಎಸ್‌ಎಂಇಗಳ ಮಹತ್ವವನ್ನು ಸ್ಪಷ್ಟವಾಗಿ ಗುರುತಿಸಿದೆ. ಕರ್ನಾಟಕದಲ್ಲಿ ಈ ಕ್ರಮಗಳನ್ನು ಸರಿಯಾದ ಸಮಯದಲ್ಲಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ, ಎಂಎಸ್‌ಎಂಇಗಳ ವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಆರ್ಥಿಕತೆಯ ಬಲವರ್ಧನೆಗೆ ಮಹತ್ವದ ಸಹಕಾರ ದೊರೆಯಲಿದೆ ಎಂದಿದ್ದಾರೆ.